ಕರ್ನಾಟಕದ ಪ್ರತಿಯೊಂದು ನಗರ-ಹಳ್ಳಿಗಳಲ್ಲೂ ವಾರ್ಷಿಕ ಆಸ್ತಿ ತೆರಿಗೆ ಪಾವತಿ ಕಡ್ಡಾಯ. ಹೀಗೆ ನಾಗರಿಕರು ಪಾವತಿಸುವ, ಆಸ್ತಿ ತೆರಿಗೆಯನ್ನು ನಾನಾ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ. ಆದರೆ, ಬೆಂಗಳೂರು ಹೊರತು ಪಡಿಸಿ, ರಾಜ್ಯದ ಉಳಿದ ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ, ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ಮೂಲಕ ಅವಕಾಶ ಇಲ್ಲದಿರುವುದು. ಆದರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕ್ಯೂ ಆರ್ ಕೋಡ್ ಬಳಸಿ, ಆಸ್ತಿ ತೆರಿಗೆ ಪಾವತಿಸುವ ಹೊಸ ವ್ಯವಸ್ಥೆಯೊಂದನ್ನು ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದೆ.
ಈ ಹೊಸ ತಂತ್ರಾಂಶದ ವೈಶಿಷ್ಟ್ಯವೆಂದರೆ, ಇದರ ಮೂಲಕ ಆಸ್ತಿ ತೆರಿಗೆ ಜೊತೆಗೆ, ಪಾಲಿಕೆಗೆ ಪಾವತಿಸಬೇಕದ ಇನ್ನಿತರ ತೆರಿಗೆಗಳಾದ (ಟ್ರೇಡ್ ಲೈಸೆನ್ಸ್, ನೀರಿನ ಶುಲ್ಕ) ಇತ್ಯಾದಿ ಕೂಡಾ ಪಾವತಿಸಲು ಸಾಧ್ಯವಿದೆ.
ಮೈಸೂರು ಈಗ ನಿವೃತ್ತರ ಸ್ವರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಾಜ್ಯದ ಎಲ್ಲೆಡೆಯಿಂದ ನಿವೃತ್ತ ನಾಗರಿಕರು, ಹಿರಿಯ ನಾಗರಿಕರು, ತಮ್ಮ ವೃದ್ದಾಪ್ಯ ಕಳೆಯಲು ಮೈಸೂರನ್ನೇ ಆಯ್ಕೆ ಮಾಡುತ್ತಾರೆ. ಉತ್ತಮ ಆರೋಗ್ಯ ವ್ಯವಸ್ಥೆ, ಉತ್ತಮ ವಾತಾವರಣ, ಕಡಿಮೆ ಮಾಲಿನ್ಯ ಪ್ರಮಾಣ, ಸ್ವಚ್ಛ ನಗರವೆಂಬ ಗರಿ, ಇದಕ್ಕೆ ಕಾರಣ. ಇದರ ಜೊತೆಗೆ, ಮೈಸೂರಿನ ಸಾವಿರಾರು ನಿವಾಸಿಗಳು, ಬೇರೆ ನಗರ-ರಾಜ್ಯ-ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ನಮ್ಮ ರಾಜ್ಯದ ಅತಿ ಹಳೆಯ ನಗರ ಸ್ಥಳಿಯಾಡಳಿತ ಸಂಸ್ಥೆಗಳಲ್ಲೊಂದು ಮೈಸೂರು ಮಹಾನಗರ ಪಾಲಿಕೆ. ನಾಲ್ವಡಿ ಕೃಷ್ಣರಾಜ ಒಡೆಯರ್ ೧೯೨೧ರಲ್ಲಿ ಟೌನ್ ಮುನ್ಸಿಪಾಲಿಟಿಯಾಗಿ ಇದನ್ನು ಆರಂಭಿಸಿದರು. ನಗರ ಬೆಳೆಯುತ್ತಾ ಬಂದಂತೆ, ಇದೀಗ, ನಗರವನ್ನು ಮಹಾ ನಗರ ಪಾಲಿಕೆಯಾಗಿ ಪರಿವರ್ತಿಸಲಾಗಿದೆ. ನಗರದ ಜನಸಂಖ್ಯೆ ೧೧ ಲಕ್ಷ ಮೀರಿದೆ.
ಈವರೆಗೆ, ಇಲ್ಲಿನ ನಾಗರಿಕರಿಗೆ, ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಲು ಸಾಧ್ಯವಿರಲಿಲ್ಲ. ಕೇವಲ, ಒಂದಿಷ್ಟು ಆಸ್ತಿಗಳ ವಿವರ ಮಾತ್ರ ಆನ್ ಲೈನ್‌ನಲ್ಲಿದ್ದವು. ಆದರೆ ಇನ್ನು ಮುಂದೆ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆಸ್ತಿ ತೆರಿಗೆ ಪಾವತಿಸಬಹುದು. ಇದಕ್ಕಾಗಿ ಹೊಸ ತಂತ್ರಾಶವನ್ನು ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಪಡಿಸಿದೆ. ಇದು ಈ ಆರ್ಥಿಕ ವರ್ಷದಿಂದಲೇ ಜಾರಿಗೆ ಬಂದಿದೆ.
ಈ ಹೊಸ ತಂತ್ರಜ್ಞಾನದ ಅನುಷ್ಠಾನಕ್ಕೆ ಮೈಸೂರು ಮಹಾನಗರ ಪಾಲಿಕೆ, ಆಸ್ತಿಗಳ ಸಂಪೂರ್ಣ ಸರ್ವೆ ಆರಂಬಿಸಿದೆ. ಬಳಿಕ, ಆಸ್ತಿಗಳ ಜಿಯೋ ಸ್ಟಾಂಪಿಂಗ್ ಮಾಡಲಾಗುತ್ತದೆ. ಅಂದರೆ ಒಟ್ಟಾರೆ ಆಸ್ತಿಗಳ ಒಟ್ಟು ವಿಸ್ತೀರ್ಣ, ಅಂತಸ್ತು ಮತ್ತು ಆಸ್ತಿಯ ಉಪಯೋಗದ ಬಗ್ಗೆ ಸರ್ವೆ ಮಾಡಿ ಕಟ್ಟಡದ 3 ಕಡೆಯ ಛಾಯಾಚಿತ್ರ (ಜಿಯೋ ಸ್ಟಾಂಪಿಂಗ್) ತೆಗೆಯುವುದರ ಜೊತೆಗೆ ಪ್ರತ್ಯೇಕವಾದ ಕ್ಯೂಆರ್ ಕೋಡ್ ಸ್ಟಿಕ್ಕರ್ ನ್ನು ಆಸ್ತಿಗಳಿಗೆ ಆಂಟಿಸಲಾಗುತ್ತದೆ.
ಈ ರೀತಿ ಪ್ರತಿ ಆಸ್ತಿಗೆ ಒಂದೊಂದು ಕ್ಯೂಆರ್ ಕೋಡ್ ನೀಡುವುದರಿಂದ ಆಸ್ತಿ ಮಾಲಿಕರು ಆಸ್ತಿ ತೆರಿಗೆ ಪಾವತಿಯನ್ನು ಕ್ಷಣಾರ್ಧದಲ್ಲಿ ಮುಗಿಸಬಹುದಾಗಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಇದೀಗ ಪಾಲಿಕೆಯ ಅಧಿಕಾರಿಗಳು, ಪ್ರತಿ ಕಟ್ಟಡ, ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ಜಿಯೋ ಮ್ಯಾಪಿಂಗ್ ಮಾಡುತ್ತಿದ್ದಾರೆ. ಒಮ್ಮೆ ಜಿಯೋ ಸ್ಟ್ಯಾಂಪಿಂಗ್ ಮಾಡಿದ ಬಳಿಕ, ಶಾಶ್ವತವಾಗಿ ತೆರಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳುತ್ತವೆ.
ಬಹುಪಯೋಗಿ ವ್ಯವಸ್ಥೆ: ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಆಸ್ತಿ ತೆರಿಗೆ ಜೊತೆಗೆ, ಪಾಲಿಕೆಗೆ ಸಂಬಂಧಿಸಿದ ಇನ್ನಿತರೆ ಉಪಯುಕ್ತ ಸೇವೆಗಳನ್ನು ಅಂದರೆ ನೀರಿನ ತೆರಿಗೆ ಪಾವತಿ ,ಉದ್ದಿಮೆ ರಹದಾರಿ , ಸ್ವಚ್ಛ ಸರ್ವಕ್ಷಣಾ ಮಾಹಿತಿಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆಯುವುದನ್ನು ಸಹ ತಪ್ಪಿಸಿ ಮನೆಯಿಂದಲೇ ನೇರವಾಗಿ ಮಾಹಿತಿ ಪಡೆಯಬಹುದಾಗಿದೆ.
ಮೈಸೂರು, ಆಸ್ತಿ ತೆರಿಗೆ ಪಾವತಿ ಹೇಗೆ?
ಮೈಸೂರಿನಲ್ಲಿ ಪ್ರಸ್ತುತ ಎರಡು ತೆರನಾಗಿ ಈಗ ಆಸ್ತಿ ತೆರಿಗೆ ಪಾವತಿಸಬಹುದು.
- ಆಫ್‌ಲೈನ್
- ಆನ್‌ಲೈನ್
ಆಫ್‌ಲೈನ್ ತೆರಿಗೆ ಪಾವತಿ ವಿಧಾನ
ಮಹಾನಗರ ಪಾಲಿಕೆಯ ೮ ವಿಭಾಗ ಕಚೇರಿಗಳಲ್ಲಿ ಆಸ್ತಿತೆರಿಗೆ ಪಾವತಿಗೆ ಅವಕಾಶವಿದೆ. ೬೫ ವಾರ್ಡ್‌ಗಳನ್ನು ೮ ವಿಭಾಗ ಕಚೇರಿಗಳ ಮಧ್ಯೆ ವಿಂಗಡಿಸಲಾಗಿದೆ.
ಈ ಕಚೇರಿಗಳ ವಿವರ ಇಲ್ಲಿದೆ
ಈ ಕಚೇರಿಗೆ ತೆರಳಿ, ನಿಗದಿತ ಅರ್ಜಿ ನಮೂನೆ ತುಂಬಿ, ಚೆಕ್ ಅಥವಾ ನಗದು ಮೂಲಕ ತೆರಿಗೆ ಪಾವತಿಸಲು ಸಾಧ್ಯವಿದೆ. ಇದೇ ಕಚೇರಿಗಳಲ್ಲಿ ಉದ್ಯಮ ಲೈಸೆನ್ಸ್ ಕೂಡಾ ನವೀಕರಿಸಬಹುದು ಅಥವಾ ಹೊಸ ಲೈಸೆನ್ಸ್ ಪಡೆಯಬಹುದು.
ಆನ್‌ಲೈನ್ ವಿಧಾನ
- ಮೈಸೂರು ಮಹಾನಗರ ಪಾಲಿಕೆಯ ವೆಬ್‌ಸೈಟ್ ಇಲ್ಲಿಗೆ ಭೇಟಿ ನೀಡಿ.
- ಬಳಿಕ ಇಲ್ಲಿಗೆ ಭೇಟಿ ನೀಡಿ ಆನ್‌ಲೈನ್ ಆಸ್ತಿತೆರಿಗೆ ಪಾವತಿ ಲಿಂಕ್ ತೆರೆಯಿರಿ
- ಬಳಿಕ ನಿಮ್ಮ ಆಸ್ತಿಯ ವಿವರವನ್ನು ಇಲ್ಲಿ ಹುಡುಕಿರಿ
- ನಿಮ್ಮ ಆಸ್ತಿಗೆ ಪಿಐಡಿ ಸಂಖ್ಯೆಯನ್ನು ನಗರಾಭಿವೃದ್ಧಿ ಇಲಾಖೆ ನೀಡಿದ್ದರೆ, ಈ ಲಿಂಕ್ ತೆರೆಯಿರಿ
- ನೀವು ಅಂತರ್ಜಾಲ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆಸ್ತಿ ತೆರಿಗೆಯನ್ನು ಕ್ಷಣಾರ್ಧದಲ್ಲಿ ಪಾವತಿಸಬಹುದು. ಈ ವ್ಯವಸ್ಥೆಯನ್ನು ವಿಶ್ವದ ಯಾವುದೇ ಭಾಗದಿಂದ ಉಪಯೋಗಿಸಬಹುದು.
Related Readings
- In English: Scan QR Code And Pay Mysore Property Tax Online