ನಮ್ಮ ದೇಶದ ಪ್ರಮುಖ ದುರ್ಗಾ ದೇವಸ್ಥಾನಗಳಲ್ಲಿ ಒಂದು ಕೊಲ್ಲೂರಿನ ಶ್ರೀ
ಮೂಕಾಂಬಿಕಾ ದೇವಿ ದೇವಸ್ಥಾನ. ಈ ದೇಗುಲ ಶ್ರೀ ಕೃಷ್ಣನ ನಾಡು, ದೇಶದ ಇನ್ನೊಂದು ಪ್ರಸಿದ್ಧ ದೇಗುಲ ನಗರಿ ಉಡುಪಿಯಿಂದ ಸರಿಸುಮಾರು 80 ಕಿಲೋ ಮೀಟರ್ ಮತ್ತು ಕಡಲ ತಡಿ ಮಂಗಳೂರಿನಿಂದ 135 ಕಿಮೀ ದೂರದಲ್ಲಿದೆ. ಈ ದೇವಾಲಯವು ಕೊಡಚಾದ್ರಿ ಶಿಖರದ ತಪ್ಪಲಲ್ಲಿದೆ. ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನವು ದೇಶದ ಎಲ್ಲೆಡೆಗಳಿಂದ ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ.
s
ಕೊಲ್ಲೂರು ಮೂಕಾಂಬಿಕಾ ದೇಗುಲ: ಫೋಟೋ ಕೃಪೆ: ಪ್ರೇಮ್ ಕುಡ್ವ
ಪಶ್ಚಿಮ ಘಟ್ಟ ಸಾಲಿನ ಕೊಡಚಾದ್ರಿ ಬೆಟ್ಟ ದಿಂದ ಕೆಳಗೆ ಹರಿಯುವ ಶುದ್ಧ ಮತ್ತು ಪವಿತ್ರ
ನೀರಿನಲ್ಲಿ ಮುಂಜಾನೆಯ ಪವಿತ್ರ ಸ್ನಾನವೇ ಒಂದು ವಿಶಿಷ್ಟ ಅನುಭವ ನೀಡುತ್ತದೆ. ಈ ದೇವಾಲಯವು ಮೂಕಾಂಬಿಕಾ ದೇವಿಗೆ ಸಮರ್ಪಿತವಾಗಿದೆ. ದೇಶದಲ್ಲಿ ಪಾರ್ವತಿ ದೇವಿಗೆ ಅರ್ಪಿತವಾಗಿರುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿ ಮೂಕಾಂಬಿಕಾ ದೇವಿಯು ಶಕ್ತಿ ಮತ್ತು ಶಿವ ಎರಡನ್ನೂ ಸಂಯೋಜಿಸುವ ಜ್ಯೋತಿರ್ ಲಿಂಗದ ಸ್ವರೂಪದಲ್ಲಿ ಭಕ್ತರನ್ನು ಹರಸುತ್ತಿದ್ದಾಳೆ.
ಕೊಲ್ಲೂರು ಮೂಕಾಂಬಿಕಾ ದೇಗುಲ: ಒಂದಿಷ್ಟು ಮಾಹಿತಿ
ದೇಗುಲದ ಸಮಯ
ಬೆಳಗ್ಗೆ ೫ ರಿಂದ ಮಧ್ಯಾನ್ಹ ೧.೩೦
ಅಪರಾಹ್ನ ೩ ರಿಂದ ೫ (ಕೇವಲ ದರ್ಶನ)
ಸಂಜೆ: ೫ ರಿಂದ ೯ ಗಂಟೆಯವರೆಗೆ.
ವೆಬ್ ಸೈಟ್ : https://www.kollurmookambika.org
ದರ್ಶನದ ಅವಧಿ: ಸುಮಾರು ಒಂದು ಗಂಟೆ
ವಿಳಾಸ: ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ – 576 220
Map: ಇಲ್ಲಿ ಒತ್ತಿರಿ
ಚಿತ್ರ: ಮೂಕಾಂಬಿಕಾ ದೇವಿಯ ಗೋಡೆ ಚಿತ್ರ: ಚಿತ್ರ ಕೃಪೆ: ಶ್ಯಾಮ್
ಮೂಕಾಂಬಿಕಾ ದೇವಿ ದೇವಾಲಯದ ಇತಿಹಾಸ ಮತ್ತು ಮಹತ್ವ
ಕೊಲ್ಲೂರು ಎಂದರೆ ನಮ್ಮ ಮನಸ್ಸಿನಲ್ಲಿ ಮೂಡುವುದು ದೇವಿಯ ಚಿತ್ರ. ದೇವಿ ಇಲ್ಲಿಯೇ ಮೂಕಾಸುರ ಎಂಬ ರಾಕ್ಷಸನನ್ನು ಕೊಂದುಹಾಕಿ ಲೋಕದಲ್ಲಿ ಶಾಂತಿ ನೆಲೆಸಿದಳು ಎಂಬ ಐತಿಹ್ಯವಿದೆ.
ಈ ದೇಗುಲದ ಹಿಂದೆ ಹಲವಾರು ನಂಬಿಕೆಗಳಿವೆ. ಮೂಕಾಂಬಿಕಾ ದೇವಿಯ ಗುಡಿಯನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಸತತ ತಪಸ್ಸಿನ ಬಳಿಕ ಅವರಿಗೆ ಸರಸ್ವತಿ ದೇವಿ ದರ್ಶನ ನೀಡುತ್ತಾಳೆ. ಶಂಕರಾಚಾರ್ಯರ ಭಕ್ತಿಗೆ ಮೆಚ್ಚಿ, ದೇವಿಯು ಆದಿ ಶಂಕರರ ಜೊತೆಗೆ ಕೇರಳಕ್ಕೆ ತೆರಳು ಒಪ್ಪಿಕೊಳ್ಳುತ್ತಾಳೆ.
ತನ್ನನ್ನು ಕರೆದೊಯ್ಯುವ ವೇಳೆಗೆ, ತಾನು ಹಿಂಬಾಲಿಸುತ್ತಿದ್ದೇನೆಯೇ ಎಂದು ಪರೀಕ್ಷಿಸಬಾರದು ಎಂಬ ಷರತ್ತಿನ ಮೇಲೆ ದೇವಿಯು ಶಂಕರಾಚಾರ್ಯರೊಂದಿಗೆ ಹೊರಡುತ್ತಾಳೆ. ಒಂದೊಮ್ಮೆ ಶಂಕರಾಚಾರ್ಯರು ಹಿಂತಿರುಗಿ ನೋಡಿದರೆ , ದೇವಿಯು ಅಲ್ಲಿಯೇ ನಿಲ್ಲುತ್ತಾಳೆ.
ಹೀಗೆ ದಾರಿಯಲ್ಲಿ ಸಾಗುತ್ತಿರುವಾಗ, ಶಂಕರಾಚಾರ್ಯರಿಗೆ ಯಾವುದೇ ಶಬ್ದ ಕೇಳಿ ಬಾರದಿದ್ದುದರಿಂದ ಅವರು ಹಿಂತಿರುಗಿ ನೋಡುತ್ತಾರೆ. ತನ್ನ ಷರತ್ತು ಮುರಿದದ್ದರಿಂದ, ಸರಸ್ವತಿ ಅಲ್ಲೇ ನಿಲ್ಲುತ್ತಾಳೆ. ಆದರೆ ಶಂಕರಾಚಾರ್ಯರ ಭಕ್ತಿಗೆ ಮಣಿದು, ದೇವಿ, ಬೆಳಗ್ಗೆ ಚೊಟ್ಟಣಿಕ್ಕರ ದೇಗುಲದಲ್ಲಿ ಉಳಿದು ಮಧ್ಯಾನ್ಹ ಕೊಲ್ಲೂರಿಗೆ ಬರಲು ಒಪ್ಪಿಕೊಳ್ಳುತ್ತಾಳೆ.
ಇನ್ನು ಕೊಲ್ಲೂರಿಗೆ ಭೇಟಿ ನೀಡಿದಾಗ, ಭಕ್ತರು ತಪ್ಪದೆ ಭೇಟಿ ನೀಡ ಬೇಕಾದ ಪ್ರದೇಶ ಕೊಡಚಾದ್ರಿ ಬೆಟ್ಟ. ಹಸಿರು ವನರಾಶಿ – ಬೆಟ್ಟಗುಡ್ಡಗಳು ಎಲ್ಲರ ಮನ ಸೆಳೆಯುತ್ತವೆ. ಇಲ್ಲಿಯೇ
ಚಿತ್ರಮೂಲ ಮತ್ತು ಅಂಬಾವನಂ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿಯೇ ಅದ್ವೈತ ಸಿದ್ದಾಂತದ ಪ್ರತಿಪಾದನೆ ಮಾಡಿದ ಆದಿ ಶಂಕರರು ಧ್ಯಾನ ಮಾಡಿದ್ದಾರೆಂದು ಭಾವಿಸಲಾಗಿದೆ.
ಕೊಲ್ಲೂರು ದೇಗುಲಕ್ಕೆ ಬಹಳ ಹಿಂದಿನಿಂದಲೂ ದೊಡ್ಡ ಸಂಖ್ಯೆಯ ಭಕ್ತರಿದ್ದಾರೆ.
ನಮ್ಮ ರಾಜ್ಯ ಹಾಗು ಕೇರಳ, ತಮಿಳುನಾಡುಗಳನ್ನು ಆಳಿದ ಹಿಂದೂ ರಾಜರು ದೇವಾಲಯದ ಪೋಷಕರಾಗಿದ್ದರು. ದೇಗುಲದ ಭಂಡಾರದಲ್ಲಿ ಶ್ರೀಮಂತ ಗತಕಾಲವನ್ನು ನೆನಪಿಸುವ ಅಮೂಲ್ಯವಾದ ಸಂಪತ್ತುಗಳನ್ನು ಈಗಲೂ ನೋಡಬಹುದು.
ಇದು ನಾಗರ ಅಥವಾ ಬೆಡ್ನೂರ್ ರಾಜರ ರಾಜ್ಯ ದೇವಾಲಯವಾಗಿತ್ತು. ಈಗ ಇಲ್ಲಿನ ವಿಗ್ರಹಗಳನ್ನು ಅಲಂಕರಿಸುತ್ತಿರುವ ಅನೇಕ ಆಭರಣಗಳನ್ನು ಅವರು ಮತ್ತು ಅವರ ಅಧಿಪತಿಗಳಾಗಿದ್ದ ವಿಜಯನಗರದ ರಾಜರು
ನೀಡಿದ್ದಾರೆ. 18 ನೇ ಶತಮಾನದಲ್ಲಿ ಜಿಲ್ಲೆಯ ಮೇಲೆ ನಡೆದ ದಾಳಿಗಳಲ್ಲಿ ಒಂದಷ್ಟು ಆಭರಣಗಳನ್ನು ಕೊಳ್ಳೆ ಹೊಡೆಯಲಾಗಿದೆ ಎನ್ನಲಾಗುತ್ತದೆ.
PIX ಚಿತ್ರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ: ಚಿತ್ರ ಕೃಪೆ: ಶೊಕ್ ಪ್ರಭಾಕರನ್.
ಕೊಲ್ಲೂರು ತಲುಪುವುದು ಹೇಗೆ?
ದೇಗುಲಗಳ ನಗರಿ ಉಡುಪಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮೂಕಾಂಬಿಕಾ ದೇವಸ್ಥಾನವು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಅತಿ ಹೆಚ್ಚು ಭಕ್ತರನ್ನು ಹೊಂದಿದೆ. ಜೊತೆಗೆ ದೇಶದ ಉದ್ದಗಲದಿಂದ, ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇಲ್ಲಿಗೆ, ದಕ್ಷಿಣ ಭಾರತದ ಪ್ರಮುಖ ನಗರಗಳಿಂದ ಉತ್ತಮ ಸಾರಿಗೆ ಸೌಲಭ್ಯವಿದೆ.
ವಿಮಾನ ಸಂಪರ್ಕ: ಈ ದೇವಸ್ಥಾನಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ವಿಮಾನ ನಿಲ್ದಾಣದಿಂದ ಕೊಲ್ಲೂರಿಗೆ ಪ್ರೀ-ಪೇಯ್ಡ್ ಟ್ಯಾಕ್ಸಿ ಸೇವೆ ಲಭ್ಯವಿದೆ. ದೇಗುಲ ವಿಮಾನ ನಿಲ್ದಾಣದಿಂದ ಸರಿಸುಮಾರು 150 ಕಿಮೀ ದೂರದಲ್ಲಿದೆ ಮತ್ತು ಮೂರು-ನಾಲ್ಕು ಗಂಟೆಗಳಲ್ಲಿ ಇಲ್ಲಿಗೆ ತಲುಪಬಹುದು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾದರೆ ಅಲ್ಲಿಂದ ಕೂಡ ಇಲ್ಲಿಗೆ ಸುಲಭವಾಗಿ ಆಗಮಿಸಬಹುದು.
ರೈಲು ಸೇವೆ: ಈ ದೇಗುಲಕ್ಕೆ ಹತ್ತಿರದ ರೈಲು ನಿಲ್ದಾಣ ಸುಮಾರು 20 ಕಿಮೀ ದೂರದಲ್ಲಿರುವ ಬಿಜೂರ್ (BIJR) ಮತ್ತು 40 ಕಿಮೀ ದೂರದಲ್ಲಿರುವ ಕುಂದಾಪುರ ರೈಲು ನಿಲ್ದಾಣಗಳು.
ರೈಲು ನಿಲ್ದಾಣದಿಂದ ಕೊಲ್ಲೂರಿಗೆ ಸುಲಭವಾಗಿ ಟ್ಯಾಕ್ಸಿಗಳನ್ನು ಪಡೆಯಬಹುದು. ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಕಾಯುವ ಕೊಠಡಿಗಳಿವೆ.
ರಸ್ತೆ ಸಂಪರ್ಕ: ಕೊಲ್ಲೂರು ದೇಗುಲ ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಶಿವಮೊಗ್ಗ, ಮಂಗಳೂರು ಮತ್ತು ಮೈಸೂರಿಂದ ಉತ್ತಮ ಬಸ್ಸು ಸಂಪರ್ಕ ಹೊಂದಿದೆ. ಮಂಗಳೂರಿನಿಂದ ಬಸ್ಸಿನಲ್ಲಿ ಮೂರು ಗಂಟೆಗಳ ಪ್ರಯಾಣ. ಶಿವಮೊಗ್ಗ ಮತ್ತು ಸಾಗರ ಮತ್ತು ಇತರ ಕೆಲವು ಹತ್ತಿರದ ಸ್ಥಳಗಳಿಂದ ನೇರ ಬಸ್ಸುಗಳು ಲಭ್ಯವಿದೆ.