X

ಕರ್ನಾಟಕದ “ನಯಾಗರ” ಜೋಗ ಜಲಪಾತ

    Categories: Shimoga

ಜೋಗದ ಸಿರಿ ಬೆಳಕಿನಲ್ಲಿ… ಸಾಯೋದಕ್ಕೆ ಮುನ್ನ ನೋಡು ಜೋಗದ ಗುಂಡಿ….  ಹೀಗೆ ಕನ್ನಡ ಮನೆ -ಮನಗಳಲ್ಲಿ ಪ್ರಸಿದ್ದವಾಗಿರುವ ಜಲಪಾತ ಜೋಗ ಜಲಪಾತ. ಇದು ಉತ್ತರ ಕನ್ನಡ ಹಾಗು ಶಿವಮೊಗ್ಗ ಜಿಲ್ಲೆಗಳ ಗಡಿ ಭಾಗದಲ್ಲಿ. ಶಿವಮೊಗ್ಗ ನಗರದಿಂದ ೧೦೦ ಕಿಲೋ ಮೀಟರ್ ದೂರದಲ್ಲಿರುವ ಈ ಜಲಪಾತ ನೋಡಲು ಎರಡು ಕಣ್ಣುಗಳು ಸಾಲದು. 

ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ  ಶರಾವತಿ ನದಿ ಇಲ್ಲಿ  ರಾಜ, ರಾಣಿ, ರೋರರ್ ಮತ್ತು ರಾಕೆಟ್  ಎಂಬ ನಾಲ್ಕು ಭವ್ಯವಾದ ಜಲಪಾತದ ರೂಪದಲ್ಲಿ 829 ಅಡಿ ಎತ್ತರದಿಂದ ಇಲ್ಲಿ  ಧುಮುಕುತ್ತದೆ. ಈ  ಜೋಗ್ ಫಾಲ್ಸ್, ದೇಶದ ಅತಿ ಎತ್ತರದ ಜಲಪಾತವಾಗಿದ್ದು, ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಇದು ಇದೆ.  ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ  ರೈಲು ನಿಲ್ದಾಣದಿಂದ 16 ಕಿಮೀ ದೂರದಲ್ಲಿದೆ ಈ ಜಲಪಾತ.      

ರಾಷ್ಟ್ರೀಯ ಹೆದ್ದಾರಿ 48 ಅಥವಾ 4 ರ  ಮೂಲಕ ಕೂಡ ನಾವು ಈ ಜಲಪಾತವನ್ನು ಸಹ ತಲುಪಬಹುದು. ಈ ಜಲಪಾತ ದಟ್ಟ ಕಾನನದ ಮಧ್ಯೆ ಇದ್ದು, ಇಲ್ಲಿನ ಭೇಟಿ ನಿಮಗೆ ವಿಶಿಷ್ಟ ಅನುಭವ ನೀಡುತ್ತದೆ.  ಕಲ್ಲಿನ ಮೆಟ್ಟಿಲುಗಳ ಮೂಲಕ, ನೀವು ಈ ಜಲಪಾತದ ಬುಡಕ್ಕೆ ತಲುಪ ಬಹುದಾಗಿದೆ. ಹೀಗೆ ಸಾಗುವಾಗ ನಿಮ್ಮ ಮೈಮೇಲೆ ಬೀಳುವ ನೀರಿನ ಹನಿಗಳು ನಿಮ್ಮನ್ನು ವಿಶಿಷ್ಟ ಲೋಕಕ್ಕೆ ಕೊಂಡೊಯ್ಯುತ್ತವೆ. ನೂರಾರು ಮೆಟ್ಟಿಲುಗಳನ್ನು ಸಾವಧಾನವಾಗಿ ನೀವು ಇಳಿಯ ಬೇಕಾಗುತ್ತದೆ. ಒಂದು ಹೆಜ್ಜೆ ತಪ್ಪಿದರೂ ನೀವು ಮುಗ್ಗರಿಸಿ ಬೀಳ ಬಹುದು. ಇದರ ಜೊತೆಗೆ, ಮೇಲಿಂದ, ನೀರು ಧುಮುಕುವುದನ್ನು ನೋಡುವುದೇ ಇನ್ನೊಂದು ವಿಶಿಷ್ಟ ಅನುಭವ. ಕನ್ನಡದ ಮುಂಗಾರು ಮಳೆ ಚಲನ ಚಿತ್ರ ನೆನಪು ನಿಮಗಾಗುತ್ತದೆ. 

ಮುಂಗಾರು ಋತುವಿನಲ್ಲಿ ಇಲ್ಲಿಗೆ ಭೇಟಿ ನೀಡಿದರೆ, ನಿಮಗೆ ಈ ಜಲಪಾತದ ಸೌಂದರ್ಯದ ರೋಚಕತೆಯ ಅನುಭವ ಮುದ ನೀಡುತ್ತದೆ. ಧುಮ್ಮಿಕಿ ಹರಿಯುವ ಜಲಪಾತದ ನೀರು, ಹಾಲಿನಂತಹ ನೊರೆ, ಆಗ್ಗಾಗೆ ಮೂಡುವ ಕಾಮನ ಬಿಲ್ಲು, ಮಳೆ, ಸುತ್ತ ಹಚ್ಚ ಹಸಿರಿನ ರಾಶಿ, ಇಂಥನ ಅನುಭವ ಇನ್ನೆಲ್ಲೂ ಆಗಲು ಸಾಧ್ಯವಿಲ್ಲ. ಲಿಂಗನಮಕ್ಕಿ ಅಣೆಕಟ್ಟಿನ ಗೇಟುಗಳು ಮುಚ್ಚಿದ್ದರೆ, ನೀವು ಈ ಜಲಪಾತದ ಸ್ಥಳಕ್ಕೆ ಭೇಟಿ ನೀಡಬಹುದು. 

ಚಳಿಗಾಲ  ಜೋಗಕ್ಕೆ ಭೇಟಿ ನೀಡಲು ಉತ್ತಮ ಸಮಯ. ಏಕೆಂದರೆ,  ಚಳಿಗಾಲದಲ್ಲಿ ಇಲ್ಲಿ ಮಂಜಿನ ಹೊದಿಕೆ, ಜಲಪಾತವನ್ನು ಇನ್ನು ಆಕರ್ಷಕಗೊಳಿಸುತ್ತದೆ. ಜೊತೆಗೆ, ಆಗ, ಇಲ್ಲಿನ ಮಲೆನಾಡಿನ ಸೌಂದರ್ಯ ಸವಿಯುವುದೇ ಒಂದು ಅದ್ಭುತ ಅನುಭವ.  ಜೋಗ ಜಲಪಾತಕ್ಕೆ   ಶಿವಮೊಗ್ಗ ನಗರದಿಂದ ಉತ್ತಮ  ರೈಲು ಮತ್ತು ರಸ್ತೆ  ಸಂಪರ್ಕವಿದೆ. ಪ್ರತಿ ದಿನ ನೂರಾರು ಸರಕಾರಿ ಹಾಗು ಖಾಸಗಿ ಬಸ್ಸುಗಳ ಮೂಲಕ ಜೋಗ ತಲುಪಬಹುದು. 

ಈ  ಜೋಗ  ಜಲಪಾತವನ್ನು ಗೇರುಸೊಪ್ಪಾ ಜಲಪಾತ ಎಂದೂ ಕರೆಯುತ್ತಾರೆ. ಏಕೆಂದರೆ ಇದು ಗೇರುಸೊಪ್ಪ ಪ್ರದೇಶದಲ್ಲಿದೆ. ಇದು ನಮ್ಮ ದೇಶದ  ಅತಿ ಎತ್ತರದ ಜಲಪಾತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ, ಇಲ್ಲಿ ನೀರು ನೇರವಾಗಿ ಬೀಳುತ್ತದೆ. ನಡುವೆ,  ಬಂಡೆಗಳ ಮೇಲೆ ಹರಿಯುವುದಿಲ್ಲ. ಹೀಗಾಗಿ ಇದರ ಸೌಂದರ್ಯ ವರ್ಣನಾತೀತ 

ಜೋಗ ಜಲಪಾತ ಭೇಟಿಗೆ ಪ್ರಶಸ್ತ್ಯ ಸಮಯವೆಂದರೆ ಅದು ಆಗಸ್ಟ್ – ದಶಂಬರ್ ತಿಂಗಳುಗಳ ಮಧ್ಯದ ಅವಧಿ. ಏಕೆಂದರೆ ಈ ಸಮಯದಲ್ಲಿ ಜೋಗ  ಜಲಪಾತ ಮೈದುಂಬಿಕೊಂಡಿರುತ್ತದೆ. ಈ  ಜೋಗ್  ಜಲಪಾತ, ಶಿವಮೊಗ್ಗ ಜಿಲ್ಲೆಯ ಪ್ರಮುಖ ನಗರಗಳಲ್ಲೊಂದಾದ  ಸಾಗರದಿಂದ 30 ಕಿಮೀ ದೂರದಲ್ಲಿದೆ ಮತ್ತು ನಮ್ಮ  ಬೆಂಗಳೂರಿನಿಂದ 379 ಕಿಮೀ ದೂರದಲ್ಲಿದೆ.

ಶರಾವತಿ ಜಲ ವಿದ್ಯುತ್ ಸ್ಥಾವರಕ್ಕೆ ಈಗ ನೀರು ಸರಬರಾಜು ಆಗುತ್ತಿರುವುದು  ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನ ಮಕ್ಕಿ ಅಣೆಕಟ್ಟಿನಿಂದ.  ಇಲ್ಲಿ ಸಂಗ್ರಹಗೊಳ್ಳುವ ನೀರಿನ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ   ವಿದ್ಯುತ್ ಸ್ಥಾವರವು 1949 ರಿಂದ ಕಾರ್ಯನಿರ್ವಹಿಸುತ್ತಿದೆ. ಇದು   1200 MW ಸಾಮರ್ಥ್ಯದ ವಿದ್ಯುತ್ ಸ್ಥಾವರ.   ಇದು ನಮ್ಮ ದೇಶದ  ಅತಿದೊಡ್ಡ ಜಲ-ವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ.  

ಮೊದಲಿಗೆ, ಈ ವಿದ್ಯುತ್ ಕೇಂದ್ರಕ್ಕೆ  ಮೈಸೂರು ಮಹಾರಾಜರಾಗಿದ್ದ  ಶ್ರೀ  ಕೃಷ್ಣ ರಾಜೇಂದ್ರ  ಒಡೆಯರ್  ಅವರ ಹೆಸರಿಡಲಾಗಿತ್ತು.  ಬಳಿಕ  ಇದಕ್ಕೆ ರಾಷ್ಟ್ರಪಿತ   ಮಹಾತ್ಮಾ ಗಾಂಧಿ ಜಲವಿದ್ಯುತ್ ಯೋಜನೆ ಎಂಬ ಹೆಸರಿಡಲಾಯಿತು.  ಇದು 1960 ರವರೆಗೆ   ಈ ವಿದ್ಯುತ್ ಕೇಂದ್ರಕ್ಕೆ ಹಿರೇಭಾಸ್ಕರ ಅಣೆಕಟ್ಟಿನಿಂದ ನೀರು ಪೂರೈಕೆ ಆಗುತ್ತಿತ್ತು. ಆದರೆ   1960 ರ ನಂತರ, ಸರ್ ಎಂ. ವಿಶ್ವೇಶ್ವರಯ್ಯ ಅವರ  ದೂರದೃಷ್ಟಿ ಫಲವಾಗಿ,   ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ  ಲಿಂಗನ ಮಕ್ಕಿ  ಅಣೆಕಟ್ಟಿನಿಂದ ಇಲ್ಲಿಗೆ ನೀರು ಹರಿಸಲಾಗುತ್ತಿದೆ. ಇದು ಈಗ ನಮ್ಮ ರಾಜ್ಯದ ಅತಿ ಪ್ರಮುಖ ವಿದ್ಯುತ್ ಸ್ಥಾವರಗಳಲ್ಲಿ ಒಂದು. 

ಜೋಗ ಜಲಪಾತವನ್ನು  ತಲುಪುವುದು ಹೇಗೆ  

ಹತ್ತಿರದ ರೈಲು ನಿಲ್ದಾಣ: ತಾಳಗುಪ್ಪ, ಶಿವಮೊಗ್ಗ ಜಿಲ್ಲೆ. ಇಲ್ಲಿಗೆ ಬೆಂಗಳೂರು ಹಾಗು ಮೈಸೂರಿನಿಂದ ರೈಲು ಸಂಪರ್ಕ ಇದೆ. 

ಸಮೀಪದ  ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ರಸ್ತೆ ಮೂಲಕ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206, ಬೆಂಗಳೂರಿನಿಂದ 378 ಕಿಮೀ (ಬೆಂಗಳೂರು-ಶಿವಮೊಗ್ಗ-ಸಾಗರ-ಜೋಗ), ಸಾಗರದಿಂದ 45 ಕಿಮೀ, ಸಿದ್ದಾಪುರ 21 ಕಿಮೀ, ಹೊನ್ನಾವರ 56 ಕಿಮೀ

ಸಮೀಪದ ಪ್ರವಾಸಿ ಧಾಮಗಳು: ಹೊನ್ನೆಮರಡು, ಕಾರವಾರ, ಶಿವಮೊಗ್ಗ.  

Related Readings

Jolad Rotti:
Related Post