X

ಶಿಲ್ಪಕಲೆಯ ಮಹಾ ಅನುಭೂತಿ: ಹಂಪಿ ವಿಜಯ ವಿಠಲ ದೇವಸ್ಥಾನ

    Categories: Hampi

ಹಂಪಿ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಪುರಾತನ ದೇಗುಲಗಳ ಮಹಾಗುಚ್ಛ. ಪ್ರಾಚೀನ
ಭಾರತೀಯ ಶಿಲ್ಪಕಲೆಯ ಸೊಬಗು-ಸೊಗಸು ಇಲ್ಲಿ ಮೇಳೈಸಿದೆ. ಈ ಎಲ್ಲಾ ದೇಗುಲಗಳಿಗೆ
ಕಲಶವಿಟ್ಟಂತೆ ಇರುವುದು ಸದಾ ಜುಳುಜುಳುಯೆಂದು ಹರಿಯುವ ತುಂಗಭದ್ರ ನದಿ ತಟದದಲ್ಲಿರುವ
ವಿಟಲಾ ಅಥವಾ ವಿಠ್ಠಲ ದೇವಾಲಯ. ಇದೊಂದು ಅತ್ಯಂತ ಪುರಾತನ ದೇಗುಲವಾಗಿದ್ದು, ಇದು
ಅನನ್ಯ, ಅಸಾಧಾರಣ, ವಿಶಿಷ್ಟ ಬಗೆಯ ವಾಸ್ತುಶಿಲ್ಪ ಮತ್ತು ಸರಿಸಾಟಿಯಿಲ್ಲದ
ಕರಕುಶಲತೆಯ ಶಿಲ್ಪಕಲಾ ವೈಭವಕ್ಕೆ ಜಗತ್ಪ್ರಸಿದ್ಧವಾಗಿದೆ. ಇದು ಹಂಪಿಯ ಅತಿ ದೊಡ್ಡ
ಮತ್ತು ಅತ್ಯಂತ ಜನಪ್ರಿಯ ದೇವಾಲಯ. ಇದು ಹಂಪಿಯ ಈಶಾನ್ಯ ಭಾಗದಲ್ಲಿದೆ.

ಈ ದೇಗುಲದ ಶಿಲ್ಪಕಲೆ, ಸೌಂದರ್ಯವನ್ನು ಇನ್ನೊಂದು ದೇಗುಲದ ಜೊತೆಗೆ ತುಲನೆ
ಮಾಡಲಾಗದಷ್ಟು, ಇಲ್ಲಿನ ಕಲಾಕೃತಿ ಅದ್ಭುತವಾಗಿದೆ. ಇಲ್ಲಿನ ಕಲ್ಲಿನ ರಥ ಮತ್ತು
ಸಂಗೀತ ಸ್ತಂಭಗಳಂತಹ ಅದ್ಭುತ ಕಲ್ಲಿನ ರಚನೆಗಳನ್ನು ನಮ್ಮ ಕಣ್ತುಂಬಿಕೊಂಡೆ ಅವುಗಳ
ಸೌಂದರ್ಯವನ್ನು ಅಸ್ವಾದಿಸಬೇಕಿದೆ. . ಹಂಪಿಯ ಈ ಪ್ರಮುಖ ದೇಗುಲವು ಪಾಳುಬಿದ್ದ ಈ
ಐತಿಹಾಸಿಕ ನಗರದ ಪ್ರಮುಖ ಆಕರ್ಷಣೆಯಾಗಿದೆ ಮತ್ತು ಪ್ರವಾಸಿಗರು ಮತ್ತು ಇಲ್ಲಿಗೆ
ಭೇಟಿ ನೀಡುವವರೆಲ್ಲರೂ ನೋಡಲೇಬೇಕಾದ ಸ್ಥಳವಾಗಿದೆ.

ನೀವು ತಿಳಿದಿರಬೇಕಾದ ಪ್ರಮುಖ ಮಾಹಿತಿಗಳು

ಭೇಟಿಯ ಸಮಯ: ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8:30 ರಿಂದ ಸಂಜೆ 5:00 ರವರೆಗೆ
ಪ್ರವೇಶ ಶುಲ್ಕ: ಪ್ರವೇಶ ಶುಲ್ಕದ ಅಗತ್ಯವಿಲ್ಲ

ಛಾಯಾಗ್ರಹಣ: ಅನುಮತಿಸಲಾಗಿದೆ
ವೀಡಿಯೋ ಚಿತ್ರೀಕರಣ: ಅನುಮತಿಸಲಾಗಿದೆ
ಈ ದೇಗುಲದ ಭೇಟಿಗೆ ಪ್ರಶಸ್ತ ಸಮಯ: ಸುಮಾರು 3 ಗಂಟೆ
ಭೇಟಿ ನೀಡಲು ಉತ್ತಮ ತಿಂಗಳುಗಳು: ನವೆಂಬರ್‌ನಿಂದ ಫೆಬ್ರವರಿವರೆಗೆ

ಹಂಪಿಯ ವಿಜಯ ವಿಠಲ ದೇವಾಲಯದ ಇತಿಹಾಸ

ಈ ಹೆಸರಾಂತ ದೇಗುಲವು, 15 ನೇ ಶತಮಾನಕ್ಕೂ ಹಿಂದೆ ನಿರ್ಮಿಸಲ್ಪಟ್ಟಿದೆ. ಈ
ದೇಗುಲವನ್ನು ವಿಜಯನಗರ ಸಾಮ್ರಾಜ್ಯದ ರಾಜರುಗಳಲ್ಲಿ ಒಬ್ಬರಾದ ರಾಜ ದೇವರಾಯ II
(ಕ್ರಿಸ್ತಶಕ 1422 – 1446) ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಯಿತು. ವಿಜಯನಗರ
ರಾಜವಂಶದ ಅತ್ಯಂತ ಪ್ರಸಿದ್ಧ ಸಾರ್ವಭೌಮ ರಾಜರುಗಳಲ್ಲಿ ಒಬ್ಬರಾದ ಕೃಷ್ಣದೇವರಾಯ
(ಕ್ರಿಸ್ತಶಕ 1509 – 1529) ಆಳ್ವಿಕೆಯ ಅವಧಿಯಲ್ಲಿ ಈ ದೇವಾಲಯವನ್ನು
ವಿಸ್ತರಿಸಲಾಯಿತು ಹಾಗೂ ಹಲವಾರು ಹೊಸ ವಿಭಾಗಗಳನ್ನು ಸೇರಿಸಲಾಯಿತು. ಈ ದೇಗುಲದ ಅಂದ
ಹೆಚ್ಚಿಸಿ, ಅದು ಜನಮನ ಸೂರೆಗೊಳ್ಳುವಂತೆ ಮಾಡಿ, ಇಂದಿಗೂ ಪ್ರವಾಸಿಗರನ್ನು ಕೈ ಬೀಸಿ
ಕರೆಯುವಂತೆ ಮಾಡುವಲ್ಲಿ, ಅವರ ಕಾಣಿಕೆ ಅಪಾರವಾದುದು.

ಈ ವಿಠಲ ದೇಗುಲವನ್ನು, ಶ್ರೀ ವಿಜಯ ವಿಠಲ ದೇವಾಲಯ ಎಂದೂ ಕರೆಯುತ್ತಾರೆ. ಇದನ್ನು
ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗಿರುವ ವಿಠ್ಠಲನಿಗೆ ಸಮರ್ಪಿಸಲಾಗಿದ್ದು
ಇಲ್ಲಿನ ದೇವತೆ ಶ್ರೀ ವಿಜಯ ವಿಠಲ.
ಇಲ್ಲಿ ವಿಷ್ಣುವಿನ ವಿಠ್ಠಲ ರೂಪದ ಮೂರ್ತಿ ಇದ್ದು ಅದನ್ನು ದೇವಾಲಯದಲ್ಲಿ
ಪ್ರತಿಷ್ಠಾಪಿಸಲಾಗಿದೆ ಎಂಬ ಐತಿಹ್ಯವಿದೆ. ಅದೇನೆ ಇರಲಿ, ಭಗವಂತನು ತನಗಾಗಿ ಈ ಭವ್ಯ
ದೇವಾಲಯವನ್ನು ಕಂಡುಕೊಂಡಿದ್ದು, ಇಲ್ಲಿಂದಲೇ ಎಲ್ಲರನ್ನೂ ಹರಸುತ್ತಿದ್ದಾನೆ.

ಭವ್ಯ ವಾಸ್ತುಶಿಲ್ಪದ ಆಕರ್ಷಣೆ

ವಿಜಯ ವಿಠಲ ದೇಗುಲವು ಹಂಪಿಯ ಎಲ್ಲಾ ಐತಿಹಾಸಿಕ ಸ್ಮಾರಕ, ದೇಗುಲಗಳಿಗಿಂತ ಹೆಚ್ಚು
ಶ್ರೇಷ್ಠ ಹಾಗೂ ಸುಂದರ ಎಂದೇ ಪರಿಗಣಿತವಾಗಿದೆ. ಈ ದೇಗುಲವು, ವಿಜಯನಗರ ಸಾಮ್ರಾಜ್ಯದ
ಆಳ್ವಿಕೆಯ ಯುಗದ ಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಸೃಜನಶೀಲತೆ ಮತ್ತು
ವಾಸ್ತುಶಿಲ್ಪದ ಅರಿವು ಹಾಗೂ ಕೆತ್ತನೆಯ ಶ್ರೇಷ್ಠತೆಯನ್ನು ಜಗದಗಲಕ್ಕೆ ಸಾರಿ
ಹೇಳುವಂತಿದೆ.

ಈ ದೇಗುಲ, ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಇದು ದ್ರಾವಿಡ
ಶೈಲಿಯ ಅಂದರೆ, ದಕ್ಷಿಣ ಭಾರತದ ದೇವಾಲಯದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳು ಮತ್ತು
ವೈಶಿಷ್ಟ್ಯಗಳನ್ನು ತನ್ನಲ್ಲಿ ಆವಾಹಿಸಿಕೊಂಡಿದೆ. ಇದರ ವಿಸ್ತಾರವಾದ ಮತ್ತು
ಕಲಾತ್ಮಕ ಕೆತ್ತನೆಗಳು ಮತ್ತು ಭವ್ಯವಾದ ವಾಸ್ತುಶಿಲ್ಪಕ್ಕೆ ಹಂಪಿಯ ಉಳಿದ ಸ್ಮಾರಕಗಳು
ಸಾಟಿಯಲ್ಲ ಎಂದರೆ ತಪ್ಪಾಗಲಾರದು.

ದೇವಾಲಯದ ಮುಖ್ಯ ಗರ್ಭಗುಡಿಯು ಮೂಲತಃ ಮಂಟಪದಿಂದ ಆವೃತಗೊಂಡಿತ್ತು ಎಂದು
ನಂಬಲಾಗಿದೆ. ಕ್ರಿಸ್ತಶಕ 1554ರಲ್ಲಿ ಈ ದೇಗುಲಕ್ಕೆ ಒಂದು ತೆರೆದ ಮಂಟಪವನ್ನು
ಸೇರಿಸಲಾಯಿತು.

ದೇವಾಲಯದ ಸಂಕೀರ್ಣವು ಒಂದು ವಿಸ್ತಾರವಾದ ಪ್ರದೇಶ. ಇದರ ಸುತ್ತ ಎತ್ತರದ ಪೌಳಿ ಹಾಗೂ
ಮೂರು ಎತ್ತರದ ಪ್ರವೇಶ ದ್ವಾರಗಳಿವೆ. ಈ ದೇವಾಲಯ ಸಂಕೀರ್ಣವು ಅನೇಕ ಸಭಾಂಗಣಗಳು,
ದೇವಾಲಯಗಳು ಮತ್ತು ಮಂಟಪಗಳನ್ನು ಹೊಂದಿದೆ. ಈ ಪ್ರತಿಯೊಂದು ರಚನೆಗಳೂ ಕೂಡಾ
ಶಿಲ್ಪದಿಂದ ಕೆತ್ತಲ್ಪಟ್ಟಿವೆ. ಪ್ರತಿಯೊಂದು ರಚನೆ ಕೂಡಾ ಇನ್ನೊಂದಕ್ಕಿಂತ
ವಿಭಿನ್ನವಾಗಿದ್ದು ವಾಸ್ತುಶಿಲ್ಪದ ಕಲೆಯಿಂದ ನೋಡುಗರನ್ನು ಕೈಬೀಸಿ ಕರೆಯುತ್ತಿವೆ.

ಈ ರಚನೆಗಳಲ್ಲಿ ಗಮನಾರ್ಹವಾದುದು ದೇವಿಯ ದೇಗುಲ. ಇದನ್ನು ದೇವಿಯ ದೇಗುಲ ಎಂದೂ
ಕರೆಯುತ್ತಾರೆ. ಇತರ ಆಕರ್ಷಣೆಗಳೆಂದರೆ ದೇಗುಲದ ಮಹಾ ಮಂಟಪ ಅಥವಾ ಮುಖ್ಯ ಸಭಾಂಗಣ.
ಇದನ್ನು ಸಭಾ ಮಂಟಪ ಅಥವಾ ಸಭಾಂಗಣ ಸಭೆ ಎಂದೂ ಕರೆಯುತ್ತಾರೆ. ರಂಗ ಮಂಟಪ, ಕಲ್ಯಾಣ
ಮಂಟಪ (ಮದುವೆ ಸಭಾಂಗಣ), ಉತ್ಸವ ಮಂಟಪ (ಉತ್ಸವ ಸಭಾಂಗಣ) , ಮತ್ತು ಸುಪ್ರಸಿದ್ಧ
ಕಲ್ಲಿನ ರಥಗಳು ಇಲ್ಲಿನ ಇತರ ಪ್ರಮುಖ ಆಕರ್ಷಣೆಗಳು.

ಹಂಪಿಯ ವಿಠಲ ದೇವಸ್ಥಾನದ ಪ್ರಮುಖ ಆಕರ್ಷಣೆಗಳು

ವಿಜಯ ನಗರ ಅರಸರ ಕಾಲದಲ್ಲಿ ಹಂಪಿಯಲ್ಲಿ ನಿರ್ಮಾಣಗೊಂಡ ದೇಗುಲಗಳ ಪೈಕಿ ಅತ್ಯಂತ
ಅಲಂಕೃತ ದೇಗುಲವೆಂದೇ, ಈ ವಿಜಯ ವಿಠಲ ದೇಗುಲವನ್ನು ಕರೆಯುತ್ತಾರೆ. ಇದು ಶಿಲ್ಪಕಲೆ,
ಕರಕುಶಲತೆ, ಕಲಾತ್ಮಕತೆಗಳ ಬೀಡು. ಈ ದೇವಾಲಯದ ತುಂಬೆಲ್ಲಾ ಹಲವಾರು
ಆಕರ್ಷಣೆಗಳಿವೆ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ನೋಡಲೇಬೇಕಾದ
ವಾಸ್ತುಶಿಲ್ಪದ ನೆಲೆವೀಡು ಇದಾಗಿದೆ. ವಾಸ್ತವವಾಗಿ ಇಡೀ ಹಂಪಿಯಲ್ಲಿ ಅತಿ ಹೆಚ್ಚು
ಪ್ರವಾಸಿಗರು ಭೇಟಿ ನೀಡುವ ರಚನೆ ಇದೇ ಆಗಿದೆ. ಇದರ ಇನ್ನೊಂದು ಹೆಗ್ಗಳಿಕೆ ಎಂದರೆ,
ಹಂಪಿಯಲ್ಲಿ ಅತಿ ಹೆಚ್ಚು ಛಾಯಾ ಚಿತ್ರ ತೆಗೆಯಲ್ಪಟ್ಟ ದೇಗುಲ ಇದಾಗಿದೆ.

ಪ್ರಮುಖ ಆಕರ್ಷಣೆಗಳು

ಮಹಾ ಮಂಟಪ: ಹಂಪಿಯೆಂದರೆ, ನಮ್ಮ ಕಣ್ಮುಂದೆ ಸುಳಿಯುವ ಆಕರ್ಷಣೆಗಳಲ್ಲಿ ಮಹಾ ಮಂಟಪ ಕೂಡಾ ಒಂದು. ಇದು, ವಿಠಲ ದೇಗುಲದ ಅವಿಭಾಜ್ಯ ಅಂಗವಾಗಿದೆ. ಇದರ ಇನ್ನೊಂದು ಹೆಸರು ಮುಖ್ಯ ಸಭಾಂಗಣ. ಇದು ದೇವಾಲಯ ಸಂಕೀರ್ಣದ ಒಳ ಪ್ರಾಂಗಣದಲ್ಲಿದೆ. ಇದರ ಸೌಂದರ್ಯ ಖನಿಗೆ ಹೋಲಿಕೆ ಇಲ್ಲ. ಇದರ ತಳಪಾಯ ಅಂದರೆ, ಪಂಚಾಂಗ, ಅತ್ಯಂತ ಅಲಂಕೃತವಾಗಿದ್ದು ಹಲವಾರು ಶಿಲ್ಪಕೆತ್ತನೆಗಳು ಇದರ ಅಂದವನ್ನು ನೂರ್ಮಡಿಗೊಳಿಸಿವೆ. ಇಲ್ಲಿರುವ ಪ್ರಮುಖ ಕೆತ್ತನೆಗಳೆಂದರೆ, ಯೋಧರು, ಅಶ್ವದಳ, ಹಂಸ ಇತ್ಯಾದಿಗಳು.

ಈ ಮಹಾ ಮಂಟಪದಲ್ಲಿ ನಾಲ್ಕು ಸಣ್ಣ ಸಭಾಂಗಣಗಳಿವೆ. ಮಹಾ ಮಂಟಪದ ಪೂರ್ವ
ದಿಕ್ಕಿನಲ್ಲಿರುವ ಮೆಟ್ಟಿಲುಗಳನ್ನು ಆನೆಯ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ದೇವಾಲಯದ
ಮುಂಭಾಗದಲ್ಲಿ ನಲವತ್ತು ಸ್ತಂಭಗಳಿವೆ. ಈ ಪ್ರತಿಯೊಂದು ಕಂಬಗಳು 10 ಅಡಿ
ಎತ್ತರದ್ದಾಗಿವೆ.

ಮಹಾ ಮಂಟಪದ ಮಧ್ಯ ಭಾಗದಲ್ಲಿ ಹದಿನಾರು ಕರಕುಶಲತೆಯಿಂದ ಕೆತ್ತಿರುವ ಸ್ತಂಭಗಳಿವೆ.
ಇವುಗಳು ವಿಷ್ಣುವಿನ ಅವತಾರ ನರಸಿಂಹ ಮತ್ತು ಕಾಳಿಯ ಸುಂದರ ಶಿಲ್ಪಗಳನ್ನು ಹೊಂದಿವೆ. ಈ
ಹದಿನಾರು ಸ್ತಂಭಗಳು, ಆಯತಾಕಾರದ ಒಂದು ಸಂಕೀರ್ಣ ನಿರ್ಮಿಸಿವೆ. ಮಹಾ ಮಂಟಪದ
ಮೇಲ್ಬಾಗ ಕುಸುರಿ ಕೆತ್ತನೆಯ ಶ್ರೀಮಂತಿಕೆಗೆ ಸಾಕ್ಷಿಯಂತಿವೆ. . ಮಹಾ ಮಂಟಪದಲ್ಲಿ
ಇರುವ ಸುಂದರವಾದ ಕೆತ್ತನೆಯ ಅಲಂಕೃತ ಕಂಬಗಳು ಈ ಭವ್ಯವಾದ ದೇವಾಲಯದ ವೈಭವಕ್ಕೆ
ಇನ್ನಷ್ಟು ಮೆರುಗು ನೀಡಿವೆ.

ಕಲ್ಲಿನ ರಥ: ಈ ವಿಠಲ ದೇಗುಲದ ಇನ್ನೊಂದು ಮಹಾನ್‌ ಆಕರ್ಷಣೆ ಎಂದರೆ, ಇಲ್ಲಿನ ಕಲ್ಲಿನ
ರಥ. ಇದು ಅಂದಿನ ಶಿಲ್ಪಿಗಳ ಅಸಾಧಾರಣ ಸೃಜನಶೀಲತೆಗೆ ಕನ್ನಡಿ ಹಿಡಿಯುತ್ತದೆ. ಇದರ
ಮಹೋನ್ನತ ಸೌಂದರ್ಯ ನೋಡುಗರನ್ನು ಮಂತ್ರಮುಗ್ದ ಗೊಳಿಸುತ್ತದೆ. ಈ ಕಲ್ಲಿನ ರಥವನ್ನು
ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ-ಕೆತ್ತನೆಗಳ ಪೈಕಿ ಅದ್ಭುತ ವಾಸ್ತುಶಿಲ್ಪವೆಂದು
ಪರಿಗಣಿಸಲಾಗಿದೆ. ಇದು ದೇಗುಲದ ಪ್ರಾಂಗಣದಲ್ಲಿ ನಿಂತಿದೆ. ಇದು ಭಾರತದ ಮೂರು
ಪ್ರಸಿದ್ಧ ಕಲ್ಲಿನ ರಥಗಳಲ್ಲಿ ಒಂದಾಗಿದೆ. ಇತರ ಎರಡು ರಥಗಳು ಕೊನಾರ್ಕ್ (ಒಡಿಸ್ಸಾ)
ಮತ್ತು ಮಹಾಬಲಿಪುರಂ
(ತಮಿಳುನಾಡು) ನಲ್ಲಿವೆ. ಈ ಮೂರೂ ಕಲ್ಲಿನ ರಥಗಳು ನಮ್ಮ ಹಿಂದಿನವರ ಕಲಾ
ನೈಪುಣ್ಯಕ್ಕೆ ಸಾಕ್ಷಿಯೆಂಬತೆ ಸದಾ ಆಕರ್ಷಿಸುತ್ತಿವೆ.

ಈ ಕಲ್ಲಿನ ರಥವು ವಾಸ್ತವವಾಗಿ ಒಂದು ಅಲಂಕಾರಿಕ ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾದ
ದೇವಾಲಯವಾಗಿದೆ. ಈ ದೇವಾಲಯವು ಗರುಡನಿಗೆ ಸಮರ್ಪಿತವಾಗಿದೆ ಮತ್ತು
ಗರುಡನ ಚಿತ್ರವನ್ನು ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ,
ಗರುಡನು ವಿಷ್ಣುವಿನ ವಾಹಕ. ಈ ಹಿನ್ನೆಲೆಯಲ್ಲಿ ಸೂಚ್ಯವಾಗಿ ಗರುಡನ ದೇಗುಲವನ್ನು
ಇಲ್ಲಿ ಕಲ್ಲಿನ ರಥದ ಮಾದರಿಯಲ್ಲಿ ಕೆತ್ತಲಾಗಿದೆ.

ರಂಗ ಮಂಟಪದ ಸಂಗೀತ ಸ್ತಂಭಗಳು: ಈ ದೇಗುಲದ ಇನ್ನೊಂದು ಪ್ರಮುಖ ಆಕರ್ಷಣೆ ರಂಗ ಮಂಟಪ. ಹಂಪಿಗೆ ಭೇಟಿ ನೀಡುವವರು ತಪ್ಪದೆ ನೋಡಲೇ ಬೇಕಾದ ಆಕರ್ಷಣೆ ಇದು. ಈ ದೊಡ್ಡ ಮಂಟಪ 56 ಸಂಗೀತ ಸ್ತಂಭಗಳಿಗೆ ಹೆಸರುವಾಸಿಯಾಗಿದೆ. ಈ ಸಂಗೀತ ಸ್ತಂಭಗಳನ್ನು ಸರೆಗಮಾ ಸ್ತಂಭಗಳು ಎಂದೂ ಕರೆಯುತ್ತಾರೆ. ಈ ಹೆಸರು ಅವು ಹೊರಸೂಸುವ ಸಂಗೀತದ ಸ್ವರಗಳನ್ನು ಸೂಚಿಸುತ್ತವೆ. ಸ್ತಂಭಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತದ ನಾನಾ ಸ್ವರಗಳು ಹೊರಹೊಮ್ಮುತ್ತವೆ. ಇಂತಹ ಅನನ್ಯ ಸ್ತಂಭಗಳು ಜಗತ್ತಿನ ಬೇರೆಯಾವುದೇ ಭಾಗದಲ್ಲಿ ಕಾಣಸಿಗಲಾರದು.

ಈ ಮಂಟಪದಲ್ಲಿ ಮುಖ್ಯ ಸ್ತಂಭಗಳ ಒಂದು ಗುಂಪು ಮತ್ತು ಹಲವಾರು ಸಣ್ಣ ಸ್ತಂಭಗಳಿವೆ.
ಪ್ರತಿಯೊಂದು ಮುಖ್ಯ ಸ್ತಂಭವು ರಂಗ ಮಂಟಪದ ಆಕಾರಕ್ಕೆ ಬೆಂಬಲವಾಗಿ ನಿಲ್ಲುವಂತಹ
ಜಾಣ್ಮೆಯನ್ನು ಶಿಲ್ಪಿಗಳು ತೋರಿದ್ದಾರೆ. ಇದರ ಜೊತೆಗೆ, ಮುಖ್ಯ ಸ್ತಂಭಗಳನ್ನು ಸಂಗೀತ ವಾದ್ಯಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವುಗಳ ಕೆತ್ತನೆಯ ಕಲೆ, ಪ್ರತಿಭೆ ನೋಡುಗರ
ಮನಸೂರೆಗೊಳ್ಳುತ್ತದೆ.

ಇನ್ನು ಪ್ರತಿಯೊಂದು ಮುಖ್ಯ ಸ್ತಂಭವೂ, 7 ಸಣ್ಣ ಸ್ತಂಭಗಳಿಂದ ಸುತ್ತುವರೆದಿದೆ. ಈ 7
ಸ್ತಂಭಗಳು ಸಂಗೀತದ ಸಪ್ತ ಸ್ವರಗಳನ್ನು ಪ್ರತಿನಿಧಿಸುತ್ತಿದ್ದು, ಅವುಗಳನ್ನು ಮೀಟಿದಾಗ
ನಾನಾ ಸ್ವರಗಳು ಹೊರಹೊಮ್ಮುತ್ತವೆ. ಈ ಸ್ತಂಭಗಳಿಂದ ಹೊರಹೊಮ್ಮುವ ಸಂಗೀತ ಸ್ವರಗಳು
ತಾಳವಾದ್ಯ, ಮೀಟುವ ಅಥವಾ ಊದುವ ಸಾಧನವೇ ಎಂಬುದನ್ನು ಅವಲಂಬಿಸಿದ್ದು, ಆ ಪ್ರಕಾರವಾಗಿ,
ಅವುಗಳ ಧ್ವನಿ ಗುಣಮಟ್ಟ ಬದಲಾಗುತ್ತದೆ.

ಈ ದೇಗುಲದ ಸಂಗೀತ ಸ್ತಂಭಗಳ ಬಗ್ಗೆಗಿನ ಕೆಲವು ಕುತೂಹಕಾರಿ ಸಂಗತಿಗಳು

ವಿಜಯ ವಿಠಲ ದೇವಾಲಯ ಸಂಕೀರ್ಣದೊಳಗಿರುವ ಈ ಸಂಗೀತ ಸ್ತಂಭಗಳ ಸಮೂಹವನ್ನು ಪದರು
ಪದರಾಗಿರುವ ಏಕಶಿಲೆಗಳಿಂದ ಕೆತ್ತಲಾಗಿದೆ. ಕಲ್ಲಿನ ಸ್ತಂಭಗಳಿಂದ ಸಂಗೀತ ಸ್ವರಗಳು, ಶತಮಾನಗಳವರೆಗೆ, ಜನಸಾಮಾನ್ಯರಿಗೆ ಕುತೂಹಲಕಾರಿ ಸಂಗತಿಯಾಗಿತ್ತು. ಇಲ್ಲಿಗೆ ಭೇಟಿ ನೀಡುವವರ ಪಾಲಿಗೆಲ್ಲಾ ಅದು ಯಕ್ಷ ಪ್ರಶ್ನೆಯಂತಿತ್ತು. ಇದು ಅಂದಿನ ಬ್ರಿಟಿಷ್‌ ಅಧಿಕಾರಿಗಳನ್ನೂ ಮಂತ್ರ ಮುಗ್ದಗೊಳಿಸಿತ್ತು. ಅವರು ಇದರ ಹಿಂದಿನ ರಹಸ್ಯವನ್ನು ಕಂಡುಹಿಡಿಯಲು ಯತ್ನಿಸಿದ್ದರು. ಈ ಕುತೂಹಲಕ್ಕೆ ತೆರೆ ಎಳೆಯುವ ಕಾರಣಕ್ಕಾಗಿಯೆ ಅವರು ಎರಡು ಸಂಗೀತ ಸ್ತಂಭಗಳನ್ನು ಕತ್ತರಿಸಿ, ಅದರೊಳಗಿಂದ ಸಂಗೀತ ಸ್ವರಗಳು ಮೂಡಿ ಬರಲು ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಆದರೆ, ಕಂಬಗಳ ಒಳಗೆ ಏನೂ ಕಂಡುಬಂದಿಲ್ಲ.

ಹೀಗೆ ಬ್ರಿಟಿಷ್ ಅಧಿಕಾರಿಗಳಿಂದ ಕತ್ತರಿಸಲ್ಪಟ್ಟ ಎರಡು ಸ್ತಂಭಗಳು ದೇವಾಲಯದ
ಸಂಕೀರ್ಣದೊಳಗೆ ಇಂದಿಗೂ ಹಾಗೆ ಇವೆ. ದೇಗುಲಕ್ಕೆ ಭೇಟಿ ನೀಡುವವರು ಇಂದಿಗೂ ಅದನ್ನು
ಕಣ್ತುಂಬಿಕೊಳ್ಳಬಹುದು.

ಈ ದೇಗುಲ ಈಗ ಹೇಗಿದೆ?

ಹಂಪಿಗೆ ಕನ್ನಡದಲ್ಲಿ ಹಾಳು ಹಂಪಿ ಎಂದೂ ಕರೆಯುತ್ತಾರೆ. ಏಕೆಂದರೆ, ಇಲ್ಲಿನ ಬಹುತೇಕ
ಐತಿಹಾಸಿಕ ಕಟ್ಟಡಗಳು, ದೇಗುಲಗಳು ಬಹುಶ: ಹಾಳಾದ ಸ್ಥಿತಿಯಲ್ಲಿವೆ. ಈ ಮಾತಿಗೆ ವಿಜಯ
ವಿಠಲ ದೇಗುಲ ಕೂಡಾ ಹೊರತಲ್ಲ. ವಾಸ್ತವದಲ್ಲಿ, ದೇವಾಲಯದ ಗರ್ಭಗೃಹದಲ್ಲಿ ವಿಠಲನ
ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಆದರೆ, ಈಗ ಗರ್ಭಗೃಹದಲ್ಲಿ ಯಾವುದೇ
ವಿಗ್ರಹಗಳಿಲ್ಲ. ಖಾಲಿ ಗರ್ಭಗೃಹ ಎಲ್ಲರ ಮನಸ್ಸನ್ನು ಭಾರವಾಗಿಸುತ್ತದೆ. 1565
ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ತಾಳಿಕೋಟಿ ಯುದ್ಧದ ಬಳಿಕ ಹಂಪಿ
ಭಾಗಶ: ನಾಶಗೊಂಡಿತು. ದೇವಾಲಯದ ಮಧ್ಯ ಪಶ್ಚಿಮ ಸಭಾಂಗಣವು ಬಹಳ ಹಿಂದೆಯೇ
ಹಾಳಾಗಿತ್ತು.

ಕಲ್ಲಿನ ರಥದ ಚಕ್ರಗಳು ಒಂದು ಕಾಲದಲ್ಲಿ ಸುಸ್ಥಿರವಾಗಿದ್ದವು ಹಾಗೂ ಚಲನೆಯಲ್ಲಿದ್ದವು.
ಅದನ್ನು ತಿರುಗಿಸಲು ಜನರಿಗೆ ಸಾಧ್ಯವಾಗುತ್ತಿತ್ತು. . ಆದರೆ ಕೆಲವು ವರ್ಷಗಳ ಹಿಂದೆ
ಸರ್ಕಾರವು ಚಕ್ರಗಳಿಗೆ ಯಾವುದೇ ಹಾನಿಯಾಗುವುದನ್ನು ತಪ್ಪಿಸಲು ಅದನ್ನು
ತಿರುಗಿಸುವುದನ್ನು ನಿಷೇಧಿಸಿದೆ. . ಸಂಗೀತ ಸ್ವರಗಳನ್ನು ಹೊರಸೂಸುವ ಸಂಗೀತ
ಸ್ತಂಭಗಳನ್ನು ತಟ್ಟುವುದನ್ನು ಸಹ ನಿಷೇಧಿಸಲಾಗಿದೆ, ಏಕೆಂದರೆ ಹಲವಾರು
ವರ್ಷಗಳಲ್ಲಿ ಸತತವಾಗಿ ಜನರು ಅದನ್ನು ತಟ್ಟಿದ್ದರಿಂದ, ಅವುಗಳಿಗೆ ಸ್ವಲ್ಪ
ಹಾನಿಯಾಗಿದೆ.

ಇನ್ನು ದೇವಾಲಯಕ್ಕೆ ಹೋಗುವ ರಸ್ತೆ ಕೂಡ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. . ಈ
ರಸ್ತೆ ಒಂದು ಕಾಲದಲ್ಲಿ ಹಂಪಿಯ ಪ್ರಮುಖ ಮಾರುಕಟ್ಟೆ ಸ್ಥಳವಾಗಿತ್ತು.
ಮಾರುಕಟ್ಟೆಯನ್ನು ವಿಠಲ ಬಜಾರ್ ಎಂದು ಕರೆಯಲಾಗುತ್ತಿತ್ತು ಮತ್ತು ಕುದುರೆ
ವ್ಯಾಪಾರಕ್ಕೆ ಇದು ಪ್ರಸಿದ್ಧವಾಗಿತ್ತು. ಈ ಮಾರುಕಟ್ಟೆಯ ಅವಶೇಷಗಳನ್ನು ಇಂದಿಗೂ
ರಸ್ತೆಯ ಎರಡೂ ಬದಿಗಳಲ್ಲಿ ಕಾಣಬಹುದು. ದೇವಾಲಯದ ಒಳಗೆ ಕೆತ್ತನೆಗಳಿವೆ. ಅವುಗಳಲ್ಲಿ
ವಿದೇಶಿಯರು ಕುದುರೆಗಳನ್ನು ವ್ಯಾಪಾರ ಮಾಡುವ ಚಿತ್ರಗಳಿವೆ. ಇದು ಈ ಕುದುರೆ ಸಂತೆಯ
ಆಸ್ತಿತ್ವಕ್ಕೆ ಸಾಕ್ಷಿಯೆಂಬಂತಿದೆ.

ಇಂದು ದೇವಾಲಯದ ಸಂಕೀರ್ಣದೊಳಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ದೀಪಗಳು
ರಾತ್ರಿಯಲ್ಲಿ ದೇವಾಲಯ ಸಂಕೀರ್ಣವನ್ನು ಬೆಳಗಿಸುತ್ತವೆ. ಕತ್ತಲೆಯಲ್ಲಿ ಈ ಬೆಳಕು
ಒಂದು ಭವ್ಯ ಕಟ್ಟಡವೊಂದರ ಇತಿಹಾಸವನ್ನು ಬೆಳಗಿಸುತ್ತವೆ. ಇಂದಿಗೂ ಇಲ್ಲಿ ಪುರಂದರದಾಸರ
ವಾರ್ಷಿಕ ನೆನಪಿನ ಕಾರ್ಯಕ್ರಮಗಳು ನಡೆಯುತ್ತವೆ.

ವಿಜಯ ವಿಠಲ ದೇವಸ್ಥಾನವನ್ನು ತಲುಪುವುದು ಹೇಗೆ?

ಹಂಪಿಯಲ್ಲಿ, ವಿಜಯ ವಿಠಲ ದೇವಾಲಯವು ಪಾಳುಬಿದ್ದ ವಿಠಲ ಬಜಾರ್ ನ ಕೊನೆಯಲ್ಲಿದೆ.
ಹಂಪಿಯ ಎಲ್ಲಾ ಭಾಗಗಳಿಂದ ಈ ದೇಗುಲವನ್ನು ಸುಲಭವಾಗಿ ತಲುಪಬಹುದು. ಇಲ್ಲಿಗೆ ವಾಹನ
ವ್ಯವಸ್ಥೆ ಇದೆ.

ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ. ಬಳ್ಳಾರಿ ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ. ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್‌ ದೂರವಿದೆ.
ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ
ತಲುಪಬಹುದು.

ರೈಲು ಸಂಪರ್ಕ: ಹಂಪಿಗೆ ನೇರ ರೈಲ್ವೆ ಸಂಪರ್ಕವಿಲ್ಲ. ಇಲ್ಲಿಗೆ ಅತಿ . ಹತ್ತಿರದ ರೈಲ್ವೆ
ನಿಲ್ದಾಣವೆಂದರೆ ಹೊಸಪೇಟೆ. ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್‌ ದೂರದಲ್ಲಿದೆ.
ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ. ಹೊಸಪೇಟೆಯಿಂದ
ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.

ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ. ಇಲ್ಲಿಂದ ಕರ್ನಾಟಕ, ಆಂಧ್ರ,
ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು,
ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ.

Jolad Rotti:
Related Post