ಈ ಭಜನಾ ಪದ್ಯ ಕೇಳಿ ಬಾರದ ಮನೆಗಳು ಕರ್ನಾಟಕದಲ್ಲಿಲ್ಲ. ಈ ಭಜನೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಸ್ತುತಿ. ಕರ್ನಾಟಕದ ನಾಡದೇವತೆ ಎಂದೇ ಪ್ರಸಿದ್ದವಾಗಿರುವ ಶ್ರೀ ಚಾಮುಂಡೇಶ್ವರಿ ದೇಗುಲದ ಬಗ್ಗೆಗಿನ ವಿವರ ಇಲ್ಲಿದೆ.
ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ಚಾಮುಂಡಿ ಬೆಟ್ಟ ಎಂದು ಕರೆಯಲ್ಪಡುವ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರು ಹಾಗು ಸುತ್ತಮುತ್ತಲಿನ ಭಕ್ತರೊಂದಿಗೆ ಇತರೆ ರಾಜ್ಯಗಳ ಭಕ್ತಸಾಗರವೂ ಇಲ್ಲಿಗೆ ಹರಿದುಬರುತ್ತದೆ. ಕರ್ನಾಟಕದಲ್ಲಿ ಕೊಲ್ಲೂರು, ಕಟೀಲು, ಹೊರನಾಡು, ಶೃಂಗೇರಿ, ಸವದತ್ತಿ, ಬನಶಂಕರಿ ಹೀಗೆ ವಿವಿಧೆಡೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಮ್ಮನವರ ದೇವಸ್ಥಾನಗಳಿವೆ. ದೇವೀ ದೇವಸ್ಥಾನಗಳಿಗೆ ಭಕ್ತರು ಅಪಾರ ನಂಬಿಕೆ, ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದೇ ಶ್ರೇಣಿಯಲ್ಲಿ ಚಾಮುಂಡಿ ಬೆಟ್ಟವೂ ನಿಲ್ಲುತ್ತದೆ. ಖ್ಯಾತನಾಮರುಗಳೆಲ್ಲರೂ ಈ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ಆರ್ಶಿವಾದ ಪಡೆದು ಆಕೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ.
ತಾಯಿ ಚಾಮುಂಡಿಯ ಬೆಟ್ಟವು ಮೈಸೂರಿನಿಂದ ಪೂರ್ವಕ್ಕೆ 13 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಬೆಟ್ಟವು ದೇವಿ ಚಾಮುಂಡೇಶ್ವರಿಯ ಸಾನಿಧ್ಯದಿಂದಾಗಿ ಚಾಮುಂಡಿ ಬೆಟ್ಟ ಎಂದು ಪ್ರಸಿದ್ಧವಾಗಿದ್ದು, ಬೆಟ್ಟದ ತುದಿಯಲ್ಲಿ ಶಿಖರಪ್ರಾಯವಾಗಿ ನಿಂತಿರುವ ದೇವಾಲಯವನ್ನು ಚಾಮುಂಡೇಶ್ವರಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ಹಚ್ಚ ಹಸಿರಿನ ಬೆಟ್ಟಗಳ ನಡುವೆ ಮಾಡಿರುವ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಅದ್ಭುತವಾದ ಚಾರಣ ಅನುಭವವನ್ನು ನಿಮ್ಮದಾಗಿಸಿಕೊಂಡು ಬೆಟ್ಟದ ನಡುವಿನ ಪ್ರಾಕೃತಿಕ ಸೌಂದರ್ಯ, ಬೆಟ್ಟದ ಬುಡದಲ್ಲಿರುವ ಮೈಸೂರೂ ನಗರದ ರಮಣೀಯ ಸೌಂದರ್ಯವನ್ನು ಆಸ್ವಾದಿಸುತ್ತಾ ತಾಯಿಯ ದರ್ಶನವನ್ನು ಮಾಡಿಕೊಂಡು ಬರಬಹುದು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಬಗ್ಗೆಗಿನ ಮುಖ್ಯ ಸಂಗತಿಗಳು
ಮುಖ್ಯ ದೇವತೆ: ಚಾಮುಂಡೇಶ್ವರಿ ದೇವಿ
ಭೇಟಿ ನೀಡಲು ಉತ್ತಮ ಸಮಯ: ದಸರಾ ಸಮಯದಲ್ಲಿ ಅಕ್ಟೋಬರ್
ದೇವಾಲಯದ ಸಮಯ: ಬೆಳಿಗ್ಗೆ 7.30 ರಿಂದ ರಾತ್ರಿ 9.00
ಪ್ರವೇಶ ಶುಲ್ಕ: ಉಚಿತ
ವಿಶೇಷ ಪ್ರವೇಶ: ರೂಪಾಯಿ 30/ 100
ಭೇಟಿ ಅವಧಿ: 1-2 ಗಂಟೆಗಳು
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಪ್ರಾಮುಖ್ಯತೆ
ಭಾರತ ದೇಶ ಆಧ್ಯಾತಿಕತೆಯ ತೊಟ್ಟಿಲು ಎಂಬ ಗರಿಮೆಗೆ ಪಾತ್ರವಾಗಿದೆ. ಇಲ್ಲಿನ ಪ್ರಮುಖ ದೇವರುಗಲ್ಲೊಂದು ಶ್ರೀ ಶಕ್ತಿ ದೇವತೆ. ಶಕ್ತಿ ದೇವತೆಯನ್ನು ನಾನಾ ರೂಪಗಳಲ್ಲಿ ಆರಾಧಿಸಲಾಗುತ್ತದೆ. ಚಾಮುಂಡಿ ದೇವಾಲಯವು ದೇಶದ 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಹೀಗಾಗಿ ಇದು ದಕ್ಷಿಣ ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಸಾಗಲು ಬೆಟ್ಟದ ತುದಿಯವರೆಗೆ 1008 ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಭಕ್ತರು ಹರಕೆ ಹೊತ್ತು ಈ ಕಲ್ಲಿನಲ್ಲಿ ಸಾಗಿ ಅಮ್ಮನವರಿಗೆ ಇಷ್ಟಾರ್ಥ ಸಿದ್ಧಿಸು ಎಂದು ಬೇಡಿಕೊಳ್ಳುತ್ತಾರೆ.
ಮಹಿಷ ಎಂಬ ರಾಕ್ಷಸನನ್ನು ಸಂಹರಿಸಿದ ಶಿವನ ಪತ್ನಿ ಪಾರ್ವತಿಯ ಅವತಾರವೆಂದು ನಂಬಲಾದ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ದೇವಿಗೆ ಈ ದೇಗುಲವು ಸಮರ್ಪಿತವಾಗಿದೆ. ಮೂಲತಃ ಚಿಕ್ಕ ದೇಗುಲವಾಗಿದ್ದ ಈ ದೇಗುಲ ಮೈಸೂರು ಮಹಾರಾಜರ ಆಶ್ರಯದಲ್ಲಿ ವಿಸ್ತಾರವಾಗಿ ಬೆಳೆಯಿತು. ದೇಗುಲ ನಿರ್ಮಾಣಗೊಂಡು ಮೈಸೂರು ನಗರಕ್ಕೆ ಕಾಣಿಸುವಷ್ಟು ವಿಶಾಲ ಗೋಪುರಗಳು ನಿರ್ಮಿಸಲಾಯಿತು. ತಾಯಿ ಚಾಮುಂಡಿಯ ನಿತ್ಯ ಪೂಜೆಗೆ ಉತ್ಸವಗಳಿಗೆ ರಾಜರ ಕಾಣಿಕೆಗಳು ದೊರೆತವು. ಮೈಸೂರು ಇಂದು ಸಾವಿರಾರು ಯಾತ್ರಿಗಳು ಸಂದರ್ಶಿಸುವ ಈ ದೇಗುಲ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಯಾತ್ರಿಗಳಿಗೆ ಮಧ್ಯಾಹ್ನದ ಭೋಜನ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇತ್ಯಾದಿಗಳನ್ನು ಹೊಂದಿದೆ.
ಇದೀಗ ಕೇಂದ್ರ ಸರಕಾರ ತನ್ನ ಪ್ರಸಾದ್ ಯೋಜನೆಯಡಿ ಈ ದೇಗುಲಕ್ಕೆ ಸುಮಾರು ಐವತ್ತು ಕೋಟಿಯಷ್ಟು ಅನುದಾನ ನೀಡಲಿದ್ದು, ದೇಗುಲಕ್ಕೆ ನಾನಾ ಹೊಸ ಆಕರ್ಷಣೆಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಚಾಮುಂಡೇಶ್ವರಿ ದೇವಾಲಯದ ವಾಸ್ತುಶಿಲ್ಪ
ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಿಂದ ನಿರ್ಮಿಸಲ್ಪಟ್ಟಿದ್ದು, ರಚನೆಯಲ್ಲಿ ಚತುರ್ಭುಜಾಕಾರವಾಗಿದೆ. ಇದು ಭವ್ಯವಾದ ಪ್ರವೇಶದ್ವಾರವನ್ನು ಹೊಂದಿದ್ದು , 7-ಹಂತದ ಗೋಪುರವನ್ನು ಏಳು ಚಿನ್ನದ ಕಲಶಗಳಿಂದ ಅಲಂಕರಿಸಲಾಗಿದೆ. ದೇಗುಲದ ಗರ್ಭಗೃಹವು ವಿಮಾನ ಅಥವಾ ಸಣ್ಣ ಗೋಪುರದಿಂದ ಕೂಡಿದೆ. ಮುಖ್ಯ ಪ್ರವೇಶ ದ್ವಾರದಲ್ಲಿ ಗಣೇಶನ ಸಣ್ಣ ಚಿತ್ರವನ್ನು ಕಾಣಬಹುದು.
ಈ ದ್ವಾರವು ಬೆಳ್ಳಿ ಲೇಪಿತವಾಗಿದೆ ಮತ್ತು ದೇವಿಯ ವಿವಿಧ ರೂಪಗಳ ಹಲವಾರು ಇತರ ಚಿತ್ರಗಳನ್ನು ಇದು ಒಳಗೊಂಡಿದೆ. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರ ಆರು ಅಡಿ ಎತ್ತರದ ಪ್ರತಿಮೆಯು ದೇಗುಲದ ‘ಅಂತರಾಳ’ದ ಭಾಗದಲ್ಲಿ ಅವರ ಮೂವರು ಪತ್ನಿಯರ ಪ್ರತಿಮೆಗಳೊಂದಿಗೆ ನಿಂತಿರುವುದನ್ನು ಚಿತ್ರಿಸಲಾಗಿದೆ.
ಒಂದು ಕೈಯಲ್ಲಿ ನಾಗರಹಾವು ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹೊಂದಿರುವ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ದೇವಾಲಯದ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. ಗರ್ಭಗುಡಿಯೊಳಗೆ ಚಾಮುಂಡೇಶ್ವರಿ ದೇವಿಯ ಕಲ್ಲಿನ ವಿಗ್ರಹವಿದೆ. ದೇವಿಯನ್ನು ಎಂಟು ತೋಳುಗಳೊಂದಿಗೆ ಕುಳಿತಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ.
ಮೂಲ ದೇವಾಲಯವನ್ನು ಕ್ರಿಸ್ತ ಶಕ 12 ನೇ ಶತಮಾನದಲ್ಲಿಯೇ ನಿರ್ಮಿಸಲಾಗಿತ್ತು ಆದರೆ 1008 ಮೆಟ್ಟಿಲುಗಳನ್ನು 17 ನೇ ಶತಮಾನದಲ್ಲಿ ಸೇರಿಸಲಾಯಿತು ಎಂದು ದಾಖಲೆಗಳು ಹೇಳುತ್ತವೆ. 1827 ರಲ್ಲಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದೇವಾಲಯವನ್ನು ನವೀಕರಣಗೊಳಿಸಿದರು. ಅವರು ದೇವಾಲಯಕ್ಕೆ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಬಳಸಲಾಗುವ ಹಲವಾರು ಆಭರಣಗಳು ಮತ್ತು ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಉಡುಗೊರೆಯಾಗಿ ನೀಡಿದರು.
ಚಾಮುಂಡೇಶ್ವರಿ ದೇವಸ್ಥಾನದ ಐತಿಹ್ಯ
ಚಾಮುಂಡೇಶ್ವರಿ ದೇವಸ್ಥಾನದ ಬಗ್ಗೆ ಅನೇಕ ಪುರಾಣಗಳು ಮತ್ತು ದಂತಕಥೆಗಳು ಇವೆ. ಅವರಲ್ಲಿ ಒಂದರ ಪ್ರಕಾರ, ಒಂದು ಕಾಲದಲ್ಲಿ, ಮಹಿಷಾಸುರ ಎಂಬ ರಾಕ್ಷಸನು ಈ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆತ ಬ್ರಹ್ಮ ದೇವನನ್ನು ಸ್ಮರಿಸುತ್ತಾ ಹಲವು ವರ್ಷಗಳ ಕಠಿಣ ತಪಸ್ಸು ಮಾಡುತ್ತಾನೆ. ನಂತರ, ಬ್ರಹ್ಮನನ್ನು ಒಲಿಸಿಕೊಂಡು ಬ್ರಹ್ಮ ಪ್ರತ್ಯಕ್ಷನಾದಾಗ ಯಾವ ದೇವತೆಗಳು ಹಾಗು ಪ್ರಾಣಿಗಳಿಂದ ತನಗೆ ಮರಣ ಬಾರದಂತೆ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ವರ ಪಡೆದು ಭಯಮುಕ್ತನಾದ ಮಹಿಷ ಮನುಷ್ಯರನ್ನು ಮತ್ತು ದೇವರುಗಳಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಾನೆ.
ಶಿವನ ಪತ್ನಿ ಪಾರ್ವತಿಯು ಬ್ರಹ್ಮ ನೀಡಿದ ವರದಿಂದಾಗಿ ಮಹಿಷಾಸುರ ಇಷ್ಟು ಬಲಿಷ್ಠವಾಗಿರುವುದಲ್ಲದೆ, ಎಲ್ಲರಿಗು ಕಿರುಕುಳ ಕೊಡುತ್ತಿದ್ದಾನೆ ಎಂಬ ಅಂಶವನ್ನು ಗಮನಿಸುತ್ತಾಳೆ. ದೇವತೆಗಳು ಅಥವಾ ಪ್ರಾಣಿಗಳಿಂದ ತನೆ ಮರಣ ಬಾರದಂತೆ ವರವನ್ನು ಪಡೆದಿದ್ದಾನೆ ಎಂಬುದನ್ನು ಅರಿತ ಪಾರ್ವತಿ ಆತನ ವಿರುದ್ಧ ಹೋರಾಡಲು ತಾನೇ ಸಜ್ಜಾಗುತ್ತಾಳೆ. ಮಹಿಷಾಸುರನ ವಿರುದ್ಧ ಹೋರಾಡುವಷ್ಟು ಬಲಶಾಲಿಯಾಗಲು ತ್ರಿಮೂರ್ತಿಗಳು ಹಾಗು ಸ್ವರ್ಗದಲ್ಲಿರುವ ಎಲ್ಲಾ ದೇವರುಗಳು ಆಕೆಗೆ ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಾರೆ.
ಈ ಶಕ್ತಿಗಳಿಂದ ಪಾರ್ವತಿ ಚಾಮುಂಡೇಶ್ವರಿಯ ರೂಪವನ್ನು ಪಡೆಯುತ್ತಾಳೆ, ಮಹಿಷನ ರುಂಡವನ್ನು ಚಂಡಾಡಲು ಮಹಾಕಾಳಿಯ ಅವತಾರವನ್ನು ಎತ್ತುತ್ತಾಳೆ. ಚಾಮುಂಡೇಶ್ವರಿ ಮತ್ತು ಮಹಿಷಾಸುರ ನಡುವೆ ಹತ್ತು ದಿನಗಳ ಯುದ್ಧ ನಡೆದು ಕೊನೆಯಲ್ಲಿ ಚಾಮುಂಡೇಶ್ವರಿಯ ಅವತಾರ ಎತ್ತಿದ ಪಾರ್ವತಿಯು ಮಹಿಷಾಸುರನನ್ನು ಸೋಲಿಸುತ್ತಾಳೆ. ದುಷ್ಟ ಸಂಹಾರ ಮಾಡಿದ ದೇವಿಯು ಚಾಮುಂಡೇಶ್ವರಿಯಾಗಿ ಬೆಟ್ಟದಲ್ಲಿ ನೆಲೆ ನಿಲ್ಲುತ್ತಾಳೆ. ಈ ವಿಜಯವನ್ನು ಭಾರತದಾದ್ಯಂತ ಒಂಭತ್ತು ದಿನಗಳ ದಸರಾ ಹಬ್ಬವಾಗಿ ಆಚರಿಸಲಾಗುತ್ತದೆ.
ರಾಜ ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿಯೂ ಈ ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ಒಂಭತ್ತು ದಿನಗಳು ನವರತ್ನ ಖಚಿತವಾಗಿ, ಆಭರಣ ಭೂಷಿತೆಯಾಗಿ ಅಲಂಕಾರದಿಂದ ಕಂಗೊಳಿಸುವ ದೇವಿಯನ್ನು ಕಾಣಲು ಕಣ್ಣೆರಡು ಸಾಲದು ಎಂಬಂತೆ ಅಲಂಕಾರಗೊಳಿಸಲಾಗಿರುತ್ತದೆ. ನಗರಕ್ಕೆ ನಗರವೇ ಪಾಲ್ಗೊಳ್ಳುವ ಈ ಸಂಭ್ರಮಾಚರಣೆಯಲ್ಲಿ ಹತ್ತೂ ದಿನಗಳು ನಗರದಾದ್ಯಂತ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಹಾಗು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅದ್ಧೂರಿಯಿಂದ ಆಚರಿಸಲಾಗುವ ಜಗತ್ಪ್ರಸಿದ್ಧ ದಸರಾದಲ್ಲಿ ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ ದೇಶ ವಿದೇಶದಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದರೊಂದಿಗೆ ಸಾಗುವ ಕಲಾತಂಡಗಳು, ಕವಾಯತು, ಅಶ್ವ ಪಡೆ, ಪೋಲಿಸ್ ವಾದ್ಯಗೋಷ್ಠಿ, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಭ ಚಿತ್ರಗಳು ನಾಡಿನೆಲ್ಲೆಡೆಯಿಂದ ಜನಸಾಗರವೇ ಆ ಸಂದರ್ಭದಲ್ಲಿ ಮೈಸೂರಿಗೆ ಹರಿದು ಬರುತ್ತದೆ. ಮೊದಲು ರಾಜ ಮಹಾರಾಜರು ಕುಳಿತುಕೊಳ್ಳುತ್ತಿದ್ದ ಅಂಬಾರಿಯಲ್ಲಿ ಈಗ ಚಾಮುಂಡಿ ದೇವರ ವಿಗ್ರಹವನ್ನು ಇಟ್ಟು ಪೂಜಿಸಲಾಗುತ್ತದೆ. ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತು ಈ ಹಬ್ಬವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ.
ಮೈಸೂರು ಭಾಗ ಜಾನಪದ ಗೀತೆಗಳ ತೊಟ್ಟಿಲು ಎಂದೇ ಪರಿಗಣಿತವಾಗಿದೆ. ಇಲ್ಲಿನ ಜಾನಪದ ಗೀತೆಗಳಲ್ಲಿ ಕೂಡಾ ಚಾಮುಂಡೇಶ್ವರಿಯನ್ನು ನಾನಾ ವಿಧಗಳಲ್ಲಿ ಕೊಂಡಾಡಯಾಗುತ್ತದೆ.
ಚಾಮುಂಡಿ ಬೆಟ್ಟದ ಆಕರ್ಷಣೆಗಳು
ನಂದಿ ಪ್ರತಿಮೆ -ಚಾಮುಂಡಿ ಬೆಟ್ಟದ ಮೇಲೆ ನಂದಿ.
ನಂದಿಯ ಪ್ರತಿಮೆಯು ಏಕಶಿಲಾ ಕಪ್ಪು ಗ್ರಾನೈಟ್ ಬಂಡೆಯಿಂದ ಕೆತ್ತಲಾಗಿದೆ. ಹದಿನೈದು ಅಡಿ ಎತ್ತರದ ಈ ಬೃಹತ್ ನಂದಿ ವಿಗ್ರಹವನ್ನು ಪ್ರವಾಸಿಗರು ಚಾಮುಂಡೇಶ್ವರಿಯ ದರ್ಶನದ ನಂತರ ಮೆಟ್ಟಿಲುಗಳನ್ನು ಬಳಸಿ ಇಳಿಯುವಾಗ ವೀಕ್ಷಿಸಬಹುದು ಅಥವಾ ಬೆಟ್ಟವನ್ನು ಇಳಿಯುವಾಗ ವಾಹನದ ಮೂಲಕವಾಗಿಯೂ ಸಾಗಿ ನಂದಿ ವಿಗ್ರಹದ ದರ್ಶನವನ್ನು ಪಡೆಯಬಹುದು. ಈ ನಂದಿ ವಿಗ್ರಹಕ್ಕೆ ಪ್ರತೀ ವರ್ಷ ಕಾರ್ತೀಕಮಾಸದ ಪ್ರಥಮ ಸೋಮವಾರದಂದು ಮಸ್ತಕಾಭಿಷೇಕವೂ ನಡೆಯುತ್ತದೆ. ವಿವಿಧ ಬಗೆಯ ದ್ರವ್ಯಗಳನ್ನು ಬಳಸಿ ನಂದಿ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. ಪ್ರತಿಮೆಯಿಂದ ಅಣತಿ ದೂರದಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ.
ಮಹಾಬಲೇಶ್ವರ ದೇವಸ್ಥಾನ ಮತ್ತು ಮಹಿಷಾಸುರ ಮರ್ದಿನಿ ಮೂರ್ತಿ
ಈ ದೇವಾಲಯವು ಕ್ರಿ.ಶ.950 ರ ಹಿಂದಿನದು ಮತ್ತು ಇಲ್ಲಿಯ ಅತ್ಯಂತ ಹಳೆಯ ದೇವಾಲಯವಾಗಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ ಮತ್ತು ಪಾರ್ವತಿ, ಸಪ್ತ ಮಾತೃಕೆಗಳು ಮತ್ತು ನಟರಾಜನ ಚಿತ್ರಗಳೊಂದಿಗೆ ಇದು ಮಹಿಷಮರ್ದಿನಿ ಮತ್ತು ದಕ್ಷಿಣಾ ಮೂರ್ತಿಯ ಪ್ರತಿಮೆಗಳನ್ನು ಹೊಂದಿದೆ.
ಚಾಮುಂಡಿಯ ತಂಗಿ ಎಂದು ಹೇಳುವ ಉತ್ನಳ್ಳಿ ಮಾರಮ್ಮ ದೇಗುಲಕ್ಕೆ ಸಾಗುವ ಮಾರ್ಗವು ಇದೇ ದಾರಿಯಲ್ಲಿ ಹಾದುಹೋಗಿದೆ. ಖಾಸಗಿ ವಾಹನದಲ್ಲಿ ತೆರಳುವವರು ಉತ್ನಳ್ಳಿ ಮಾರಮ್ಮ ದೇಗುಲಕ್ಕೂ ಭೇಟಿ ನೀಡಿ ಅಕ್ಕ ತಂಗಿ ಇಬ್ಬರ ದರ್ಶನವನ್ನು ಮಾಡಿಕೊಂಡು ಬರಬಹುದು.
ಆಷಾಡ ಮಾಸ
ಆಷಾಡಮಾಸ ಮೈಸೂರಿನಲ್ಲಿ ಬಹಳಷ್ಟು ವಿಶೇಷವಾಗಿ ಆಚರಿಸಲ್ಪಡುತ್ತಿದ್ದು, ಆ ಸಮಯದಲ್ಲಿ ಭಕ್ತ ಸಾಗರವೇ ದೇಗುಲಕ್ಕೆ ಹರಿದು ಬರುತ್ತದೆ. ಆಷಾಡ ಮಾಸದ ಎಲ್ಲಾ ಶುಕ್ರವಾರಗಳು ಇಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತಿದ್ದು, ಸುತ್ತಮುತ್ತಲಿನ ಭಕ್ತರು ಆಷಾಡಮಾಸದಲ್ಲಿ ಅಮ್ಮನವರಿಗೆ ವಿಶೇ಼ಷವಾಗಿ ನಡೆದುಕೊಳ್ಳುತ್ತಾರೆ. ಹೀಗಾಗಿ ಜಿಲ್ಲಾಡಳಿತವು ಆ ಸಮಯದಲ್ಲಿ ಇಲ್ಲಿ ವಿಶೇಷ ಮುತುವರ್ಜಿ ನಡೆಸಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಖಾಸಗೀ ವಾಹನಗಳನ್ನು ಬೆಟ್ಟಕ್ಕೆ ಬಿಡದೆ ಸಾರ್ವಜನಿಕ ಸಾರಿಗೆಯಲ್ಲಿಯೇ ಸಂಚರಿಸುವ ಅವಕಾಶ ಕಲ್ಪಿಸಲಾಗುವುದು.
ಚಾಮುಂಡಿ ಅಮ್ಮನವರ ವರ್ಧಂತಿ ಆಷಾಡಮಾಸದಲ್ಲಿಯೇ ಇರುತ್ತದೆ. ಹೀಗಾಗಿ ವರ್ಧಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಬೀದಿ ಬೀದಿಗಳಲ್ಲಿ ಅಮ್ಮನವರನ್ನು ಪೂಜಿಸಿ ಅನ್ನ ಸಂತರ್ಪಣೆ ನಡೆಸಲಾಗುವುದು.
ತಲುಪುವ ದಾರಿ
ವಿಮಾನ ಸಂಪರ್ಕ : ವಿಮಾನಯಾನದ ಮೂಲಕ ಮೈಸೂರನ್ನು ತಲುಪಲು ಇಚ್ಛಿಸುವ ಪ್ರಯಾಣಿಕರು ಮೈಸೂರು ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ಖಾಸಗೀ ವಾಹನಗಳ ಮೂಲಕ ನಗರವನ್ನು ತಲುಪಬಹುದು. ಮೈಸೂರಿಗೆ ಹೆಚ್ಚಿನ ವಿಮಾನಯಾನ ಸೇವೆಗಳು ಲಭ್ಯವಿಲ್ಲದಿದ್ದಲ್ಲಿ 160 ಕಿಮೀ ದೂರದಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ವಿಮಾನದ ಮೂಲಕ ಅಥವಾ ಫ್ಲೈ ಬಸ್ ಮೂಲಕ ಅಥವಾ ಖಾಸಗೀ ವಾಹನಗಳ ಮೂಲಕ ಅರಮನೆ ನಗರಿಯನ್ನು ತಲುಪಬಹುದು.
ರೈಲು ಸಂಪರ್ಕ : ಬೆಂಗಳೂರಿನಿಂದ ಮೈಸೂರಿಗೆ ಸಾಕಷ್ಟು ರೈಲ್ವೇ ಸೇವೆಗಳು ಲಭ್ಯವಿದೆ. ರೈಲ್ವೆ ನಿಲ್ದಾಣದಿಂದ ಇಲ್ಲಿಗೆ ಕೇವಲ ೧೩ ಕಿಲೋಮೀಟರು
ರಸ್ತೆ ಸಂಪರ್ಕ: ಮೈಸೂರು ನಗರದಿಂದ ಚಾಮುಂಡಿ ಬೆಟ್ಟವನ್ನು ಸಂಪರ್ಕಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ 20 ನಿಮಿಷಕ್ಕೆ ಒಂದು ಬಸ್ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಇದರಲ್ಲಿ ವೋಲ್ವೋ ಬಸ್ ಸೇವೆಯೂ ಲಭ್ಯವಿದೆ. ಇಲ್ಲವಾದಲ್ಲಿ ಖಾಸಗೀ ವಾಹನಗಳ ಸೇವೆಯನ್ನು ಪಡೆದುಕೊಳ್ಳಬಹುದು.
ಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಲು ಇಚ್ಛಿಸುವ ಭಕ್ತರು ಮೆಟ್ಟಿಲುಗಳ ಮೂಲಕವೂ ಸಾಗಬಹುದು. ಬೆಟ್ಟಕ್ಕೆ ಹೋಗಿ ಹಿಂತಿರುಗುವ ದಾರಿಯಲ್ಲಿ ಮೈಸೂರು ನಗರದ ವಿಹಂಗಮ ದೃಶ್ಯವನ್ನು ನೀಡಲು ಅಲ್ಲಲ್ಲಿ ವಿವ್ಯೂ ಪಾಯಿಂಟ್‌ಗಳೂ ಇವೆ. ಖಾಸಗೀ ವಾಹನದಲ್ಲಿ ಹೋಗುವವರು ಅಲ್ಲಿ ವಾಹನವನ್ನು ನಿಲ್ಲಿಸಿ ನಯನ ಮನೋಹರ ದೃಶ್ಯವನ್ನು ಸವಿದು ಹೋಗಬಹುದು. ದಸರೆಯ ಸಂದರ್ಭದಲ್ಲಿ ಆದರೆ ಇಡೀ ನಗರವು ದೀಪಾಲಂಕೃತವಾಗಿರುವುದನ್ನು ಇಲ್ಲಿಂದ ಕಣ್ತುಂಬಿ ಕೊಳ್ಳಬಹುದು. ನಗರಕ್ಕೆ ಹಿಂದಿರುಗುವ ದಾರಿಯಲ್ಲಿ ಮರಳಿನ ಮ್ಯೂಸಿಯಂ, ಕಪ್ಪೆ ಚಿಪ್ಪಿನ ಮ್ಯೂಸಿಯಂ ಹೀಗೆ ಹಲವು ವಿಶೇಷಗಳಿವೆ ಅದನ್ನೂ ವೀಕ್ಷಿಸಬಹುದು. ಮೈಸೂರಿನ ಪ್ರಸಿದ್ಧ ಪ್ರಾಣಿ ಸಂಗ್ರಹಾಲಯವೂ ಇದೇ ಮಾರ್ಗದಲ್ಲಿದ್ದು ಅದನ್ನು ಇದೇ ದಾರಿಯಾಗಿ ಹಿಂತಿರುಗುವಾಗ ವೀಕ್ಷಿಸಬಹುದು. ಈ ಇಡೀ ಪ್ರಾಣಿ ಸಂಗ್ರಹಾಲಯವನ್ನು ವೀಕ್ಷಿಸಲು ಸುಮಾರು ಅರ್ಧ ದಿನ ತಗುಲಬಹುದು. ಜೊತೆಗೆ ಕಾರಂಜಿ ಕೆರೆ ಉದ್ಯಾನವನವೂ ಇದೇ ಹಾದಿಯಲ್ಲಿದೆ. ಅಲ್ಲಿನ ಪ್ಲಾಸ್ಟಿಕ್ ಫ್ರೀ , ಪರಿಸರ ಸ್ನೇಹಿ ಉದ್ಯಾನವನದಲ್ಲಿ ಚಿಕ್ಕ ಮಕ್ಕಳಿಗೂ ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ನವಿಲು, ಗಿಳಿ ಮುಂತಾದ ಸಾಕಷ್ಟು ಹಕ್ಕಿಗಳಿದ್ದು, ಮಕ್ಕಳಿಗೆ ಉದ್ಯಾನ ಆಕರ್ಷಣೀಯ ಎನಿಸುವಂತಿದೆ. ಜೊತೆಗೆ ಕೆರೆಯಲ್ಲಿ ಜಲ ವಿಹಾರವನ್ನೂ ಮಾಡಬಹುದು.
- English: Chamundeshwari Temple, Mysore