16 ನೇ ಕರ್ನಾಟಕ ವಿಧಾನಸಭೆ ಆಯ್ಕೆಗೆ ಮತದಾನ ಮೇ 10 ರಂದು ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಕುರಿತು ಬುಧವಾರ ಘೋಷಣೆ ಮಾಡಿದ್ದಾರೆ.
15ನೇ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ 119. ಕಾಂಗ್ರೆಸ್ 75 ಹಾಗೂ ಜೆಡಿಎಸ್ 28 ಶಾಸಕರನ್ನು ಹೊಂದಿದೆ.
೨೦೧೮ರ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿತ್ತು. ಜೆಡಿಎಸ್ ಹಾಗು ಕಾಂಗ್ರೆಸ್ ಮೊದಲು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ನಡೆಸಿದರು. ಆದರೆ ೨೦೧೯ರಲ್ಲಿ ಈ ಸರಕಾರ ಕುಸಿದು ಬಿದ್ದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ೧೫ನೇ ವಿಧಾನಸಭೆ ಒಟ್ಟು ಮೂರೂ ಮುಖ್ಯಮಂತ್ರಿಗಳನ್ನು (ಎಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ, ಹಾಗು ಬಸವರಾಜ ಬೊಮ್ಮಾಯಿ) ಕಂಡಿದೆ.
ಈ ಬಾರಿಯ ವಿಶೇಷತೆ ಎಂದರೆ, 10 ಲಕ್ಷಕ್ಕೂ ಹೆಚ್ಚು ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 173 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಮತದಾರರಲ್ಲಿ 2.62 ಕೋಟಿ ಪುರುಷರು, 2.59 ಕೋಟಿ ಮಹಿಳೆಯರು. 47,779 (ಸೇವಾ ಮತದಾರರು), 5.55 ಲಕ್ಷ ವಿಕಲಚೇತನರು ಮತ್ತು 4,699 ಟ್ರಾನ್ಸ್‌ಜೆಂಡರ್‌ಗಳು ಸಹ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಲಿಂಗ ಅನುಪಾತವು 988 ಆಗಿದೆ.
ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ.
ಪ್ರಮುಖ ದಿನಾಂಕಗಳು
- ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ: ಏಪ್ರಿಲ್ 13
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 20
- ನಾಮಪತ್ರಗಳ ಪರಿಶೀಲನೆಯ ದಿನಾಂಕ: ಏಪ್ರಿಲ್ 21
- ಅಭ್ಯರ್ಥಿಗಳನ್ನು ಹಿಂಪಡೆಯಲು ಕೊನೆಯ ದಿನಾಂಕ: ಏಪ್ರಿಲ್ 24
- ಮತದಾನದ ದಿನಾಂಕ: ಮೇ 10
- ಎಣಿಕೆಯ ದಿನಾಂಕ: ಮೇ 13
ಮುಖ್ಯಾಂಶಗಳು
ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಲ್ಲೇ ಕುಳಿತು ಮತದಾನ ಮಾಡಬಹುದು.
- ಒಟ್ಟು ಮತಗಟ್ಟೆಗಳು: 58,282
- ಮಹಿಳೆ ನಿರ್ವಹಿಸುವ ಮತದಾನ ಕೇಂದ್ರಗಳು: 1,320
- ವಿಶೇಷ ಚೇತನರು ನಿರ್ವಹಿಸುವ ಮತದಾನ ಕೇಂದ್ರಗಳು : 224
- ವೆಬ್‌ಕಾಸ್ಟಿಂಗ್: 29,141
- ಮಾದರಿ ಮತಗಟ್ಟೆಗಳು: 240