X

ಕರುನಾಡಿನ ಶಿವರಾತ್ರಿ ಸಂಭ್ರಮ

    Categories: Festivals

ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದು ಶಿವರಾತ್ರಿ.  ಪ್ರತಿ ವರ್ಷ ಶಿಶಿರ ಋತುವಿನ  ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

 ಕರ್ನಾಟಕ ಶಿವನ ದೇಗುಲಗಳಿಗೆ ಪ್ರಸಿದ್ಧ. ಈ ಹಬ್ಬವನ್ನು ಶಿವನ ದೇಗುಲಗಳಲ್ಲಿ ಜಾತಿ- ಮತ- ಪಂಥ ಬೇಧವಿಲ್ಲದೆ ಆಚರಿಸಲಾಗುತ್ತದೆ.  ಈ ಹಬ್ಬದ ಪ್ರಮುಖ ಆಚರಣೆಯೆಂದರೆ ಶಿವನಾಮ ಸ್ಮರಣೆ (ಪಂಚಾಕ್ಷರಿ ಮಂತ್ರ) ಹಾಗು ರಾತ್ರಿ ಜಾಗರಣೆ. ಮರುದಿನ ಪವಿತ್ರ ಸ್ನಾನದೊಂದಿಗೆ ಈ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ.

ಶಿವರಾತ್ರಿ ಆಚರಣೆ ಹಿಂದೆ ಹಲವು ನಂಬಿಕೆಗಳಿವೆ. ಅದರಲ್ಲಿ   ಮುಖ್ಯವಾಗಿ ಇದೆ ದಿನ ಶಿವ ಪಾರ್ವತಿ ಕಲ್ಯಾಣ ನಡೆಯಿತು ಎನ್ನುವ ನಂಬಿಕೆ ಭಕ್ತಾಧಿಗಳದ್ದು. ಇನ್ನೆರಡು ಕಥೆಗಳೆಂದರೆ ಇಂದಿನ ದಿನವೇ   ಸಮುದ್ರ ಮಥನದ ಸಂದರ್ಭದಲ್ಲಿ ವಿಷವನ್ನು ಕುಡಿದು, ಶಿವ ವಿಷಕಂಠನಾಗಿ ಜಗತ್ತನ್ನು ರಕ್ಷಿಸಿದ ಎನ್ನುವ ಪ್ರತೀತಿ ಇದೆ. 

Shiva statue. Image courtesy Indianhilbilly

ಶ್ರೀ ಮಂಜುನಾಥೇಶ್ವರ ದೇವಾಲಯ, ಧರ್ಮಸ್ಥಳ 

ಕರ್ನಾಟಕ ಶಿವನ ದೇಗುಲಗಳಿಗೆ ಪ್ರಸಿದ್ಧ. ಅವುಗಳಲ್ಲಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ರಾಜ್ಯದ ಪ್ರಮುಖ ಶಿವದೇವಸ್ಥಾನಗಳ ಮಾಹಿತಿ ಇಲ್ಲಿದೆ. 

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ… ಕರೆಯುವರೇ ಅವನನ್ನು ಮಂಜುನಾಥ… ಹೀಗೆ ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ನಮ್ಮ ರಾಜ್ಯದ ಪ್ರಮುಖ ಶಿವ ದೇಗುಲವೆಂದರೆ ಶ್ರೀ ಮಂಜುನಾಥ ದೇವಾಲಯ, ಧರ್ಮಸ್ಥಳ. ಇದು ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು ೭೦ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಮಹಾರಾತ್ರಿಯನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. 

ಶಿವ ರಾತ್ರಿಯ ದಿನ, ರಾತ್ರಿ, ಇಲ್ಲಿ ಶಿವನ ಭಜನೆ ಹಾಗು ಜಾಗರಣೆ ನಡೆಯುತ್ತದೆ. ದೇಗುಲದಲ್ಲಿ ವಿಶೇಷ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಇಲ್ಲಿಗೆ ಪ್ರತಿವರ್ಷ ಭಕ್ತಾಧಿಗಳು ಶಿವ ರಾತ್ರಿ ಸಂದರ್ಭದಲ್ಲಿ ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ದೇಗುಲದಿಂದ ಸುಮಾರು ೨ ಕಿಲೋ ಮೀಟರ್ ದೂರದಲ್ಲಿರುವ ನೇತ್ರಾವತಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಬಳಿಕ ಕಾಲ್ನಡಿಗೆಯಲ್ಲೇ ದೇಗುಲಕ್ಕೆ ಆಗಮಿಸಿ, ದೇವರ ದರ್ಶನ ಪಡೆಯುತ್ತಾರೆ. ಸಾವಿರಾರು ಭಕ್ತರು ಇಲ್ಲಿಗೆ ಶಿವ ರಾತ್ರಿ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ 

ಮಲೆ ಮಹದೇಶ್ವರ ದೇಗುಲ, ಎಂ ಎಂ ಹಿಲ್ಸ್ 

ದಕ್ಷಿಣ ಭಾರತದ ಅತಿ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮಳೆ ಮಹದೇಶ್ವರ ದೇವಾಲಯ, ಎಂ ಎಂ ಹಿಲ್ಸ್. ಈ ದೇಗುಲ, ರಾಜ್ಯದ ಅತಿ ಶ್ರೀಮಂತ ದೇವಾಲಯ ಎಂಬ ಗರಿಮೆ ಹೊಂದಿದೆ. 

ಶ್ರೀ ಮಲೆ ಮಹದೇಶ್ವರ ದೇಗುಲ ಚಾಮರಾಜನಗರ ಜಿಲ್ಲೆಯ ಎಂ ಎಂ ಹಿಲ್ಸ್ ಹುಲಿ ರಕ್ಷಿತಾರಣ್ಯದ ಮಧ್ಯದಲ್ಲಿದೆ. ಶಿವರಾತ್ರಿ ಮಹಾರಥೋತ್ಸವ, ದಾಸೋಹ, ದೇವರ ದರ್ಶನ, ಜಾಗರಣೆ ಇಲ್ಲಿ ಪ್ರಸಿದ್ಧ. ಶಿವ ರಾತ್ರಿಯ ಒಂದು ವಾರ ಮುಂಚಿತವಾಗಿಯೇ, ಭಕ್ತಾಧಿಗಳು ಇಲ್ಲಿಗೆ ದಕ್ಷಿಣ ಭಾರತಾದ್ಯಂತದಿಂದ ಕಾಲ್ನಡಿಗೆಯಲ್ಲಿ ಹೊರಡುತ್ತಾರೆ. ಬಂಡೀಪುರ, ನೀಲಗಿರೀಸ್, ಹೀಗೆ ದಟ್ಟ ಕಾನನಗಳನ್ನು ಕ್ರಮಿಸಿ, ಶಿವ ರಾತ್ರಿಯ ದಿನ ಇಲ್ಲಿಗೆ ಆಗಮಿಸಿಸಿ, ಮಾದಪ್ಪನ ದರ್ಶನ ಮಾಡುತ್ತಾರೆ. 

ಈ ಬಾರಿ ಕೋವಿಡ್ ೧೯ ಕಾರಣಕ್ಕೆ ಇಲ್ಲಿ ರಾತ್ರಿ ಜಾಗರಣೆಗೆ ಅವಕಾಶ ನೀಡುತ್ತಿಲ್ಲ. ಆದರೆ, ಆಗಮಿಸುತ್ತಿರುವ ಭಕ್ತಾಧಿಗಳಿಗೆ ಈಗಾಗಲೇ ದಾಸೋಹ ಆರಂಭಗೊಂಡಿದೆ. 

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ

ವಿಶ್ವದಾದ್ಯಂತ ಹರಡಿರುವ ಶಿವನ ಭಕ್ತಾಧಿಗಳ ಪಾಲಿಗೆ ಭೂ ಕೈಲಾಸ ಎಂಬುವಷ್ಟರ ಮಟ್ಟಿಗೆ ಪ್ರಸಿದ್ಧವಾಗಿರುವುದು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯ.  ಇಲ್ಲಿನ ಶಿವಲಿಂಗ ಪರಮೇಶ್ವರನ ಆತ್ಮ ಲಿಂಗ ಎಂಬ ನಂಬಿಕೆ ಇದೆ. ಇಲ್ಲಿ ಭಕ್ತಾಧಿಗಳಿಗೆ ನೇರವಾಗಿ ಆತ್ಮಲಿಂಗ ದರ್ಶನ ಹಾಗು ಪೂಜೆಗೆ ಅವಕಾಶವಿದೆ. ಅರಬಿ ಸಮುದ್ರ ಕಡಲ ತಡಿಯ ಈ ಸುಂದರ ದೇವಾಲಯ ಶಿವರಾತ್ರಿ ಆಚರಣೆಗೆ ಪ್ರಸಿದ್ಧ. ಇಲ್ಲಿ ಶಿವರಾತ್ರಿಯ ಸಂಭ್ರಮ ಒಂದು ವಾರ ಮುಂಚಿತವಾಗಿಯೇ ಆರಂಭಗೊಳ್ಳುತ್ತದೆ. ಶಿವ ರಾತ್ರಿ ಮಹಾ ರಥೋತ್ಸವಕ್ಕೆ ಈ ದೇಗುಲ ಪ್ರಸಿದ್ಧ. ಭಾರತೀಯ ಭಕ್ತರ ಜೊತೆಗೆ, ವಿದೇಶಗಳಲ್ಲಿ ನೆಲೆಸಿರುವ ಶಿವನ ಭಕರು ಕೂಡ ಇಲ್ಲಿಗೆ ಶಿವನ ಆತ್ಮ ಲಿಂಗ ದರ್ಶನಕ್ಕೆ ಆಗಮಿಸುತ್ತಾರೆ. 

Mahashivratri celebrations at The Art of Living International Center, Bangalore. Image courtesy Socialconnectblr

ಶ್ರೀಕಂಠೇಶ್ವ ದೇವಾಲಯ ನಂಜನಗೂಡು 

ದಕ್ಷಿಣ ಭಾರತದ ಇನ್ನೊಂದು ಅತಿ ಪ್ರಮುಖ -ಪ್ರಸಿದ್ಧ ಶಿವನ ದೇವಾಲಯವೆಂದರೆ ಮೈಸೂರಿನಿಂದ ಸುಮಾರು ೨೫ ಕಿಲೋಮೀಟರು ದೂರದಲ್ಲಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ. ಇಲ್ಲಿನ ಆರಾಧ್ಯ ದೈವ ಶ್ರೀಕಂಠೇಶ್ವರನ ಇನ್ನೊಂದು ಹೆಸರು ನಂಜುಂಡೇಶ್ವರ. ಇಲ್ಲಿನ ಶಿವ ದೇವರು, ಎಲ್ಲ ರೀತಿಯ ಅನಾರೋಗ್ಯಗಳನ್ನು ತೊಡೆದು ಹಾಕಿ ಒಳ್ಳೆಯ ಆರೋಗ್ಯ ದಯಪಾಲಿಸುತ್ತಾನೆ ಎಂಬ ನಂಬಿಕೆ ಪರಂಪರಾಗತವಾಗಿ ಬೆಳೆದು ಬಂದಿದೆ.

ಇಲ್ಲಿನ ದೇಗುಲದ ಎದುರು ಪವಿತ್ರ ಕಪಿಲ ನದಿ ಹರಿಯುತ್ತದೆ. ಈ ನದಿಯಲ್ಲಿ ತೀರ್ಥ ಸ್ನಾನ ಮಾಡಿ, ಭಕ್ತರು ದೇಗುಲ ಪ್ರವೇಶಿಸುತ್ತಾರೆ. ಇಲ್ಲಿಂದ ಸಮೀಪದ ವಿಮಾನ ನಿಲ್ದಾಣ (ಮೈಸೂರು) ಕೇವಲ ೧೦ ಕಿಲೋಮೀಟರು ದೂರದಲ್ಲಿದೆ.ಚೆನ್ನೈ, ಹೈದೆರಾಬಾದ್, ಬೆಂಗಳೂರು, ಬೆಳಗಾವಿ, ಗೋವಾ, ಕೊಚ್ಚಿ ನಗರಗಳಿಂದ ಇಲ್ಲಿಗೆ ವಿಮಾನ ಸಂಪರ್ಕವಿದೆ.

ಬಿಲ್ವಪತ್ರೆಯ ಪ್ರಾಮುಖ್ಯತೆ

 ಶಿವನಿಗೆ ಅತಿ ಇಷ್ಟವಾದ ಪುಷ್ಪವೆಂದರೆ, ಬಿಲ್ವಪತ್ರೆ. ಇದು ಎಲ್ಲೆಡೆ ಸಿಗುತ್ತದೆ. ಈ ಬಿಲ್ವಪತ್ರೆಯನ್ನು ಶಿವರಾತ್ರಿಯ ದಿನ ಪಂಚಾಕ್ಷರಿ ಜಪದೊಂದಿಗೆ ಶಿವನಿಗೆ ಸಮರ್ಪಿಸಿದರೆ, ಆತ ಆಶೀರ್ವಾದ ಮಾಡುತ್ತಾನೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಬಿಲ್ವಪತ್ರೆಗೆ ಶಿವರಾತ್ರಿ ಆಚರಣೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. 

Related Readings

Jolad Rotti:
Related Post