X

ಜ್ಞಾನ ದೇವತೆಯ ದೇಗುಲ ಶೃಂಗೇರಿ  ಶಾರದಾ ಪೀಠ

    Categories: sringeri

ಶೃಂಗೇರಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ, ಮಲೆನಾಡಿನ ತಪ್ಪಲಲ್ಲಿರುವ  ಒಂದು ಪುಟ್ಟ ಪಟ್ಟಣ. ಶ್ರೀ ಶಾರದಾಂಬೆಯ ದೇಗುಲಕ್ಕೆ ಹೆಸರುವಾಸಿಯಾಗಿರುವ ಈ ಪಟ್ಟಣವು ಕರ್ನಾಟಕದ ಪವಿತ್ರ ನದಿ ತುಂಗಾ ನದಿಯ ದಡದಲ್ಲಿದೆ.  ಶೃಂಗೇರಿ ಕರ್ನಾಟಕದ ಪ್ರಮುಖ ನಗರಗಳಾಗಿರುವ  ಮಂಗಳೂರಿನಿಂದ 107 ಕಿಮೀ ಮತ್ತು ಬೆಂಗಳೂರಿನಿಂದ 336 ಕಿಮೀ ದೂರದಲ್ಲಿದೆ. ಮಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಈ ಪಟ್ಟಣವನ್ನು  ಸುಲಭವಾಗಿ ತಲುಪಬಹುದು.  ಬೆಂಗಳೂರಿನಿಂದ ಹಾಸನ ಅಥವಾ ಶಿವಮೊಗ್ಗ ಮೂಲಕ ಇಲ್ಲಿಗೆ ತಲುಪಬಹುದು. 

The combined view of both the Sri Sharadamba Temple (on the right) and the Sri Vidyashankara Temple inside the Sringeri Sharada Peeta complex. Image Courtesy: Ashok666

ಶ್ರೀ ಶಾರದಾಂಬಾ ಮತ್ತು ವಿದ್ಯಾಶಂಕರ ದೇವಸ್ಥಾನ, ಶೃಂಗೇರಿ (ಶೃಂಗೇರಿ ಶಾರದಾ ಪೀಠದ ಸಂಕೀರ್ಣದ ಒಳಗೆ ಶ್ರೀ ಶಾರದಾಂಬಾ ದೇವಸ್ಥಾನ (ಬಲಭಾಗದಲ್ಲಿ) ಮತ್ತು ಶ್ರೀ ವಿದ್ಯಾಶಂಕರ ದೇವಸ್ಥಾನ ಎರಡೂ ಸ್ಥಾಪಿಸಲಾಗಿದೆ)

ಚಿತ್ರ ಕೃಪೆ: ಅಶೋಕ್ ೬೬೬

ಸನಾತನ ಧರ್ಮವನ್ನು ಒಗ್ಗೂಡಿಸಲು ಮತ್ತು ಅದೈತ ಸಿದ್ಧಾಂತವನ್ನು ಪ್ರತಿಪಾದಿಸಲು ಆದಿ ಶಂಕರಾಚಾರ್ಯರು   ಸ್ಥಾಪಿಸಿದ ಮೊದಲ ಮಠ ಈ ಶೃಂಗೇರಿಯ ಶಾರದಾ ವಿದ್ಯಾ ಪೀಠ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಮೊದಲನೆಯದು ಶೃಂಗೇರಿಯ ಶ್ರೀ ಶಾರದಾ ವಿದ್ಯಾಪೀಠ.  ಪಶ್ಚಿಮ ಘಟ್ಟಗಳ ಮಧ್ಯೆ ಇರುವ ಶೃಂಗೇರಿಗೆ  ಈ ಹೆಸರು ಋಷ್ಯಶೃಂಗ  ಪರ್ವತದಿಂದಾಗಿ ಬಂದಿದೆ.  ಈ ಪರ್ವತದಲ್ಲಿ ಋಷ್ಯಶೃಂಗ ಎಂಬ ಮುನಿ ವಾಸಿಸುತ್ತಿದ್ದ ಎಂಬ ಪ್ರತೀತಿಯೂ ಇದೆ.  ಪೀಠವನ್ನು ಸ್ಥಾಪಿಸಲು ಶಂಕರಾಚಾರ್ಯರು ಸೂಕ್ತ ಸ್ಥಳವನ್ನು ಹುಡುಕುತ್ತಾ ಪಯಣಿಸುತ್ತಿರುವಾಗ ತುಂಗಾ ನದಿಯ ದಡದಲ್ಲಿ ಅವರಿಗೆ ಒಂದು ವಿಸ್ಮಯವು ಗೋಚರಿಸುತ್ತದೆ.  

ಆ ಬಿರುಬಿಸಿಲಿನ ಮಧ್ಯಾಹ್ನ ಕಪ್ಪೆಯೊಂದು ಹೆರಿಗೆ ನೋವಿನಿಂದ ನರಳುತ್ತಿರುತ್ತದೆ.  ಹೆರಿಗೆ ಬೇನೆಯಿಂದ ಸಂಕಟಪಡುತ್ತಿದ್ದ  ಈ  ಕಪ್ಪೆಗೆ ಹಾವೊಂದು ಹೆಡೆ ಎತ್ತಿ  ಬಿಸಿಲಿನಿಂದ  ರಕ್ಷಿಸಿ ನೆರಳು ನೀಡುತ್ತಿರುತ್ತದೆ.  ಶಂಕರಾಚಾರ್ಯರನ್ನು  ಈ ದೃಶ್ಯ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.  ಜನ್ಮ ಜನ್ಮಗಳಲ್ಲೂ  ಬಿದ್ದ ವೈರಿಗಳಾಗಿರುವ ಪ್ರಾಣಿಗಳು ಒಂದಕ್ಕೊಂದು ಸಹಾಯ ಮಾಡುತ್ತಿರುವ ಈ ಸ್ಥಳ ಪುಣ್ಯ ಸ್ಥಳವೇ ಸರಿ ಎಂದು ಶಂಕರರು ನಿರ್ಧರಿಸುತ್ತಾರೆ. ಬದ್ಧ ವೈರಿಗಳೂ ತಮ್ಮ ವೈರತ್ವ ಮರೆತು ಮಾನವೀಯತೆ ತೋರುತ್ತಿರುವ ಈ ಸ್ಥಳದ ಮಹಿಮೆ ಅಪಾರ ಎಂದು ಗ್ರಹಿಸಿದ ಶಂಕರರು ಇಲ್ಲಿಯೇ ಶಾರದಾ ಪೀಠವನ್ನು ಸ್ಥಾಪಿಸಲು ನಿರ್ಧರಿಸುತ್ತಾರೆ. (ಹಾವು ಮತ್ತು ಕಪ್ಪೆಗಳು ಒಂದಕ್ಕೊಂದು ಸಹಾಯ ಮಾಡಿದ ಸ್ಥಳವನ್ನು ಇಂದಿಗೂ ಶೃಂಗೇರಿಯಲ್ಲಿ ನೋಡಬಹುದು. ಆ ಸ್ಥಳದಲ್ಲಿ ಕಪ್ಪೆ ಮತ್ತು ಹಾವಿನ ಕಲ್ಲಿನ ಶಿಲ್ಪವನ್ನು ನೋಡಬಹುದು)

ಶೃಂಗೇರಿ ಶಾರದಾ ಪೀಠ

ಶೃಂಗೇರಿ ಶಾರದಾ ಪೀಠ ಎಂದೇ ಕರೆಯಲಾಗುವ ಈ ಸ್ಥಳ 1200 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಹೊಂದಿದೆ. ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರಿಗೆ ತಂಗಲು ಮತ್ತು ವಿದ್ಯಾಭ್ಯಾಸಕ್ಕಾಗಿ ಈ ಸ್ಥಳವನ್ನು ಆರಿಸಿಕೊಂಡರು . ಈ ಸ್ಥಳದಿಂದ ಸಾಕಷ್ಟು ಪ್ರಭಾವಿತರಾಗಿದ್ದ ಶಂಕರಾಚಾರ್ಯರು  ಹನ್ನೆರಡು ವರ್ಷಗಳ ಕಾಲ ಇಲ್ಲಿಯೇ ತಂಗಿದ್ದರು. ನಂತರ ಅವರು ಉತ್ತರ ಭಾರತ, ಪೂರ್ವ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಮಠಗಳನ್ನು ಸ್ಥಾಪಿಸಿದರು. ಹೀಗೆ ಆದಿ ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದೇವಾಲಯಗಳನ್ನು ನಿರ್ಮಿಸಿದ್ದಾರೆ . ಅವುಗಳು ಉತ್ತರದಲ್ಲಿ ಬದರಿಕಾಶ್ರಮ ಜ್ಯೋತಿರ್ಪೀಠ, ಪಶ್ಚಿಮದಲ್ಲಿ ದ್ವಾರಕಾ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ ಹಾಗು ದಕ್ಷಿಣದಲ್ಲಿ ಶೃಂಗೇರಿ ಶಾರದಾ ಪೀಠವಾಗಿ ಪ್ರಸಿದ್ಧಿ ಪಡೆದಿದೆ. 

ಇಂದಿಗೂ ಮೊದಲ ಪೀಠ ಆರನೇ ಶತಮಾನದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳುವ  ಅಂದಿನ ಕಾಶ್ಮೀರ ಹಾಗು ಇಂದಿನ  ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಶಾರದಾ ಪೀಠ. ಶಂಕರಾಚಾರ್ಯರು ಇಲ್ಲಿ ಭೇಟಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ. ಶೃಂಗೇರಿ ಮಠ ಈ ನೂತನ ಮಠಕ್ಕೆ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪನೆಗೆ ನೀಡಲಿದೆ. 

ಶೃಂಗೇರಿ ದೇವಾಲಯದ ನಾಲ್ಕು ದಿಕ್ಕುಗಳಲ್ಲಿಯೂ ದೇಗುಲಗಳಿದ್ದು ಅವುಗಳಲ್ಲಿ ಪಶ್ಚಿಮದಲ್ಲಿ ಕೆರೆ ಆಂಜನೇಯ ದೇವಾಲಯ, ಪೂರ್ವದಲ್ಲಿ ಕಾಲ ಭೈರವ ದೇವಾಲಯ, ದಕ್ಷಿಣದಲ್ಲಿ ದುರ್ಗಾಂಬಾ ದೇವಾಲಯ ಮತ್ತು ಉತ್ತರದಲ್ಲಿ ಕಾಳಿಕಾಂಬಾ ದೇವಾಲಯ ಸೇರಿವೆ.

ವಿದ್ಯಾಶಂಕರ ದೇವಾಲಯ, ಚಿತ್ರ ಕೃಪೆ: ಕಾಲ್ವಿನ್ಕ್ರಿಷಿ, Vidyashankara Temple, Sringeri

ಭೇಟಿ ನೀಡಲೇಬೇಕಾದ ದೇವಾಲಯಗಳು

ಶೃಂಗೇರಿಯಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ದೇವಾಲಯಗಳು ದೊಡ್ಡ ಸಂಖ್ಯೆಯಲ್ಲಿವೆ.  ಅವುಗಳಲ್ಲಿ ಶ್ರೀ ಶಾರದಾಂಬಾ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇವಸ್ಥಾನ ಹಾಗೂ ಪಾರ್ಶ್ವನಾಥ ಜೈನ ದೇವಸ್ಥಾನಗಳು ಬಹಳ ಮುಖ್ಯವಾದವು. ದೇವಾಲಯದ ಪ್ರವೇಶದ್ವಾರದಲ್ಲಿ, ದ್ರಾವಿಡ, ವಿಜಯನಗರ ಮತ್ತು ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸುಂದರವಾದ ವಿದ್ಯಾಶಂಕರ ದೇವಾಲಯವನ್ನು ನೋಡಬಹುದು. ಸ್ವತಃ ಶಿವನೇ ಆದಿ ಶಂಕರಾಚಾರ್ಯರಿಗೆ ನೀಡಿದ ಎಂದು ಹೇಳಲಾಗುವ ಸ್ಪಟಿಕದ ಚಂದ್ರಮೌಳೀಶ್ವರ ಲಿಂಗವನ್ನೂ ಇಲ್ಲಿ ಪೂಜಿಸಲಾಗುತ್ತದೆ.

ವಿದ್ಯಾಶಂಕರ  ದೇಗುಲದ ವಾಸ್ತುಶಿಲ್ಪ ರಚನೆಲ್ಲಿ ಹೊಯ್ಸಳ ವಾಸ್ತುಶಿಲ್ಪವನ್ನು ಹೋಲುತ್ತಿದೆ ಎನಿಸಿದರೂ ಇದು ಆ ರನೆಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಎರಡು ತುದಿಗಳಲ್ಲಿ ವೃತ್ತಾಕಾರಗಳನ್ನು  ಮಧ್ಯದಲ್ಲಿ ಎರಡು ರೇಖೆಗಳ ಮೂಲಕ ಸೇರಿಸಲ್ಪಟ್ಟಂತೆ ಗೋಚರವಾಗುವ ದೇಗುಲ ಆದಿಸ್ಥಾನದಲ್ಲಿ, ಛಾವಣಿ, ಮತ್ತು ಗೋಪುರಗಳಲ್ಲಿ ವಿವಿಧ ಪದರಗಳುಳ್ಳ ಅಂಚನ್ನು ಹೊಂದಿದೆ.  ಆದಿ ಸ್ಥಾನದಿಂದ ಗೋಡೆಯನ್ನು ಸಂಪರ್ಕಿಸುವ ಭಾಗದ ಮಧ್ಯದಲ್ಲಿ ಅಲಂಕಾರಿಕ ಕೆತ್ತನೆಗಳಿವೆ. ಗೋಡೆಯುದ್ದಕ್ಕೂ ಮಿನಿಯೇಚರ್‌ ಮಾದರಿಯ ಕಂಬಗಳು ಹಾಗು ಸುಂದರ ಶಿಲ್ಪ ಕಲಾಕೃತಿಗಳ ಕೆತ್ತನೆಯನ್ನು ಕಾಣಬಹುದು. 

ಛಾವಣಿಯ ಮೇಲ್ಭಾಗದಲ್ಲಿ ಎಂದರೆ ಗೋಪುರದ ಮಾದರಿಯಲ್ಲಿ ಕೆಳಭಾಗದ ಮಾದರಿಯನ್ನೇ ಹೋಲುವ ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಎರಡು ಹಂತದ ಕಟ್ಟಡಗಳಿವೆ. ಅದರ ಮೇಲೆ ಕಲಶವಿದೆ.  ಉಳಿದ ದೇಗುಲಗಳಲ್ಲಿ ಕಾಣಸಿಗುವ ಗೋಪುರದ ಮಾದರಿಗಳಿಗಿಂತ ಇದು ರಚನೆಯಲ್ಲಿ ಭಿನ್ನವಾಗಿದೆ. ಉಳಿದ ದೇಗುಲಗಳಲ್ಲಿ ಗೋಪುರಗಳು ಪಿರಮಿಡ್‌ ಆಕೃತಿಯಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲಿ ಗೋಪುರ ದೇಗುಲದ ಒಂದು ತುದಿಯನ್ನು ಮಾತ್ರ ಅಲಂಕರಿಸಿದೆ.  ಗೋಪುರ ಬಹುಮಹಡಿ ಕಟ್ಟಡದ ಮಿನಿಯೇಚರ್‌ ಎಂಬಂತೆ ಭಾಸವಾಗುತ್ತದೆ. ದೇಗುಲದ ಅಂತರಾಳವನ್ನು ತಲುಪಲು ಹಲವು ದಿಕ್ಕುಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.ಆದರೆ ವಿಜಯನಗರದ ಕಾಲದಲ್ಲಿ ರಚಿತವಾಗಿರಬಹುದೆಂದು ಹೇಳಿದರೂ ಅಲ್ಲಿಯ ರೀತಿಯಲ್ಲಿ ಇಲ್ಲಿ ಮುಖಮಂಟಪಗಳಿಲ್ಲ.

ಅನೇಕ ದೇವಾಲಯಗಳು ಮತ್ತು ಮಠಗಳಿಂದಾಗಿ ಶೃಂಗೇರಿಯು ಕಲಿಕಾ ಕೇಂದ್ರವಾಗಿ ಹೆಸರುವಾಸಿಯಾಗಿದೆ. ವೈದಿಕ ತತ್ವವನ್ನು ಕಲಿಯಲು ಅನೇಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಶೃಂಗೇರಿಯಲ್ಲಿ ವಸತಿಗಾಗಿ ವಿವಿಧ ಆಯ್ಕೆಗಳು ಲಭ್ಯವಿದೆ. ಈ ಮಠದಲ್ಲಿ ಸ್ಮಾರ್ತ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಶೃಂಗೇರಿ ಪಂಚಾಂಗವೂ ಸಾಕಷ್ಟು ಪ್ರಸಿದ್ಧಿ ಹೊಂದಿದೆ. 

ಸಿರಿಮನೆ ಜಲಪಾತ, ಚಿತ್ರ ಕೃಪೆ: ವೈಕೆಲೊವೇರ್ಯ್, Srimane Falls, Sringeri

ಶಾರದಾಂಬ ದೇವಾಲಯ

 ಶಾರದಾ ದೇವಿಯು ಶಾರದಾಂಬ ದೇವಾಲಯದಲ್ಲಿ ದೇವತೆಯಾಗಿ ಕುಳಿತಿದ್ದಾಳೆ. ಅವಳು ಚಕ್ರ ಪೀಠದ ಮೇಲೆ ಕುಳಿತಿದ್ದಾಳೆ ಮತ್ತು ಅವಳ ಕೈಯ ಮೇಲ್ಭಾಗದಲ್ಲಿ ಗಿಳಿ ಜಪ ಮಾಲಾವನ್ನು ಹಿಡಿದಿರುವಂತೆ ಕಾಣುತ್ತದೆ. ಈ ಮಠವು ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಮುಖವಾದ ಯಜುರ್ವೇದವನ್ನು ಅನುಸರಿಸುತ್ತದೆ. ಶ್ರೀಗಂಧದ ಮರದಿಂದ ಮಾಡಿದ ಮೊದಲ ಶಾರದಾ ವಿಗ್ರಹವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಮತ್ತು ನಂತರ ಅದನ್ನು 14 ನೇ ಶತಮಾನದಲ್ಲಿ ವಿಜಯನಗರ ಅರಸರು ಚಿನ್ನದ ವಿಗ್ರಹಕ್ಕೆ ಬದಲಾಯಿಸಿದರು. ಇಲ್ಲಿ  ನವರಾತ್ರಿ ಹಬ್ಬವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶೃಂಗೇರಿಯ ನವರಾತ್ರಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.  ಶುಕ್ರವಾರ ಇಲ್ಲಿ ವಿಶೇಷ ಉತ್ಸವ , ಮೆರವಣಿಗೆ ಪೂಜೆಗಳು ನಡೆಯುತ್ತವೆ. ಹೀಗಾಗಿ ಇಲ್ಲಿ ಶುಕ್ರವಾರದ ಪೂಜೆ ವಿಶೇಷ  ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಸರಸ್ವತಿಯ ಅವತಾರವಾದ ಶಾರದೆಯನ್ನು ಉಭಯ ಭಾರತಿ ಎಂದೂ ಪೂಜಿಸಲಾಗುತ್ತದೆ. ಉಭಯಭಾರತಿಯನ್ನು ಪೂಜಿಸುವ ಮೂಲಕ ಭಕ್ತರು ಬ್ರಹ್ಮ, ವಿಷ್ಣು, ಮಹೇಶ್ವರರ ಕೃಪೆಗೆ ಪಾತ್ರರಾಗಬಹುದು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ.

ವಿಜಯನಗರ ಕಾಲದಲ್ಲಿ ಈ ದೇಗುಲಕ್ಕೆ ರಾಜಾಶ್ರಯ ದೊರೆತು ದೇವಾಲಯಕ್ಕೆ ಪೂಜೆ ಉತ್ಸವಾದಿಗಳಿಗೆ , ದೇವಿಯ ಅಲಂಕಾರಕ್ಕೆ ಹೀಗೆ ಸಾಕಷ್ಟು ಸಂಪತ್ತು ದೇಗುಲವನ್ನು ಆಶ್ರಯಿಸಿ ಬಂತು. ನಂತರ ಮೈಸೂರು ಒಡೆಯರು ವಿಜಯನಗರ ರಾಜರುಗಳ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು. ಇದಕ್ಕೆ ದಾಖಲೆಯಾಗಿ ಪತ್ರ ವ್ಯವಹಾರಗಳು ದೊರೆಯುತ್ತವೆ. ಮುಸ್ಲಿಂ ದೊರೆಗಳೂ ಈ ದೇಗುಲಕ್ಕೆ ನಿರಂತರವಾಗಿ ಕಾಣಿಕೆಗಳನ್ನು ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪರಾವೆಗಳೂ ಇತಿಹಾಸದಲ್ಲಿ ದೊರಕುತ್ತವೆ. ಟಿಪ್ಪು ಸುಲ್ತಾನನಿಂದ ಕೂಡ ಈ ದೇಗುಲವು ಸಾಕಷ್ಟು ಕಾಣಿಕೆಗಳನ್ನು ಪಡೆದಿತ್ತು ಎಂಬುದಕ್ಕೆ ಉದಾಹರಣೆಗಳಿವೆ. ರಾಜಾಶ್ರಯದ ಕೃಪೆ ಈ ದೇಗುಲದ ಮೇಲೆ ಸಾಕಷ್ಟು ಇದ್ದುದರಿಂದ ದೇಗುಲವು ಸಂಪ್ಭರಿತವಾಗಿಯೇ ಇತ್ತು. 

ವಿಜಯನಗರ ಕಾಲದ ರಾಜರುಗಳ ಮೊದಲಿಗೆ ನವರಾತ್ರಿ ಪೂಜೆಯನ್ನು ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು. ನಂತರ ಮೈಸೂರು ಒಡೆಯರ್‌ಗಳು ಇದನ್ನು ಮುಂದುವರಿಸಿದರು ಎಂದು ಹೇಳಲಾಗುತ್ತದೆ. ಅದೇ ರೀತಿ ನವರಾತ್ರಿಯನ್ನು ವೈಭವಯುತವಾಗಿ ಆಚರಿಸುವ ಇನ್ನೊಂದು ಸ್ಥಳ ಶೃಂಗೇರಿ. ಮೈಸೂರಿನ ರಾಜರು ಆಚರಿಸುವ ನವರಾತ್ರಿ ಪೂಜಾ ವಿಧಿ ವಿಧಾನಗಳಿಗೂ ಆಚರಣೆಗಳಗೂ ಹಾಗು ಶೃಂಗೇರಿಯ ಮಠದಲ್ಲಿ ಆಚರಿಸುವ ನವರಾತ್ರಿಗೂ ಸಾಕಷ್ಟು ಸಾಮ್ಯತೆಗಳಿವೆ ಎನ್ನಲಾಗುತ್ತದೆ. 

ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಮಕ್ಕಳಿಗೆ ನಡೆಸುವ  ಅಕ್ಷರಾಭ್ಯಾಸ ಸಾಕಷ್ಟು ಪ್ರಸಿದ್ಧಿ ಪಡೆದಿದೆ.  ಶಾಲೆಗೆ ಸೇರಿಸುವ ವಯಸ್ಸಿನ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿಸುತ್ತಾರೆ. ವಿದ್ಯೆಯ ಅಧಿದೇವತೆ ಶಾರದೆಯ ಆಶಿರ್ವಾದ ಮಕ್ಕಳಿಗೆ ದೊರೆತರೆ ಅವರ ವಿದ್ಯಾಭ್ಯಾಸ ಸುಗಮವಾಗಿ ಸಾಗುತ್ತದೆ ಎಂಬುದು ಹೆತ್ತವರ ನಂಬಿಕೆ. ಹೀಗಾಗಿ ವಿವಿಧೆಡೆಯಿಂದ ಇಲ್ಲಿಗೆ ಜನರು ನವರಾತ್ರಿಯ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ  ಮಾಡಿಸಲೆಂದೇ ಆಗಮಿಸುತ್ತಾರೆ.  

ವಿದ್ಯಾಶಂಕರ ದೇವಾಲಯ: ಇದು ಪ್ರಸಿದ್ಧ ವಿದ್ಯಾತೀರ್ಥ ಲಿಂಗವನ್ನು ಹೊಂದಿದೆ ಮತ್ತು ಇದು ಗುರು ವಿದ್ಯಾಶಂಕರರ ಸ್ಮರಣೆಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಈ ದೇವಾಲಯವನ್ನು 14 ನೇ ಶತಮಾನದಲ್ಲಿ ವಿಜಯನಗರ ಅರಸರ ಸಹಾಯದಿಂದ ನಿರ್ಮಿಸಲಾಯಿತು. ಈ ದೇವಾಲಯವು ಹನ್ನೆರಡು ಸ್ತಂಭಗಳನ್ನು ಹೊಂದಿದೆ, ಇವುಗಳನ್ನು ರಾಶಿಸ್ತಂಭಗಳು (ರಾಶಿಚಕ್ರದ ಕಂಬಗಳು) ಎಂದು ಕರೆಯಲಾಗುತ್ತದೆ. ಎಲ್ಲಾ ಹನ್ನೆರಡು ರಾಶಿಚಕ್ರ ಚಿಹ್ನೆಗಳ ಚಿಹ್ನೆಗಳನ್ನು ಕಂಬಗಳ ಮೇಲೆ ಕೆತ್ತಲಾಗಿದೆ. ಅದರ ವಿನ್ಯಾಸವು ಕೆಲವು ಖಗೋಳ ಪರಿಕಲ್ಪನೆಗಳನ್ನು ಹೊಂದಿದೆ.  ಶಂಕರ ಜಯಂತಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಶೃಂಗೇರಿ ಸಮೀಪದ ಇನ್ನೊಂದು ಪ್ರಸಿದ್ಧ ದೇಗುಲವೆಂದರೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ. ಶೃಂಗೇರಿ ಶಾರದಾಂಬೆಯ ದೇಗುಲ ಪ್ರತಿಷ್ಠಾಪನೆಯ ಸಮಯದಲ್ಲಿಯೇ ಎಂದರೆ ೮ ನೇ ಶತಮಾನದಲ್ಲಿ  ಎರಡೂ ದೇಗುಲಗಳನ್ನು ಜೊತೆಜೊತೆಯಾಗಿಯೇ ಪ್ರತಿಷ್ಠಾಪಿಸಲಾಯಿತು. ಹೊರನಾಡು ಚಿಕ್ಕಮಗಳೂರಿನಿಂದ ೧೦೦ ಕಿಮೀ ದೂರವಿದೆ. ಪಶ್ಚಿಮ ಘಟ್ಟದ ನಿತ್ಯಹರಿದ್ವರ ಕಾಡುಗಳ ನಡುವೆ ಪ್ರಕೃತಿಯ ನಡುವಲ್ಲಿ ಇರುವ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಭದ್ರಾ ನದಿಯ ದಂಡೆಯ ಮೇಲೆ ಇದೆ.

ಸಿರಿಮನೆ ಜಲಪಾತ: ಈ ಜಲಪಾತವು ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಶೃಂಗೇರಿಯಿಂದ ಜಲಪಾತಕ್ಕೆ ವಾಹನಗಳನ್ನು ಸುಲಭವಾಗಿ ಬಾಡಿಗೆಗೆ ಪಡೆಯಬಹುದು.

ಹನುಮನಗುಂಡಿ ಜಲಪಾತ: ಹನುಮನಗುಂಡಿ ಜಲಪಾತವು ಸೂತನಬ್ಬಿ ಜಲಪಾತ ಎಂದು ಪ್ರಸಿದ್ಧವಾಗಿದೆ ಮತ್ತು ಅದು ಶೃಂಗೇರಿ ಮತ್ತು ಹೊರನಾಡು ನಡುವೆ ಇದೆ. ಈ ಜಲಪಾತವು ಪಟ್ಟಣದಿಂದ 36 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಶೋಲಾ ಕಾಡುಗಳಿಗೆ ಹೆಸರುವಾಸಿಯಾದ ರಾಷ್ಟ್ರೀಯ ಅರಣ್ಯದಲ್ಲಿದೆ.

ಕುದುರೆಮುಖ:  ಶೃಂಗೇರಿಯ ಸಮೀಪದಲ್ಲಿಯೇ ಇರುವ ಕುದುರೆಮುಖದ ಗುಡ್ಡಗಳು ಚಾರಣಕ್ಕೆ ಹೆಸರುವಾಸಿ. ಜೊತೆಗೆ ಚಿಕ್ಕಮಗಳೂರಿನಲ್ಲಿಯೂ ಸಾಕಷ್ಟು ಚಾರಣಕ್ಕೆ ಹೇಳಿ ಮಾಡಿಸಿದಂತಹ ಸ್ಥಳಗಳಿವೆ. ಒಟ್ಟಿಗೆ ಅದನ್ನು ನೋಡಿಕೊಂಡು ಬರಬಹುದು. 

ಶೃಂಗೇರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್.

ಹನುಮನಗುಂಡಿ ಜಲಪಾತ, ಚಿತ್ರ ಕೃಪೆ: ವಿನಯ್, Hanumana Gundi Falls, Kudremukh

ಶೃಂಗೇರಿ ತಲುಪುವುದು ಹೇಗೆ

ವಿಮಾನ ಸಂಪರ್ಕ: ಶೃಂಗೇರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ 105 ಕಿಮೀ ದೂರದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಖಾಸಗೀ ವಾಹನಗಳ ಮೂಲಕ ಶೃಂಗೇರಿಯನ್ನು ತಲುಪಬಹುದು. 

ರೈಲು ಸಂಪರ್ಕ : ಶೃಂಗೇರಿಯಿಂದ 95 ಕಿಮೀ ದೂರದಲ್ಲಿರುವ ಶಿವಮೊಗ್ಗ ನಗರವು ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಶೃಂಗೇರಿ ಚಿಕ್ಕಮಗಳೂರಿನಿಂದ 86 ಕಿಮೀ ದೂರದಲ್ಲಿದೆ, ಇಲ್ಲಿನ ಸಮೀಪದ ಕಡೂರಿನ ಮೂಲಕವೂ ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ತಲುಪಬಹುದು.  ಈಗ ಬೆಂಗಳೂರಿನಿಂದ ಚಿಕ್ಕಮಗಳೂರು ನಗರಕ್ಕೆ ನೇರ ರೈಲು ಸೇವೆ ಲಭ್ಯವಿದೆ. 

ರಸ್ತೆ ಸಂಪರ್ಕ : ಮಂಗಳೂರು ಅಥವಾ ಚಿಕ್ಕಮಗಳೂರಿನಿಂದ ಉತ್ತಮ ಸಂಪರ್ಕವಿರುವ ರಸ್ತೆ ಜಾಲದ ಮೂಲಕ ಪಟ್ಟಣವನ್ನು ತಲುಪಬಹುದು. ಉಡುಪಿಯೂ 80 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಹಾಗೂ ಶೃಂಗೇರಿಯಿಂದ ಶಿವಮೊಗ್ಗಕ್ಕೆ ವಿವಿಧ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ.

Jolad Rotti:
Related Post