ಮೈಸೂರು ಎಂದ ಕೂಡಲೇ ನಮ್ಮ ಮನ್ಸಸ್ಸಿನಲ್ಲಿ ಮೂಡುವ ಚಿತ್ರಣ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇಗುಲ, ಬಂಡೀಪುರ, ನಾಗರಹೊಳೆ, ಹಾಗು ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯ. ಸಾಂಸ್ಕೃತಿಕ ನಗರಿ ಎಂದೇ ಪ್ರಖ್ಯಾತವಾಗಿರುವ ನಮ್ಮ ಮೈಸೂರು ಭಾರತದ ಯೋಗದ ಕೇಂದ್ರ ಎಂದು ಕರೆಯಲ್ಪಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಮ್ಮ ಅರಮನೆ ನಗರಿ ಮೈಸೂರಿಗೆ ಈ ಯೋಗ ನಗರಿ ಎಂಬ ಬಿರುದು ದೊರೆತಿರುವುದರ ಹಿಂದಿನ ಇತಿಹಾಸವನ್ನು ತಿಳಿಯಲು ಬಯಸುವಿರಾ? ಇಲ್ಲಿಗೆ ಮೈಸೂರಿನ ಯೋಗ ಇತಿಹಾಸ.
2022 ಯೋಗ ಕ್ಷೇತ್ರದಲ್ಲಿ ಮೈಸೂರಿಗೆ ವಿಶಿಷ್ಟ ವರ್ಷ. ಏಕೆಂದರೆ, ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಕಾರ್ಯಕ್ರಮ ಮೈಸೂರು ಅರಮನೆ ಎದುರು ನಡೆಯಲಿದೆ. ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ಅಂದು ಬೆಳಗ್ಗೆ ಇಲ್ಲಿಯೇ ಯೋಗಾಭ್ಯಾಸ ಮಾಡಲಿದ್ದಾರೆ . ಜಗತ್ತಿಗೆ ಯೋಗ ದಿನದ ಸಂದೇಶ ನೀಡಲಿದ್ದಾರೆ. ಈ ಬಗ್ಗೆಗಿನ ಸಮಗ್ರ ವಿವರ ಇಲ್ಲಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಿಂದ 150 ಕಿಲೋಮೀಟರ್ ದೂರದಲ್ಲಿರುವ ಮೈಸೂರು ನಗರಕ್ಕೆ ʻಯೋಗ ನಗರಿʼ ಎಂಬ ಅನ್ವರ್ಥ ನಾಮವಿದೆ. ಆದರೆ, ಇತ್ತೀಚೆಗೆ ಮೈಸೂರು ನಗರದ ಹೊರವಲಯದಲ್ಲೂ ಯೋಗ ಶಾಲೆಗಳು , ಕುಟೀರಗಳು ಆರಂಭಗೊಂಡಿವೆ. ನಗರದಿಂದ ಹೊರಗೆ ಯೋಗ ಶಿಬಿರಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಸುಮಾರು ಮೂವತ್ತು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಯೋಗ ಕಲಿಕಾ ಕೇಂದ್ರಗಳಿವೆ. ಮೈಸೂರು ನಗರದ ಜನಸಂಖ್ಯೆ ಈಗ ಸುಮಾರು ೧೧ ಲಕ್ಷ. . ಪ್ರತಿ ವರ್ಷ, ವಿಶ್ವದೆಲ್ಲೆಡೆಯಿಂದ ಸಾವಿರಾರು ಯೋಗ ಉತ್ಸಾಹಿಗಳು ಯೋಗ ಅಭ್ಯಸಿಸಲು ನಗರಕ್ಕೆ ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ಪ್ರತೀ ವರ್ಷ ಯೋಗ ಅಧ್ಯಯನ ಋತುವು ಮಾರ್ಚ್‌ನಲ್ಲಿ ಪ್ರಾರಂಭವಾಗಿ ಜುಲೈವರೆಗೂ ಮುಂದುವರಿಯುತ್ತದೆ.
ವಿಕಿಮೀಡಿಯಾ ಕಾಮನ್ಸ್
ಮೈಸೂರಿನಲ್ಲಿ ಪ್ರಧಾನಿ ಯೋಗ!
ಈ ವರ್ಷ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಯೋಗ ದಿನದ (ಐಡಿವೈ) ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಯೋಗ ವಿದ್ಯೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮೈಸೂರು ನಗರ ನೀಡಿದ ಕೊಡುಗೆಗಾಗಿ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಸಮಾರಂಭವನ್ನು ಇಲ್ಲಿ ಆಚರಿಸಲು ನಿರ್ಧರಿಸಿದ್ದು, ಇದು ಇಡೀ ವಿಶ್ವವೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದೆ. ಈ ಮೂಲಕ, ಇದೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಪ್ರಧಾನಿ ಮೋದಿಯವರು ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದು, ಮೈಸೂರಿನ ಯೋಗ ನಗರಿ ಎಂಬ ಕಿರೀಟಕ್ಕೆ ಹೊಸ ಗರಿ ಇದಾಗಿದೆ.
ಮೈಸೂರು ನಗರದಲ್ಲಿ ನಡೆಸಲಾಗುವ ಸಾಮಾನ್ಯ ಯೋಗ ಕೋರ್ಸ್ ಗಳು ಸುಮಾರು 300 ಗಂಟೆಗಳ ಬೋಧನೆಯನ್ನು ಹಾಗು ಪಾತ್ಯಕ್ಷಿಕೆಯನ್ನು ಒಳಗೊಂಡಿರುತ್ತದೆ. ಮೈಸೂರು ನಗರದ ಯೋಗ ಇತಿಹಾಸದ ಬಗ್ಗೆ ಮಾತನಾಡುವಾಗ ನಮಗೆ ಮೊದಲು ನೆನಪಿಗೆ ಬರುವ ಹೆಸರು ಹಠ ಯೋಗ, ಅಯ್ಯಂಗಾರ್ ಯೋಗ, ವಿನಿಯೋಗ, ಅಷ್ಟಾಂಗ ಯೋಗ, ಇತ್ಯಾದಿ. ಪತಂಜಲಿ, ಆರ್ಟ್ ಆಫ್ ಲಿವಿಂಗ್ ಮತ್ತು ಇತರ ಯೋಗ ಸಂಸ್ಥೆಗಳು ಸಹ ನಗರದಲ್ಲಿ ವಿವಿಧ ಯೋಗ ತರಬೇತಿಯನ್ನು ನೀಡುತ್ತಿವೆ.
ಮೈಸೂರಿನ ಯೋಗದ ಇತಿಹಾಸ
ಮೈಸೂರು ಅರಮನೆಯ ದಾಖಲೆಗಳ ಪ್ರಕಾರ, ಸರಿಸುಮಾರು 225 ವರ್ಷಗಳಿಂದ, ಮೈಸೂರು ರಾಜ ಮನೆತನವು ಯೋಗವನ್ನು ಪ್ರೋತ್ಸಾಹಿಸುತ್ತಿದೆ. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶ್ರೀತತ್ತ್ವನಿಧಿಯಲ್ಲಿ ಯೋಗಾಸನದ 122 ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ 225 ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ..
ಮೈಸೂರು ಅರಮನೆಯಲ್ಲಿ 1930 ರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಂಡು ಯೋಗಶಾಲೆಯನ್ನು ಪ್ರಾರಂಭಿಸಿದರು. ಆ ಮೂಲಕ, ಯೋಗ ಶಿಕ್ಷಣ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು.
ಮೈಸೂರಿನ ಆರಂಭಿಕ ಯೋಗ ಗುರುಗಳು
ಮೈಸೂರು ಯೋಗ ಶಿಕ್ಷಕರ ಅತಿ ದೊಡ್ಡ ನಗರ ಎಂದರು ತಪ್ಪಾಗಲಾರದು. ಏಕೆಂದರೆ ಪ್ರತಿ ವರ್ಷ ಸಾವಿರಾರು ಮಂದಿ ಇಲ್ಲಿ ಯೋಗ ಕಲಿತು, ಯೋಗ ಶಿಕ್ಷಣವನ್ನು ಪ್ರಚಾರ ಪಡಿಸುತ್ತಿದ್ದಾರೆ.
ಮೈಸೂರು ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸಲು ಮುಂದಾದ ತಿರುಮಲೈ ಕೃಷ್ಣಮಾಚಾರ್ಯರನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಯೋಗವನ್ನು ಜನಪ್ರಿಯಗೊಳಿಸಿದರು. ಯೋಗವನ್ನು ಉತ್ತೇಜಿಸಲು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಯೋಗದ ರಾಯಭಾರಿಯಾಗಿ ಟಿ ಕೃಷ್ಣಮಾಚಾರ್ಯರನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಿದರು ಎನ್ನುತ್ತದೆ ಇತಿಹಾಸ.
ಟಿ ಕೃಷ್ಣಮಾಚಾರ್ಯರು ಹಠ ಯೋಗವನ್ನು ಅಭಿವೃದ್ಧಿಪಡಿಸಿದರು ಮತ್ತು ನಗರದಲ್ಲಿ ಮೊತ್ತ ಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು.
ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ (ಬಿಕೆಎಸ್) ಅಯ್ಯಂಗಾರ್, ಟಿ ಕೃಷ್ಣಮಾಚಾರ್ಯರ ಶಿಷ್ಯವೃಂದದಲ್ಲಿನ ಇನ್ನೊಬ್ಬ ಪ್ರಸಿದ್ಧ ವಿದ್ಯಾರ್ಥಿ. ಅವರು ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿ ಪಡಿಸಿ ಜಗತ್ತಿಗೆ ಪರಿಚಯಿಸಿದರು.
ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಖ್ಯಾತಿ ಮೈಸೂರಿನ ಮತ್ತೊಬ್ಬ ಪ್ರಸಿದ್ಧ ಯೋಗ ಗುರು ಕೆ ಪಟ್ಟಾಭಿ ಜೋಯಿಸ್ ಅವರದ್ದು ಈ ರೀತಿಯ ಯೋಗವು ಇಂದು ಯೋಗ ಕಲಿಯುವ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ.
ಹೀಗೆ ಈ ಯೋಗ ಗುರುಗಳು ಆರಂಭಿಸಿದ ಯೋಗ ಶಿಕ್ಷಣ ಇಂದು ದೊಡ್ಡ ಮಟ್ಟದಲ್ಲಿ ಮೈಸೂರಿಗೆ ಪ್ರಸಿದ್ದಿ ತಂದು ಕೊಟ್ಟಿದೆ.
ಜೀವನ ಶೈಲಿ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗ ರಾಮಬಾಣ ಎಂಬುದು ಶ್ರುತ ಪಟ್ಟ ಬಳಿಕ, ಯೋಗಕ್ಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೆ ಕಾರಣದಿಂದ, ವೈಜ್ಞಾನಿಕ, ಸಾಂಪ್ರ್ರದಾಯಿಕ ಯೋಗ ಕಲಿಕಾ ತಾಣವಾದ ಮೈಸೂರು ಇಂದು ವಿಶ್ವದಲ್ಲೇ ಪ್ರಮುಖ ಯೋಗ ಕಲಿಕೆಯ ತಾಣವಾಗಿ ಬೆಳೆದಿದೆ. ಸಾಂಪ್ರದಾಯಿಕವಾಗಿರುವ ಅಷ್ಟಾಂಗ ಯೋಗ, ಹಠಯೋಗ ಮತ್ತು ವಿನಿಯೋಗದ ಜೊತೆಗೆ, ಹತ್ತಾರು ಆಧುನಿಕ ಯೋಗ ತರಬೇತಿ ಸಂಸ್ಥೆಗಳು ಇಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಆಸಕ್ತರಿಗೆ ಯೋಗ ಕಲಿಕೆಯೊಂದಿಗೆ ಯೋಗ ತರಬೇತಿಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು, ಆಸಕ್ತಿ ಇರುವವರಿಗೆ ಯೋಗ ತರಬೇತಿ ನೀಡಲು ಅನೇಕ ಯೋಗ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆಗಳಿವೆ. ಸ್ವಯಂ ಯೋಗಾಭ್ಯಾಸ ಕಲಿಕೆಯೊಂದಿಗೆ ಆಸಕ್ತರು ಯೋಗ ಶಿಕ್ಷಕರಾಗಿ ರೂಪುಗೊಳ್ಳುವ ಅವಕಾಶವೂ ಇಲ್ಲಿದೆ. ನಾಡಿನ ನಾಳಿನ ಜನಾಂಗವನ್ನು ಯೋಗದ ಮೂಲಕ ಆರೋಗ್ಯಯುತವಾಗಿ, ಶಿಸ್ತು ಹಾಗು ಸಂಸ್ಕಾರಯುತವಾಗಿ, ಸನ್ನಡತೆ ಹಾಗು ಉತ್ತಮ ಚಾರಿತ್ರ್ಯವುಳ್ಳವರನ್ನಾಗಿ ರೂಪಿಸಲು ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಸಾಕಷ್ಟು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.
ಉತ್ತಮ ಯೋಗ ಶಾಲೆಯ ಆಯ್ಕೆ
ಮೈಸೂರು ನಗರದಲ್ಲಿ ಬಹು ಸಂಖ್ಯೆಯಲ್ಲಿ ಲಭ್ಯವಿರುವ ಅನೇಕ ಯೋಗ ತರಬೇತಿ ಕೇಂದ್ರಗಳು ಮತ್ತು ಯೋಗ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡುವುದೂ ಅಷ್ಟೇ ಮುಖ್ಯವಾಗಿದೆ. ನಗರದಲ್ಲಿರುವ ಅಥವಾ ನಗರಕ್ಕೆ ಯೋಗಾಭ್ಯಾಸಕ್ಕೆ ಆಗಮಿಸುವ ಯೋಗಾಸಕ್ತರು ಈ ಕುರಿತು ಸಾಕಷ್ಟು ಗಮನವಹಿಸಿವುದು ಅತೀ ಅಗತ್ಯ. ಕೇವಲ ವಾಣಿಜ್ಯ ಉದ್ಧೇಶಗಳಿಗಾಗಿ ಯೋಗವನ್ನು ಮಾರುಕಟ್ಟೆಯ ಸರಕಾಗಿಸಿರುವ ಯೋಗಕೇಂದ್ರಗಳ ಬಗ್ಗೆ ಜಾಗ್ರತೆ ವಹಿಸಿ. ಯೋಗ ಶಿಕ್ಷಕ ತರಬೇತಿ ಸಂಸ್ಥೆಗಳು ಸಂಬಂಧಿತ ಇಲಾಖೆಗಳಿಂದ ಮಾನ್ಯತ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಆ ಕೇಂದ್ರಗಳಿಂದ ಪಡೆಯುವ ಪ್ರಮಾಣ ಪತ್ರಗಳಿಗೆ ಶಿಕ್ಷಣ ಕೇಂದ್ರಗಳಲ್ಲಿ ದೊರಕುವ ಮಾನ್ಯತೆ ಹಾಗು ಸಿಗುವ ಉದ್ಯೋಗಾವಕಾಶದ ಕುರಿತು ಕೂಲಂಕುಷವಾಗಿ ವಿಚಾರಿಸಿಕೊಳ್ಳಿ.
ಮೈಸೂರಿನ ವಿವಿಧ ಯೋಗ ಸಂಸ್ಥೆಗಳು ಸಂಘಟಿತವಾಗಿ ವಿವಿಧ ಯೋಗ ತರಬೇತಿ ಚಟುವಟಿಕೆಗಳನ್ನು ಒಂದೆಡೆ ಸಂಘಟಿಸಲು ಮೈಸೂರು ಯೋಗ ಒಕ್ಕೂಟವನ್ನು ರಚಿಸಿದವು. ಇಂದು ಅನೇಕ ಯೋಗ ಕಲಿಕಾ ಸಂಸ್ಥೆಗಳು ಮೈಸೂರು ಯೋಗ ಒಕ್ಕೂಟದ ಭಾಗವಾಗಿದೆ. ಕೇಂದ್ರದ ಆಯುಷ್ ಸಚಿವಾಲಯವು ಅಧಿಕೃತ ಯೋಗ ಬೋಧನಾ ಸಂಸ್ಥೆಗಳು ಮತ್ತು ಅರ್ಹ ತರಬೇತುದಾರರನ್ನು ಪಟ್ಟಿ ಮಾಡಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಆಯುಷ್ ಸಚಿವಾಲಯವು ಬಿಡುಗಡೆ ಮಾಡಿರುವ ಈ ಪಟ್ಟಿಯನ್ನು ಆಸಕ್ತರು ಕಲಿಕಾ ಕೇಂದ್ರ ಹಾಗು ತರಬೇತಿ ಕೇಂದ್ರವನ್ನಯ ತಮ್ಮ ಯೋಗಾಭ್ಯಾಸಕ್ಕಾಗಿ ಆಯ್ಕೆ ಮಾಡುವ ಮೊದಲು ಪರಿಶೀಲಿಸಬಹುದು. ವಿವರಗಳು ಇಲ್ಲಿ ಲಭ್ಯವಿದೆ
ಯೋಗ ತರಭೇತಿ: ಮೈಸೂರಿನ ಹೆಗ್ಗಳಿಕೆ
ಯೋಗ ತರಬೇತಿಯ ವಿಷಯಕ್ಕೆ ಬಂದರೆ, ವಿವಿಧ ಕಾರಣಗಳಿಗಾಗಿ ಮೈಸೂರು ದೇಶದ ಇತರ ನಗರಗಳಿಂದ ವಿಭಿನ್ನವಾಗಿ ನಿಲ್ಲುತ್ತದೆ. ಮೈಸೂರು ಯೋಗವನ್ನು ಕಲಿಯಲು ಸೂಕ್ತವಾದ ಸ್ಥಳ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ
ಹವಾಮಾನ: ಮೈಸೂರು ಉತ್ತಮ ಹವಾಮಾನಕ್ಕೆ ಹೆಸರುವಾಸಿಯಾಗಿದ್ದು ವರ್ಷಪೂರ್ತಿ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಹೆಚ್ಚು ಬಿಸಿಲು, ಮಳೆ, ಅಥವಾ ಚಳಿ ಇಲ್ಲದೆ, ವರ್ಷವಿಡೀ, ಒಂದು ಸಮತೋಲನದ ಹವಾಮಾನ ಇಲ್ಲಿರುತ್ತದೆ.
ಸಾಂಪ್ರದಾಯಿಕ ಶೈಲಿಯ ಬೋಧನೆ: ಪ್ರಸ್ತುತ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಗ ಕೇಂದ್ರಗಳಲ್ಲಿ ಬಹುಪಾಲು ಯೋಗ ಕೇಂದ್ರಗಳು, ಯೋಗಕ್ಕೆ ಸಂಬಂಧಿಸಿದ ಇಲಾಖೆಗಳು ನಿರ್ದಿಷ್ಟಪಡಿಸಿರುವ ನಿಯಮಾವಳಿಗಳನ್ನು ಅನುಸರಿಸಿ, ಸರ್ಕಾರದಿಂದ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಈ ಯೋಗ ಸಂಸ್ಥೆಗಳಲ್ಲಿ ದಶಕಗಳ ಕಾಲ ಬೋಧನಾ ಅನುಭವವನ್ನು ಹೊಂದಿರುವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಯೋಗ ಕೇಂದ್ರಗಳು ಪಾರಂಪರಿಕ ಶೈಲಿಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದೇಶಿಯರನ್ನು ಆಕರ್ಷಿಸುತ್ತಿವೆ. ಈ ಕಟ್ಟಡಗಳ ವಾಸ್ತುಶಿಲ್ಪಗಳು ಮೈಸೂರು ಸಾಮ್ರಾಜ್ಯದ ಗತ ವೈಭವನ್ನು ಸಾರುವಂತಿದ್ದು ಯೋಗಾಸಕ್ತರನ್ನು ತನ್ನೆಡೆಗೆ ಸೆಳೆಯುತ್ತಿವೆ. ಇಲ್ಲಿನ ಯೋಗ ಶಿಕ್ಷಕರು ತಮ್ಮ ದೈನಂದಿನ ಜೀವನದಲ್ಲಿ ಯೋಗ ನಿಯಮಗಳನ್ನು ವೈಯಕ್ತಿಕವಾಗಿ ಅನುಸರಿಸುತ್ತಿದ್ದಾರೆ. ಯೋಗದ ಶಿಸ್ತನ್ನು ಅವರ ಜೀವನದಲ್ಲೂ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅನೇಕ ಕುಟುಂಬಗಳು ತಲೆಮಾರುಗಳಿಂದ ಯೋಗ ಬೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಈ ವೃತ್ತಿ ಅವರಿಗೆ ವಿಷಯ ಪರಿಣತಿಯನ್ನೂ ಹಾಗು ಯೋಗವನ್ನು ಕಲಿಸುವ ಸೂಕ್ಷ್ಮ ವಿಚಾರಗಳ ಮೇಲೆ ಸಾಕಷ್ಟು ಹಿಡಿತವನ್ನು ಸಾಧಿಸುವಂತೆ ಮಾಡಿದೆ.
ಕಡಿಮೆ ಜೀವನ ವೆಚ್ಚ: ಇತರ ಅನೇಕ ನಗರಗಳಿಗೆ ಹೋಲಿಸಿದರೆ ಜೀವನ ನಡೆಸಲು ಬೇಕಾಗುವ ಖರ್ಚಿನ ವೆಚ್ಚ ಮೈಸೂರು ನಗರದಲ್ಲಿ ಕಡಿಮೆ ಇರುವುದರಿಂದ ವಿದೇಶಿಯರು ಅಥವಾ ಇತರೆ ಯೋಗಾಸಕ್ತರು ಹೆಚ್ಚಿನ ಪ್ರಮಾಣದ ಹಣವನ್ನು ವ್ಯಯಿಸದೆ ಯೋಗವನ್ನು ಸುಲಭವಾಗಿ ಕೈಗೆಟಕುವ ದರದಲ್ಲಿ ಕಲಿಯಬಹುದು. ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ದು ಕಡಿಮೆ ದರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಬಹುದಾಗಿದೆ. ಇದಲ್ಲದೆ, ನಗರದಲ್ಲಿ ಇತರೆ ಮಹಾನಗರಗಳಿಗೆ ಹೋಲಿಸಿದಾಗ ಅಲ್ಲಿರುವ ಸಂಚಾರದಟ್ಟಣೆ, ಟ್ರಾಫಿಕ್ ಜಾಮ್ ಕಿರಿಕಿರಿ ಇಲ್ಲದಿರುವ ಕಾರಣ ಯೋಗ ವಿದ್ಯಾರ್ಥಿಗಳು ಇತರೆ ಯಾವುದೇ ಸಮಸ್ಯೆ, ಒತ್ತಡಗಳಿಲ್ಲದೆ ನಿಶ್ಚಿಂತೆಯಾಗಿ ಯೋಗವನ್ನು ಕಲಿಯಬಹುದು. ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವೂ ಇಲ್ಲಿ ದೊರೆಯುತ್ತದೆ. ಒಟ್ಟಿನಲ್ಲಿ ಗುಣಮಟ್ಟದ ಯೋಗ ಶಿಕ್ಷಣವನ್ನು ದೊಡ್ಡ ಮೊತ್ತದ ಫೀಸು, ಹಾಸ್ಟೆಲ್ ಫೀಸು ಇತರೆ ಫೀಸುಗಳ ಹಂಗಿಲ್ಲದೆ ಕಲಿಯಬಹುದು.
ಅಂತರಾಷ್ಟ್ರೀಯ ಮನ್ನಣೆ: ಇಲ್ಲಿರುವ ಯೋಗ ಸಂಸ್ಥೆಗಳು ಅಂತರಾಷ್ಟ್ರೀಯ ಮನ್ನಣೆಯನ್ನು ಹೊಂದಿವೆ. ಹೀಗಾಗಿ ಮೈಸೂರಿನ ಯೋಗ ಕೇಂದ್ರಗಳಲ್ಲಿ ಯೋಗಾಧ್ಯಯನ ಮಾಡಿದ ಯೋಗ ಶಿಕ್ಷಕರು ವಿಶ್ವದಾದ್ಯಂತ ವೃತ್ತಿ ಅವಕಾಶಗಳನ್ನು ಅನ್ವೇಷಿಸಬಹುದು. ಇದಕ್ಕೆ ಉದಾಹರಣೆಗೆ ಮೈಸೂರಿನ ಯುವಕರುಗಳೇ ಇದ್ದಾರೆ. ಮೈಸೂರಿನಲ್ಲಿ ಯೋಗಾಭ್ಯಾಸ ನಡೆಸಿದ ಅನೇಕ ಯುವಕರು ಮೈಸೂರಿನಲ್ಲಿ ಯೋಗ ಕಲಿತ ನಂತರ ವಿದೇಶದಲ್ಲಿ ಯೋಗ ಕೇಂದ್ರಗಳನ್ನು ನಡೆಸುತ್ತಾ ಯೋಗ ಶಿಕ್ಷಕ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ.
ಬೆಂಗಳೂರಿಗೆ ಸಾಮೀಪ್ಯ: ರಾಜಧಾನಿಗೆ ಸಮೀಪದಲ್ಲಿರುವ ಮೈಸೂರು ನಗರ ಪ್ರಸ್ತುತ ರಸ್ತೆ ಸಾರಿಗೆ, ರೈಲು ಮತ್ತು ವಿಮಾನ ಸೇವೆಗಳೊಂದಿಗೆ ಬೆಂಗಳೂರಿನೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಸಾಧಿಸಿದೆ. ಈಗ ಮೈಸೂರು ಮತ್ತು ಬೆಂಗಳೂರು ನಡುವೆ ದೈನಂದಿನ ವಿಮಾನ ಸೇವೆ ಲಭ್ಯವಿದೆ. ಬೆಂಗಳೂರು-ಮೈಸೂರು 10 ಲೇನ್‌ಗಳ ರಸ್ತೆಯನ್ನು ಸಾರ್ವಜನಿಕರಿಗೆ ತೆರೆದ ನಂತರ, ಈ ಎರಡು ನಗರಗಳ ನಡುವಿನ ರಸ್ತೆ ಪ್ರಯಾಣದ ಸಮಯ ಕೇವಲ 90 ನಿಮಿಷಗಳಿಗೆ ಇಳಿಯುತ್ತದೆ. ಶತಾಬ್ದಿ ಸೇರಿದಂತೆ ಹತ್ತಾರು ಎಕ್ಸ್‌ಪ್ರೆಸ್ ರೈಲುಗಳು ಈಗ ಮೈಸೂರು ಮತ್ತು ಬೆಂಗಳೂರಿನ ನಡುವೆ ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಕಲಿಸುತ್ತಿವೆ.
ಪಾರಂಪರಿಕ ಪ್ರವಾಸೋದ್ಯಮ: ಯೋಗ ಕಲಿಕೆಗಾಗಿ ಮೈಸೂರಿಗೆ ಆಗಮಿಸುವ ಇತರ ರಾಜ್ಯದವರು ಅಥವಾ ವಿದೇಶಿಯರು ಮೈಸೂರು ನಗರದಿಂದ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ತಲುಪಲು ಸಾಧ್ಯವಾಗುವ ನಂಜನಗೂಡು, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಸೋಮನಾಥಪುರ, ತಲಕಾಡು, ಶ್ರೀರಂಗ ಪಟ್ಟಣ, ಮೇಲುಕೋಟೆ, ಶ್ರವಣ ಬೆಳಗೊಳ ಬೇಲೂರು-ಹಳೇಬೀಡು ಸೇರಿದಂತೆ ನೂರಾರು ಪಾರಂಪರಿಕ ತಾಣಗಳು ಮತ್ತು ನಾಗರಹೊಳೆ, ಬಂಡೀಪುರದ ಪ್ರಸಿದ್ಧ ವನ್ಯ ಸಫಾರಿಗಳಿಗೆ ಭೇಟಿ ನೀಡಬಹುದು. ಹೀಗಾಗಿ, ಯೋಗ ಕಲಿಯುವ ಅವಧಿಯಲ್ಲಿ ಒಂದಿಷ್ಟು ಪ್ರವಾಸಗಳನ್ನು ಕೂಡ ಹಮ್ಮಿಕೊಳ್ಳಲು ಸಾಧ್ಯವಿದೆ.
ಸುರಕ್ಷಿತ ನಗರ: ಮೈಸೂರು ದೇಶದ ಸುರಕ್ಷಿತ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಪರಾಧ ಪ್ರಮಾಣವು ನಗರವನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಿದೆ. ಇಲ್ಲಿ ಅಪರಾಧಗಳ ಸಂಖ್ಯೆ ತೀರಾ ಕಡಿಮೆ. ಮೈಸೂರು ನಗರ ಅತ್ಯುತ್ತಮ ಪೊಲೀಸ್ ವ್ಯವಸ್ಥೆ ಹೊಂದಿದ್ದು, ಯಾವುದೇ ಭೀತಿ ಇಲ್ಲದೆ ಇಲ್ಲಿ ಯೋಗ ಕಲಿಯಬಹುದಾಗಿದೆ.
ಶಾಸ್ತ್ರೀಯ ಸಂಶೋಧನಾ ಸಂಸ್ಥೆಗಳು: ಯೋಗ ಮತ್ತು ಆಯುರ್ವೇದ ವಿಭಾಗದಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಹೊಂದಿರುವವರಿಗೆ, ನಗರದಲ್ಲಿ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳಿವೆ. ಅರಮನೆ ಗ್ರಂಥಾಲಯ ಮತ್ತು ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಇಲ್ಲಿ ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯಾಸ ನಡೆಸಲು ಹಲವಾರು ಹಸ್ತಪ್ರತಿಗಳು ಅಧ್ಯಯನಕ್ಕೆ ಲಭ್ಯವಿದೆ. ವಿದೇಶದಲ್ಲಿ ನಮ್ಮ ಪ್ರಾಚೀನ ಭಾರತದ ಈ ಎರಡೂ ವಿದ್ಯೆಗಳಿಗೆ ಅಪಾರ ಮನ್ನಣೆ ಹಾಗು ಬೇಡಿಕೆ ಇರುವ ಕಾರಣ ಇದೆರಡನ್ನೂ ಜೊತೆಜೊತೆಯಾಗಿ ಅಭ್ಯಸಿಸಬಹುದು.
ಮೈಸೂರು ತಲುಪುವುದು ಹೇಗೆ?
ಮೈಸೂರು ನಗರ ದೇಶದ ಎಲ್ಲ ಕಡೆಗಳಿಂದ ಉತ್ತಮ ಸಂಪರ್ಕ ಹೊಂದಿದೆ. ವಿಮಾನ, ರೈಲು, ಹಾಗು ಬಸ್ಸು ಸೇವೆಗಳು ಇಲ್ಲಿ ಉತ್ತಮವಾಗಿವೆ.
ವಿಮಾನ: ಮೈಸೂರು ವಿಮಾನ ನಿಲ್ದಾಣ ಈಗ ದೇಶದ ಉತ್ತಮ ವಿಮಾನ ನಿಲ್ದಾಣಗಳಲ್ಲೊಂದು. ಇಲ್ಲಿಗೆ ಉದಾನ್ ಯೋಜನೆ ಅಡಿ ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಚ್ಚಿನ್ , ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಹಾಗು ಗೋವಾ ದಿಂದ ನಿತ್ಯ ನೇರ ವಿಮಾನ ಸಂಪರ್ಕವಿದೆ. ವಿಮಾನ ನಿಲ್ದಾಣ ನಗರದ ಹೃದಯ ಭಾಗದಿಂದ ಕೇವಲ ೧೦ ಕಿಲೋ ಮೀಟರ್ ದೂರದಲ್ಲಿದೆ.
ರೈಲು ಸಂಪರ್ಕ: ಇತ್ತೀಚಿನ ದಿನಗಳಲ್ಲಿ ಮೈಸೂರು ನಗರ ರೈಲ್ವೆ ಕ್ರಾಂತಿಯನ್ನೇ ಕಂಡಿದೆ. ಪ್ರತಿ ಗಂಟೆಗೊಂದರಂತೆ ಮೈಸೂರು – ಬೆಂಗಳೂರು ನಡುವೆ ಎಕ್ಸ್ ಪ್ರೆಸ್ ರೈಲು ಸಂಪರ್ಕ ಇದೆ. ಜೊತೆಗೆ ಹುಬ್ಬಳ್ಳಿ, ಮುಂಬೈ, ಚೆನ್ನೈ ಗೆ ಕೂಡ ಇಲ್ಲಿಂದ ನೇರ ರೈಲು ಸಂಪರ್ಕ ಇದೆ.
ರಸ್ತೆ ಸಂಪರ್ಕ: ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿಗಳಿಂದ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕವಿದೆ ಮೈಸೂರು-ಬೆಂಗಳೂರು ನಡುವೆ ೧೦ ಲೇನ್ ಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಕಾಮಗಾರಿ ಮುಗಿದ ಬಳಿಕ, ಈ ಎರಡು ನಗರಗಳ ನಡುವಣ ಸಂಚಾರ ಅವಧಿ ಕೇವಲ ೯೦ ನಿಮಿಷಕ್ಕೆ ಇಳಿಯಲಿದೆ.