X

ಕಲ್ಲಲ್ಲಿ ಅರಳಿದ ಸೌಂದರ್ಯದ ಖನಿ ಈ ಕಮಲ ಮಹಲ್

    Categories: Hampi

ನಿಮ್ಮ ಹಂಪಿ ಪ್ರವಾಸ ಲೋಟಸ್ ಮಹಲ್‌ (ಕಮಲ ಮಹಲ್)  ಗೆ ಭೇಟಿ ನೀಡದೆ ಪೂರ್ಣವಾಗುವುದಿಲ್ಲ. ಹಂಪಿಯ ಪ್ರಮುಖ ವಾಸ್ತುಶಿಲ್ಪ ವಿನ್ಯಾಸ -ಅದ್ಭುತಗಳಲ್ಲಿ ಇದು ಒಂದು. 

ಇದರ ವಿನ್ಯಾಸ ಕಮಲದ ರೀತಿಯಲ್ಲಿದೆ. ಹೀಗಾಗಿ ಇದು ಲೋಟಸ್ ಮಹಲ್ ಎಂದೇ ಪ್ರಸಿದ್ಧ. ಈ ಅದ್ಭುತ ಅರಮನೆ ಹಂಪಿಯ ಜೆನಾನಾ ಭಾಗದಲ್ಲಿದೆ.  ಇದು ವಿಜಯನಗರ ಅರಸರ ರಾಣಿಯರ ಹಾಗು ಇತರ ಮಹಿಳಾ ಸದಸ್ಯರ ಬಳಕೆಗೆ ನಿರ್ಮಾಣಗೊಂಡ ಅನನ್ಯ ಅರಮನೆ.  

ಚಿತ್ರಕೃಪೆ: ಗೋಪಿಕೃಷ್ಣ ನಾರ್ಲಾ

ಲೋಟಸ್ ಮಹಲ್ ಗೆ ಇನ್ನೂ ಎರಡು ಹೆಸರುಗಳಿವೆ. ಈ ಅರಮನೆಯನ್ನು  ಕಮಲ್ ಮಹಲ್ ಅಥವಾ ಚಿತ್ರಗಣಿ ಮಹಲ್ ಎಂದು ಕರೆಯಲಾಗುತ್ತದೆ. ಈ ಕಟ್ಟಡದ ಪ್ರಮುಖ ಆಕರ್ಷಣೆ ಎಂದರೆ ಅದರ ಗಮನಾರ್ಹ,  ಮತ್ತು ಸ್ಪಷ್ಟವಾದ  ವಿನ್ಯಾಸ. ಹಂಪಿಯಲ್ಲಿ  ಪ್ರವಾಸಿಗರನ್ನು ಮಂತ್ರ ಮುಗ್ದಗೊಳಿಸುವ   ಬೆರಳೆಣಿಕೆಯಷ್ಟು  ವಾಸ್ತು ವಿನ್ಯಾಸಗಳಲ್ಲಿ  ಇದೂ  ಒಂದಾಗಿದೆ.  ಹಂಪಿಯ ಮೇಲೆ  ನಡೆದ  ದಾಳಿಯ ಸಂದರ್ಭದಲ್ಲಿ ಈ ಅರಮನೆಗೆ ಯಾವುದೇ ಧಕ್ಕೆಯಾಗಲಿಲ್ಲ. ಹೀಗಾಗಿ ಇದರ ಸೌಂದರ್ಯ ಮುಕ್ಕಾಗದೆ ಉಳಿದಿದೆ.  

ಲೋಟಸ್ ಮಹಲ್: ನೀವು ತಿಳಿದುಕೊಳ್ಳಬೇಕಾದ ಪ್ರಾರ್ಥಮಿಕ ಮಾಹಿತಿಗಳು

  • ಪ್ರವೇಶ ಸಮಯ: ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಇದು  ತೆರೆದಿರುತ್ತದೆ
  • ವಯಸ್ಕರಿಗೆ ಪ್ರವೇಶ ಶುಲ್ಕ:  ಭಾರತೀಯರಿಗೆ ರೂಪಾಯಿ  10 ಮತ್ತು ವಿದೇಶಿ ಪ್ರವಾಸಿಗರಿಗೆ 250 ರೂಪಾಯಿ 
  • ಮಕ್ಕಳಿಗೆ ಪ್ರವೇಶ ಶುಲ್ಕ: 15 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ
  • ಛಾಯಾಗ್ರಹಣ : ಅನುಮತಿಸಲಾಗಿದೆ (ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ)
  • ಭೇಟಿ ಅವಧಿ: ಸರಿಸುಮಾರು 2 ಗಂಟೆಗಳ ಅವಧಿ 
  • ಭೇಟಿ ನೀಡಲು ಉತ್ತಮ ಅವಧಿ : ನವೆಂಬರ್‌ನಿಂದ ಫೆಬ್ರವರಿವರೆಗೆ

ಕಮಲ ಮಹಲ್ ನ ವಾಸ್ತುಶಿಲ್ಪ

ಈ ಅರಮನೆಗೆ ಇಟ್ಟಿರುವ ಹೆಸರಿಗೆ ಪೂರಕವಾಗಿ ಅದರ ವಾಸ್ತುಶಿಲ್ಪ-  ಆಕಾರವಿದೆ. ಇದು ಕಮಲ ಪುಷ್ಪವನ್ನು  ಹೋಲುತ್ತದೆ.  ತೆರೆದ ಕಮಲದ ಮೊಗ್ಗಿನ ವಿನ್ಯಾಸದ   ಗುಮ್ಮಟದಿಂದ ಮುಚ್ಚಿದ ಬಾಲ್ಕನಿ ಮತ್ತು ಹಾದಿಗಳು ನೋಡುಗರನ್ನು ಮಂತ್ರಮುಗ್ದ ಗೊಳಿಸುತ್ತದೆ.  ಮಧ್ಯ ಭಾಗದಲ್ಲಿರುವ  ಗುಮ್ಮಟವನ್ನು ಕಮಲದ ಮೊಗ್ಗಿನ  ಆಕೃತಿಯಲ್ಲಿ  ಕೆತ್ತಲಾಗಿದೆ. ಅರಮನೆಯ ವಾಸ್ತು ವಿನ್ಯಾಸದಲ್ಲಿ   ಇಸ್ಲಾಮಿಕ್ ವಾಸ್ತುಶಿಲ್ಪದ ವೈಭವ ಕೂಡ ಇದೆ.  ಇನ್ನು ಬಹು ಹಂತದ   

ಚಾವಣಿಯ  ವಿನ್ಯಾಸವು ಇಂಡೋ ಶೈಲಿಯ ಕಟ್ಟಡಗಳನ್ನು ಹೋಲುತ್ತದೆ. ಒಟ್ಟಾರೆ ಈ ಅರಮನೆಯ ಶೈಲಿ ಮತ್ತು ವಿನ್ಯಾಸಗಳು ಇಸ್ಲಾಮಿಕ್ ಮತ್ತು ಭಾರತೀಯ ವಾಸ್ತುಶಿಲ್ಪದ ಒಂದು ಕೌತುಕಕ್ಕೆ, ಸೋಜಿಗಕ್ಕೆ ಅತ್ಯುತ್ತಮ ಉದಾಹರಣೆ. 

ಈ  ಅರಮನೆಯು ಎರಡು ಅಂತಸ್ತಿನ ಕಟ್ಟಡವಾಗಿದ್ದು, ಅತಿ ದೂರದಿಂದಲೇ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಎರಡು ಮಹಲ್ ಗಳು ಒಂದಕ್ಕೊಂದು ಪೂರಕವಾಗಿ ನಿರ್ಮಿಸಲ್ಪಟ್ಟಿವೆ.  ಈ ಕಟ್ಟಡದ  ಸುತ್ತಲೂ ಆಯತಾಕಾರದ ಗೋಡೆ ಮತ್ತು ನಾಲ್ಕು ಗೋಪುರಗಳಿವೆ. ಈ ಗೋಪುರಗಳು ಪಿರಮಿಡ್ ಆಕಾರದಲ್ಲಿವೆ. ಅವುಗಳ ರಚನೆ ಕಮಲ ಹೂವಿನಂತೆ ನಮಗೆ ಕಾಣಿಸುತ್ತದೆ.  ಈ  ಅರಮನೆಯ ಕಮಾನಿನ ಕಿಟಕಿಗಳು ಮತ್ತು ಬಾಲ್ಕನಿಗಳು ಕೂಡ ನಯನ ಮನೋಹರವಾಗಿವೆ. ಇವುಗಳ ಆಧಾರಕ್ಕೆ   ಸುಮಾರು 24 ಸ್ತಂಭಗಳಿವೆ. 

ಇನ್ನು ಈ ಅರಮನೆಯ ಗೋಡೆಗಳು ಮತ್ತು ಸ್ತಂಭಗಳು ಕೂಡ ಕುಸುರಿ ಕೆತ್ತನೆ ಹೊಂದಿವೆ. ಅವುಗಳಲ್ಲಿ  ಸಮುದ್ರ ಜೀವಿಗಳು ಮತ್ತು ಪಕ್ಷಿಗಳಂತಹ ಮಾದರಿಗಳನ್ನು   ಸುಂದರವಾಗಿ ಕೆತ್ತಲಾಗಿದೆ.

ಕಮಲ ಮಹಲ್, ಹಂಪಿ. ಚಿತ್ರ ಕೃಪೆ: ರಾಮ್ ನಾಗೇಶ್ ತೋಟ 

ಅರಮನೆಯ ಆವರಣ ಕೂಡ ಅದರಷ್ಟೇ ಅಂದವಾಗಿದೆ. ಅದರ   ಸುತ್ತಮುತ್ತಲಿನ ಪ್ರದೇಶವು ಅನೇಕ ನೆರಳಿನ ಮರಗಳಿಂದ ಆವೃತವಾಗಿದೆ. ಇದರಿಂದಾಗಿ ಸದಾ  ಅರಮನೆ ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಸಂಜೆ ಸಮಯದಲ್ಲಿ  ವಿದ್ಯುತ್  ದೀಪಗಳಿಂದ  ಲೋಟಸ್ ಮಹಲ್ ಬೆಳಗುತ್ತಾರೆ. ಈ ಸಂದರ್ಭದಲ್ಲಿ, ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನಮ್ಮ ಎರಡು ಕಣ್ಣು ಸಾಕಾಗುವುದಿಲ್ಲ. ಇಡೀ ಹಂಪಿಯಲ್ಲಿ  ಅತ್ಯುತ್ತಮ ಛಾಯಾ ಚಿತ್ರಗಳನ್ನು ತೆಗೆಯಲು,   ಇದು ಒಂದು ಅತ್ಯುತ್ತಮ ಸ್ಮಾರಕವಾಗಿದೆ. ನೀವು  ಹಂಪಿಗೆ ಭೇಟಿ ನೀಡುವಾಗ  ಲೋಟಸ್ ಮಹಲ್  ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ  ಪಟ್ಟಿಯಲ್ಲಿ  ಸ್ಥಾನ ಪಡೆಯಲೇಬೇಕು. 

ಇದು  ಭಾರತೀಯ ವಾಸ್ತುಶಿಲ್ಪದ ಹೆಮ್ಮೆ,   ಮತ್ತು ನಮ್ಮ  ಕರ ಕುಶಲ ಕರ್ಮಿಗಳ  ನುರಿತ ಕರ ಕೌಶಲ್ಯ, ಎಷ್ಟು ಶತಮಾನಗಳ ಹಿಂದೆಯೇ ಅರಳಿತ್ತು ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ. 

ಲೋಟಸ್ ಮಹಲ್ ಇತಿಹಾಸ

ಈ ಲೋಟಸ್ ಮಹಲ್ ಗೆ ಒಂದು ಸುಂದರ ಇತಿಹಾಸವಿದೆ. ಇದು ಅರಮನೆಯ  ಜೆನಾನಾ ಭಾಗದಲ್ಲಿ ಇದೆ.   ಇದು ವಿಜಯನಗರ ಸಾಮ್ರಾಜ್ಯದ ರಾಜ ಕುಟುಂಬಗಳು ವಾಸಿಸುತ್ತಿದ್ದ ಸುಂದರ ಅರಮನೆ. ಈ  ಲೋಟಸ್ ಮಹಲ್ ಆ ಕಾಲದ ರಾಜಮನೆತನದ ಮಹಿಳೆಯರಿಗೆ ತಂಗಲು ಮತ್ತು ಮನರಂಜನಾ ಚಟುವಟಿಕೆಗಳನ್ನು ಆನಂದಿಸಲು ವಿನ್ಯಾಸ ಗೊಳಿಸಲಾದ ಅರಮನೆ. ಈ  ಮಹಲ್  ನಲ್ಲಿ ಕೆಲವೊಮ್ಮೆ, ರಾಜ ತನ್ನ   ಮಂತ್ರಿಗಳ  ಸಭೆಯನ್ನು  ಕೂಡ ಕರೆಯುತ್ತಿದ್ದ. ವಿಜಯ ನಗರ ಸಾಮ್ರಾಜ್ಯದ ಅವಧಿಯ ನಕ್ಷೆಗಳಲ್ಲಿ ಈ ಅರಮನೆಯನ್ನು   ಕೌನ್ಸಿಲ್ ಚೇಂಬರ್ ಎಂದೂ ಸೂಚಿಸಲಾಗಿದೆ. 

ಇನ್ನು ವಿಜಯ ನಗರ ಸಾಮ್ರಾಜ್ಯದ ಆಗ್ರಣಿ ಅರಸ ಕೃಷ್ಣದೇವ ರಾಯನ ಧರ್ಮ ಪತ್ನಿ ಈ ಅರಮನೆಯಲ್ಲೇ ತನ್ನ ದಿನದ ಬಹುತೇಕ ಸಮಯವನ್ನು ಕಳೆಯುತ್ತಿದ್ದಳು. ಅಲ್ಲಿ ಆಕೆ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಳು ಮತ್ತು ಧ್ಯಾನ ಮಾಡುತ್ತಿದ್ದಳು ಎನ್ನುವ ಬಗ್ಗೆ ಹೇಳಲಾಗಿದೆ. ಕೆಲವೊಮ್ಮೆ, ಈ ಅರಮನೆಯಲ್ಲಿ ವಿಜಯನಗರ ಅರಸರು ತಮ್ಮ ಮಂತ್ರಿಮಂಡಲದ ಸಭೆ ನಡೆಸಿ, ಅನೇಕ ಮಹತ್ವ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. 18 ನೇ ಶತಮಾನದಲ್ಲಿ ಕಂಡುಬರುವ ನಕ್ಷೆಗಳಲ್ಲಿ ಕಮಲ ಮಹಲ್  ಅನ್ನು ಕೌನ್ಸಿಲ್ ಚೇಂಬರ್ ಎಂದು ಕರೆಯಲಾಗುತ್ತದೆ. 

ಉಳಿದಂತೆ  ವಿಜಯನಗರ ಅರಸರ ಕಾಲದಲ್ಲಿ  ಈ ಅರಮನೆಗೆ ಕಮಲ್ ಮಹಲ್ ಮತ್ತು ಚಿತ್ರಂಗಿನಿ ಮಹಲ್ ಎಂಬ ಹೆಸರುಗಳನ್ನೂ ಇಡಲಾಗಿತ್ತು. ಅಂದು,  ಈ ಸ್ಥಳದಲ್ಲಿ ಹಲವಾರು ಸಂಗೀತ ಕಚೇರಿಗಳು ಮತ್ತು ಇತರ ಮನರಂಜನಾ ಚಟುವಟಿಕೆಗಳು ನಡೆಯುತ್ತಿದ್ದವು. 

Jolad Rotti:
Related Post