X

ಕೇಂದ್ರದ ಮೇಲ್ಛಾವಣಿ ಸೌರ ಯೋಜನೆ:  ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಅತ್ಯಂತ ಅಗ್ಗದ ನವೀಕರಣ ಗೊಳ್ಳಬಹುದಾದ ಶಕ್ತಿ ಮೂಲವೆಂದರೆ ಅದು ಸೌರ ಶಕ್ತಿ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದ ಮನೆ ಮನೆಯನ್ನು ಸೌರ ಶಕ್ತಿಯ ಮೂಲಕ ಬೆಳಗಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಯೇ   ಪಿಎಂ-ಸೂರ್ಯ ಘರ್ಃ ಮುಫ್ತ್‌ ಬಿಜ್ಲಿ ಯೋಜನಾ.  ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಜನಪ್ರಿಯ ಯೋಜನೆಗಳಲ್ಲಿ ಇದು ಒಂದಾಗಿದೆ. ಮನೆಗಳಲ್ಲಿನ  ವಿದ್ಯುತ್  ಬಳಕೆಗೆ ಸೌರ ಶಕ್ತಿ ಬಳಕೆ,   ಸ್ಥಳೀಯಸರಕಾರೀ ಸಂಸ್ಥೆಗಳಲ್ಲಿ  ಸೌರಶಕ್ತಿಯ  ಉತ್ಪಾದನೆ ಹಾಗು ಬಳಕೆ, ಆ ಮೂಲಕ, ವಿದ್ಯುತ್ ಪೂರೈಕೆದಾರರ ಮೇಲಿನ ಒತ್ತಡ ಕಡಿಮೆ ಮಾಡುವುದು   ಈ ಯೋಜನೆಯ ಹಿಂದಿನ ಉದ್ದೇಶ.

ಈ ಯೋಜನೆಯಡಿ, ಕೇಂದ್ರ ಸರ್ಕಾರ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯ ಪ್ರಕಾರ   ಪ್ರತಿ ಫಲಾನುಭವಿ ಕುಟುಂಬಗಳು  ಕೂಡಾ  ಪ್ರತಿ ತಿಂಗಳು 300 ಯುನಿಟ್‌ನಷ್ಟು ವಿದ್ಯುತ್ ಅನ್ನು ಉಚಿತವಾಗಿ ಪಡೆಯುವ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಬಡ ಹಾಗು ಮಾಧ್ಯಮ ವರ್ಗದ ಕುಟುಂಬಗಳಿಗೆ  ಸೌರ ಘಟಕಗಳ ಸ್ಥಾಪಸಿಕೊಳ್ಳಲು ಈ ಯೋಜನೆ ಅಡಿ    ಕೇಂದ್ರ ಸರ್ಕಾರವು ಸಬ್ಸಿಡಿಗಳನ್ನು ಒದಗಿಸುತ್ತದೆ. 

Solar Rooftop Scheme. Source Wikideas1

ಸಬ್ಸಿಡಿ ಮೊತ್ತ

ಈ ಮೇಲ್ಚಾವಣಿ ಸೌರ ವಿದ್ಯುತ್ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಕೇಂದ್ರ ಸರಕಾರದ ಸಬ್ಸಿಡಿ.   ಈ ಯೋಜನೆ ಅಡಿ,  ಸಾರ್ವಜನಿಕರಿಗೆ 2 ಕಿಲೋವ್ಯಾಟ್ ಸೌರ ಫಲಕ ಸ್ಥಾಪಿಸಲು  ಪ್ರತಿ ಕಿಲೋವ್ಯಾಟ್‌ಗೆ  30,000 ರೂಪಾಯಿ  ಸಬ್ಸಿಡಿ ದೊರೆಯುತ್ತದೆ. ಸುಮಾರು 3 ಕಿಲೋವ್ಯಾಟ್‌ ವರೆಗಿನ ಹೆಚ್ಚುವರಿ ವಿದ್ಯುತ್‌ಗೆ ಪ್ರತಿ ಕಿಲೋವ್ಯಾಟ್‌ಗೆ ರೂ. 18,000 ರೂಪಾಯಿ  ಸಬ್ಸಿಡಿ ಸಿಗುತ್ತದೆ. 3 ಕಿಲೋವ್ಯಾಟ್‌ಗಿಂತಲೂ ಹೆಚ್ಚಿನ ಸೌರ ವಿದ್ಯುತ್‌ ಉತ್ಪಾದಿಸುವ ವ್ಯವಸ್ಥೆಗೆ ರೂ. 78,000 ದವರೆಗೆ ಸಬ್ಸಿಡಿ ಸಿಗುತ್ತದೆ. 

ಈ ಯೋಜನೆಯ ಪ್ರಕಾರ  2 ಕಿಲೋವ್ಯಾಟ್ ಸಾಮರ್ಥ್ಯದವರೆಗಿನ ವ್ಯವಸ್ಥೆಗಳಿಗೆ ಸೌರ ಘಟಕ ವೆಚ್ಚದ 60% ಮತ್ತು 2 ರಿಂದ 3 ಕಿಲೋವ್ಯಾಟ್ ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿಯಾಗಿ ಘಟಕದ ವೆಚ್ಚದ 40% ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಒದಗಿಸುತ್ತದೆ. ಸಬ್ಸಿಡಿಯನ್ನು 3 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ನಿಗದಿಪಡಿಸಲಾಗಿದೆ. 

ಮೇಲ್ಛಾವಣಿಯ ಸೌರ ಫಲಕಗಳ ಅಳವಡಿಕೆಗೆ  ಹಣಕಾಸು ವ್ಯವಸ್ಥೆ

ಇನ್ನು ಈ ಯೋಜನೆ ಅಡಿ ನಿಮ್ಮ  ಮನೆಗೆ ಸೌರ ವಿದ್ಯುತ್ ಅಳವಡಿಕೆಗೆ ನೀವು ಹಣಕಾಸಿನ ಅಡೆತಡೆ ಬಗ್ಗೆ ಯೋಚಿಸಬೇಕಿಲ್ಲ. ಏಕೆಂದರೆ ಕೇಂದ್ರ ಸರಕಾರ ಈ ಯೋಜನೆಯಡಿ, ಮೇಲ್ಛಾವಣಿಯ ಸೌರ ಫಲಕಗಳನ್ನು ಅಳವಡಿಸಲು ಗ್ರಾಹಕರು ಮೇಲಾಧಾರ/ಜಾಮೀನು ರಹಿತ ಕಡಿಮೆ ಬಡ್ಡಿಯ ಸಾಲ ಸೌಲಭ್ಯವನ್ನು ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿದ ರೆಪೋ ದರಕ್ಕಿಂತ ಶೇಕಡಾ 0.5 ರಷ್ಟು ಕಡಿಮೆ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. 

ಸಾಲಕ್ಕೆ ಬಡ್ಡಿ ದರವನ್ನು ಲೆಕ್ಕ ಹಾಕುವುದು ಹೇಗೆ?

ಈ ಯೋಜನೆಯಡಿ ನೀವು ಪಡೆಯುವ ಸಾಲಕ್ಕೆ ಬಡ್ಡಿ ದರ ಎಷ್ಟು ಎಂಬುದಕ್ಕೆ ಇಲ್ಲಿದೆ ಉತ್ತರ.  ಆರ್‌ಬಿಐ ರೆಪೊ ದರವನ್ನು 6.5% ನಿಗದಿಪಡಿಸಿದರೆ, ಗ್ರಾಹಕರು 7% ರ ಬದಲು 6% ದರದಲ್ಲಿ ಸಾಲ ಪಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ 

ಇಲ್ಲಿಕ್ಲಿಕ್ ಮಾಡಿ. 

ಗ್ರೂಪ್ ಹೌಸಿಂಗ್ ಸೊಸೈಟೀಸ್ ಮತ್ತು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ (ಜಿಎಚ್ಎಸ್/ಆರ್‌ಡಬ್ಲ್ಯೂಎ) ಗೆ,  ಇವಿ ಚಾರ್ಜಿಂಗ್ ಸೇರಿದಂತೆ ಸಾಮಾನ್ಯ ಸೌಲಭ್ಯಗಳಿಗೆ ಪ್ರತಿ ಕಿಲೋವ್ಯಾಟ್‌ಗೆ   18,000 ರೂಪಾಯಿ ಸಬ್ಸಿಡಿ   ಎಂದು ನಿಗದಿಪಡಿಸಲಾಗಿದೆ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಜಿಎಚ್ಎಸ್/ಆರ್‌ಡಬ್ಲ್ಯೂಎ ನಿವಾಸಿಗಳು 500 ಕಿಲೋವ್ಯಾಟ್ ಸಾಮರ್ಥ್ಯ(ಪ್ರತಿ ಮನೆಗೆ @3 ಕಿಲೋವ್ಯಾಟ್)ದ ಘಟಕಗಳನ್ನು ಸ್ಥಾಪಿಸಿಕೊಳ್ಳಬಹುದು. ಈ ಯೋಜನೆನೆ ನೀವು ನಿಮ್ಮ ಮನೆಯಿಂದಲೇ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. 

ಸೌರ ಮೇಲ್ಛಾವಣಿಗೆ ಅರ್ಜಿ ಸಲ್ಲಿಸುವುದು ಹೇಗೆ ? 

  • ತಮ್ಮ ಸ್ವಂತ ಮನೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ಈ ಯೋಜನೆಯಡಿ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 
  • ಈ ಯೋಜನೆ ಅಡಿ ನೆರವು ಪಡೆಯಲು ಇಚ್ಛಿಸುವ ಕುಟುಂಬದ ಮುಖ್ಯಸ್ಥರು  ಅರ್ಜಿ ಸಲ್ಲಿಸಲು ಈ ವೆಬ್ಸೈಟ್‌ಗೆ  ಭೇಟಿ ನೀಡಬೇಕು. ನೀವು ಅರ್ಜಿ ಸಲ್ಲಿಸುವ ಮೊದಲು,  ನಿಮ್ಮ ಸಾಮಾನ್ಯ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ. ಈ  ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  • ನೋಂದಣಿ ಪ್ರಕ್ರಿಯೆ ಅತಿ ಸರಳವಾಗಿದೆ.  ನಿಮ್ಮ ರಾಜ್ಯವನ್ನು, ನಂತರ ಜಿಲ್ಲೆ, ಬಳಿಕ  ವಿದ್ಯುತ್ ವಿತರಣಾ ಕಂಪನಿ ಮತ್ತು ನಿಮ್ಮ ಖಾತೆ ಸಂಖ್ಯೆ ಮತ್ತು ಆಧಾರ್‌ಗೆ ಜೋಡಿಸಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದರ ಮೂಲಕ ನೀವು ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. 
  • ಈ ಹಂತದಲ್ಲಿ ನೀವು ನಿಮ್ಮ  ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕಾಗುತ್ತದೆ. ನೀವು ಲಾಗ್ ಇನ್ ಆದ  ನಂತರ, ನಿಮ್ಮ ಜಿಲ್ಲೆಯಲ್ಲಿ ನಿಮ್ಮ ಆಯ್ಕೆಯ ಮಾರಾಟಗಾರರನ್ನು ಆಯ್ಕೆ ಮಾಡುವುದು, ಮೀಟರಿಂಗ್ ಮತ್ತು ಇತರ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿವಿಧ ಪುಟಗಳಿಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ. 
  • ಈ ಹಂತದಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೂ  ನೀವು ಇಲ್ಲಿ  ಕ್ಲಿಕ್ ಮಾಡುವ ಮೂಲಕ ಸಂಬಂಧಿತ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಅಲ್ಲಿ ನಿಮ್ಮ ಸಮಸ್ಯೆಗೆ ಒಂದು ಟಿಕೆಟ್ ಸೃಷ್ಟಿಸಿ, ನಿಗದಿತ ಅವಧಿಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಲಾಗುತ್ತದೆ. 

ನಿಮ್ಮ ಮನೆಗೆ ಎಷ್ಟು ಸಾಮರ್ಥ್ಯದ   ಮೇಲ್ಛಾವಣಿ ಸೌರ ಸ್ಥಾವರ ಸೂಕ್ತ? 

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಕಾರ, ಒಂದು ಮನೆಯ ಸರಾಸರಿ  ಮಾಸಿಕ ವಿದ್ಯುತ್  ಬಳಕೆ 0 ಮತ್ತು 150 ಯುನಿಟ್‌ಗಳ ನಡುವೆ ಇದ್ದರೆ, 1-2 ಕಿಲೋವ್ಯಾಟ್ ಮೇಲ್ಛಾವಣಿ ಸೌರ ಸ್ಥಾವರವನ್ನು ಶಿಫಾರಸು ಮಾಡಲಾಗುತ್ತದೆ. ಒಂದು ಮನೆಯ ಸರಾಸರಿ ಮಾಸಿಕ ಬಳಕೆ 150-300 ಯುನಿಟ್‌ಗಳ ನಡುವೆ ಇದ್ದರೆ 2-3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ಪ್ಲಾಂಟ್ ಅನ್ನು ಶಿಫಾರಸು ಮಾಡಲಾಗುತ್ತದೆ. ಒಂದು ಮನೆಯ ಸರಾಸರಿ ಮಾಸಿಕ ಬಳಕೆ 300 ಯುನಿಟ್‌ಗಳಿಗಿಂತ ಹೆಚ್ಚಿದ್ದರೆ, 3 ಕಿಲೋವ್ಯಾಟ್ ಅನ್ನು ಶಿಫಾರಸು ಮಾಡಲಾಗುತ್ತದೆ. 

ಟೋಲ್ ಫ್ರೀ ಸಂಖ್ಯೆ

ಈ ಯೋಜನೆಗೆ ಸೇರ್ಪಡೆಗೊಳ್ಳಲು ಇಚ್ಛಿಸುವ ಸಾರ್ವಜನಿಕರು, ಯಾವುದೇ ಸಮಸ್ಯೆಗಳನ್ನು ಎದುರಿಸಿದರೂ   ಅಥವಾ ಅವರು ತಮ್ಮ ಪ್ರಶ್ನೆಗಳಿಗೆ ಪರಿಹಾರಗಳನ್ನು ಪಡೆದುಕೊಳ್ಳಲು, 15555 ಗೆ ಕರೆ ಮಾಡಬಹುದು. ಸಾರ್ವಜನಿಕರು ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. 

ಒಟ್ಟಾರೆಯಾಗಿ ಹೇಳುವುದಾದರೆ, ಈ ಯೋಜನೆ, ದೇಶದ  ಸುಸ್ಥಿರ ಪ್ರಗತಿಗೆ ಅತ್ಯಂತ ಪೂರಕವಾಗಿದ್ದು, ಯಾವುದೇ ಅಡೆತಡೆ ಇಲ್ಲದೆ, ಸಾರ್ವಜನಿಕರು ವಿದ್ಯುತ್ ಪಡೆದುಕೊಳ್ಳಬಹುದು. 

Jolad Rotti:
Related Post