ವಿಶ್ವದಾದ್ಯಂತ ಸರ್ ಎಂ.ವಿ ಎಂದೇ ಜನಪ್ರಿಯವಾಗಿರುವ ಸರ್ ಎಂ ವಿಶ್ವೇಶ್ವರಯ್ಯ ದೇಶ ಕಂಡ ಅತ್ಯುತ್ತಮ ಅಭಿಯಂತರ, ಜನಪ್ರಿಯ ಮುತ್ಸದ್ದಿ, ಹಾಗು ವಿದ್ವಾಂಸ. ಇವರು 1912-1918ರ ಅವಧಿಯಲ್ಲಿ ಮೈಸೂರಿನ ಹಿಂದಿನ ರಾಜಾಡಳಿತದಲ್ಲಿ ದಿವಾನ್ ಆಗಿ ಸೇವೆ ಸಲ್ಲಿಸಿದ್ದರು. 1955 ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರ್ವಜನಿಕ ಕಲ್ಯಾಣ- ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳಿಗಾಗಿ, ಅವರನ್ನು ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಅವಧಿಯಲ್ಲಿ ಕಿಂಗ್ ಜಾರ್ಜ್ V ನೈಟ್ ಕಮಾಂಡರ್ ಪದವಿಯೊಂದಿಗೆ ಗೌರವಿಸಿದ್ದರು.
ಸರ್ ಎಂ ವಿ ಅವರ ಗೌರವಾರ್ಥ ಸೆಪ್ಟೆಂಬರ್ ೧೫ ರಂದು ದೇಶಾದ್ಯಂತ ಅಭಿಯಂತರುಗಳ (ಇಂಜಿನಿಯರ್) ದಿನ ವೆಂದು ಆಚರಿಸಲಾಗುತ್ತದೆ. ಮೈಸೂರಿನ ಪಕ್ಕದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ ತಾಂತ್ರಿಕತೆಗಾಗಿ ಅವರನ್ನು ಗೌರವಿಸಲಾಗುತ್ತದೆ. ಜೊತೆಗೆ, ಹೈದರಾಬಾದ್‌ನ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಮುಖ್ಯ ವಿನ್ಯಾಸ ಅಭಿಯಂತರುಗಳಲ್ಲಿ ಅವರು ಕೂಡ ಒಬ್ಬರು.
ಸರ್ ಎಂ ವಿಶ್ವೇಶ್ವರಯ್ಯ- ಇಂಜಿನಿಯರ್ ಆಗಿ ಬದಲಾದ ಕಲಾ ವಿದ್ಯಾರ್ಥಿ
ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15, 1860 ರಂದು ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಚಿಕ್ಕಬಲ್ಲಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದರು. ಇವರ ಹೆತ್ತವರು ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ. ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದರು. ದುರದೃಷ್ಟವಶಾತ್ ಕೇವಲ, 12 ನೇ ವಯಸ್ಸಿನಲ್ಲಿ ವಿಶ್ವೇಶ್ವರಯ್ಯ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆಯ ನಿಧನದ ಬಳಿಕ, ಅವರ ಅಮ್ಮ, ಇತರರ ಮನೆಯಲ್ಲಿ ಮನೆಗೆಲಸ ಮಾಡುತ್ತಾ ಮಗನನ್ನು ಸಾಕಿದರು.
ಸರ್ ಎಂ.ವಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪಡೆದರು. ಬಳಿಕ ಅವರು ತಮ್ಮ ಪ್ರೌಢ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ವೆಸ್ಲಿ ಮಿಶನ್ ಹೈಸ್ಕೂಲ್ ನಲ್ಲಿ ತಮ್ಮ ಹೈ ಸ್ಕೂಲ್ ಶಿಕ್ಷಣ ಪಡೆದರು. ಅವರ ಸೋದರ ಮಾವ ಎಚ್ ರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಪಡೆಯಲು ನೆರವು ನೀಡಿದರು.
1881 ರಲ್ಲಿ, ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಸೆಂಟ್ರಲ್ ಕಾಲೇಜಿನಿಂದ ಅವರು ಕಲಾ ವಿಭಾಗದಲ್ಲಿ ಪದವಿ ಪಡೆದರು.
ಈ ಸಂದರ್ಭದಲ್ಲಿ ಅವರು, ಮನೆ ಪಾಠ ಮಾಡುತ್ತಾ ತಮ್ಮ ಖರ್ಚು ವೆಚ್ಚ ಸರಿ ತೂಗಿಸಿಕೊಳ್ಳುತ್ತಿದ್ದರು. ಆ ಬಳಿಕ ಅವರು, ಅಂದಿಗೆ ದೇಶಾದ್ಯಂತ ಹೆಸರುವಾಸಿಯಾಗಿದ್ದ ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಸಿವಿಲ್ ಎಂಜಿನಿಯರ್ ಪದವಿ ಪಡೆದರು.
ಯಶಸ್ವಿ ವೃತ್ತಿ ಜೀವನ!
ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ, ಸರ್ ಎಂ.ವಿ, ಮುಂಬೈನ ವಿಭಾಗಕ್ಕೆ ಲೋಕೋಪಯೋಗಿ ಇಲಾಖೆಗೆ ಸೇರಿದರು. ನಂತರ ಅವರು ಭಾರತೀಯ ನೀರಾವರಿ ಆಯೋಗಕ್ಕೆ ಸೇರಿದರು. ಅಲ್ಲಿ ಅವರು ಡೆಕ್ಕನ್ ಪ್ರದೇಶದಲ್ಲಿ ಕೆಲವು ಯಶಸ್ವಿ ನೀರಾವರಿ ತಂತ್ರಜ್ಞಾನ ಬಳಸಿಕೊಂಡು, ಜನಪ್ರಿಯರಾದರು.
ಇದೇ ಸಂದರ್ಭದಲ್ಲಿ, ಅವರು, ಸ್ವಯಂಚಾಲಿತ ನೀರಿನ ಪ್ರವಾಹದ ಗೇಟ್‌ಗಳನ್ನು ವಿನ್ಯಾಸಗೊಳಿಸಿದರು. ಅದಕ್ಕೆ ಅವರಿಗೆ ಪೇಟೆಂಟ್ ಕೂಡ ಸಿಕ್ಕಿತು. ಈ ಹೊಸ ವಿನ್ಯಾಸದ ಗೇಟ್ ಗಳನ್ನು ಮೊತ್ತ ಮೊದಲ ಬಾರಿಗೆ, 1903 ರಲ್ಲಿ ಪುಣೆಯ ಸಮೀಪದ ಖಡಾಖಸ್ವಲಾ ಜಲಾಶಯದಲ್ಲಿ ಅಳವಡಿಸಲಾಯಿತು.ಇದು ಯಶಸ್ವಿ ಎಂದು ಕಂಡು ಬಂದ ಬಳಿಕ, ಟೈಗ್ರಾ ಅಣೆಕಟ್ಟು ಮತ್ತು ಮಂಡ್ಯದ ಕೃಷ್ಣ ರಾಜ ಸಾಗರ ಆಣೆಕಟ್ಟು ನಿರ್ಮಾಣದಲ್ಲೂ ಬಳಸಲಾಯಿತು.
1906-07ರ ಅವಧಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯಲ್ಲಿನ ನವೀನ ತಂತ್ರಜ್ಞಾನಗಳನ್ನು ಅರಿಯಲು ಸರ್ ಎಂ ವಿ ಅವರನ್ನು, ಯೆಮನ್ ದೇಶದ ಅಡೆನ್‌ಗೆ ಕಳುಹಿಸಲಾಯಿತು. ಈ ಬಳಿಕ, ಹೈದರಾಬಾದ್ ನಗರವನ್ನು ಅವರು ತಮ್ಮ ದೂರ ದೃಷ್ಟಿಯ ಯೋಜನೆ ಮೂಲಕ ಪ್ರವಾಹ ಮುಕ್ತಗೊಳಿಸಿದರು. ಇದು ಅವರಿಗೆ ಭಾರಿ ಪ್ರಸಿದ್ದಿ ತಂದು ಕೊಟ್ಟಿತು.
ಬಳಿಕ ಅವರ, ಯೋಜನೆ, ಯೋಚನೆ, ಹಾಗು ಸಲಹೆ, ಸಮುದ್ರ ಕೊರೆತದಿಂದ, ಆಂಧ್ರದ ಇನ್ನೊಂದು ನಗರ ವಿಶಾಖಪಟ್ಟಣಂ ಅನ್ನು ರಕ್ಷಿಸಿತು. 90 ನೇ ವಯಸ್ಸಿನಲ್ಲಿಯೂ ಅವರು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸುವ ಮತ್ತು ವಿನ್ಯಾಸಗೊಳಿಸುವುದರಲ್ಲಿ ಅವರು ಕ್ರಿಯಾ ಶೀಲರಾಗಿದ್ದರು.
ಮೈಸೂರಿನ ದಿವಾನರಾಗಿ ಸರ್ ಎಂ ವಿಶ್ವೇಶ್ವರಯ್ಯ
ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಲು ಆರಂಭಿಸುವ ಮೊದಲು, ಸರ್ ಎಂ ವಿಶ್ವೇಶ್ವರಯ್ಯನವರು ಹೈದರಾಬಾದ್‌ನ ದಿವಾನರಾಗಿ ಅಲ್ಲಿ ಸದಾಕಾಲ ಜನ ಸಾಮಾನ್ಯರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದರು. ಮೈಸೂರಿನ ದಿವಾನರಾಗಿ ಅವರ ಸೇವಾವಧಿಯಲ್ಲಿ ಅವರು ಮೈಸೂರು ಸಾಬೂನು ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೇಂದ್ರ ಗ್ರಂಥಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಂತಹ ಹಲವಾರು ಶ್ರೇಷ್ಠ ಸಂಸ್ಥೆಗಳನ್ನು ಆರಂಭಿಸಿದರು.
ಅವರು ದಿವಾನರಾಗಿದ್ದ ಅವಧಿಯಲ್ಲಿ , ಆಗಿನ ಮೈಸೂರು ರಾಜ್ಯದಲ್ಲಿ ಇನ್ನಿತರ ಅನೇಕ ಕೈಗಾರಿಕೆಗಳು ಆರಂಭವಾದವು. ಸರ್ ಎಂವಿ ಯವರು ಅವರ ಸಮಯ ಪರಿಪಾಲನೆ, ಸಂಕೀರ್ಣ ಕಲ್ಪನೆಗಳು-ವಿನ್ಯಾಸಗಳು, ಸಮರ್ಪಣಾಭಾವ ಮೊದಲಾದ ಗುಣಧರ್ಮಗಳಿಗೆ ಹೆಸರಾದವರು. ಸರ್ ಎಂವಿ ಕನ್ನಡ ಭಾಷೆಯನ್ನು ಪೋಷಿಸಿ, ಬೆಳೆಸುವುದರಲ್ಲೂ ಮಹತ್ವದ ಪಾತ್ರ ನಿಭಾಯಿಸಿದರು. ಏಷ್ಯಾ ಖಂಡದಲ್ಲೇ ವಿನ್ಯಾಸಗೊಳಿಸಲ್ಪಟ್ಟ ಅತ್ಯುತ್ತಮ ವಾಸ ಪ್ರದೇಶ ಎನ್ನಲಾಗುವ ದಕ್ಷಿಣ ಬೆಂಗಳೂರಿನ ಜಯನಗರ ಬಡಾವಣೆಯನ್ನು ಸರ್ ಎಂವಿಯವರು ವಿನ್ಯಾಸಗೊಳಿಸಿದ್ದರು.
ಸರ್ ಎಂ ವಿ ಅವರ ಅವಧಿಯಲ್ಲಿ, ಮೈಸೂರಿನ ಹೊರನೋಟವೇ ಬದಲಾಯಿತು. ಹಲವು ಕೈಗಾರಿಕೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳನ್ನು ಆರಂಭಿಸಿದರು. ಜನರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆತವು. ಅವರು, ರಾಜ್ಯದ ಮೊದಲ ತಾಂತ್ರಿಕ ಕಾಲೇಜು-ಸರಕಾರಿ ಎಂಜಿನಿಯರಿಂಗ್ ಕಾಲೇಜ್, ಬೆಂಗಳೂರನ್ನು ೧೯೧೭ ರಲ್ಲಿ ಆರಂಭಿಸುವಲ್ಲೂ ಮಹತ್ವದ ಪಾತ್ರ ವಹಿಸಿದರು. ಬಳಿಕ, ಈ ಕಾಲೇಜನ್ನು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ಎಂದು ಅವರ ಗೌರವಾರ್ಥ ಮರುನಾಮಕರಣ ಮಾಡಲಾಗಿದೆ.
ಬೆಂಗಳೂರು- ಚಿಕ್ಕಬಳ್ಳಾಪುರ ಲಘು ರೈಲ್ವೇ
ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲದಲ್ಲಿ ಆರಂಭಿಸಲಾದ ಇನ್ನೊಂದು ಯೋಜನೆಯೆಂದರೆ ಅದು ಐತಿಹಾಸಿಕ ಬೆಂಗಳೂರು- ಚಿಕ್ಕಬಳ್ಳಾಪುರ ಲಘು ರೈಲ್ವೇ ಯೋಜನೆ. ಇದನ್ನು 1909 ರಲ್ಲಿ ಎರಡು ಅಡಿ ಆರು ಇಂಚಿನ ಗೇಜ್ ರೈಲ್ವೇ ಹಳಿಯಾಗಿ ಮಂಜೂರು ಮಾಡಲಾಗಿತ್ತು.
ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಭಾಗ 1915 ಆಗಸ್ಟ್ 1 ರ ವೇಳೆಗೆ ಓಡಾಟಕ್ಕೆ ಸಿದ್ಧವಾಗಿತ್ತು. ಇದು ಖಾಸಗಿ ಉದ್ಯಮದಿಂದ ಸಿದ್ಧವಾದ ಮೊದಲ ರೈಲ್ವೇ ಹಳಿಯಾಗಿದೆ.
ಒಂದು ವೇಳೆ ಕಂಪನಿ ಬಂಡವಾಳದ 5 ಶೇಕಡಾ ಕಡಿಮೆ ಆದಾಯ ಗಳಿಸಿದರೆ ಮೈಸೂರು ರಾಜ ಸಂಸ್ಥಾನ ಈ ವ್ಯತ್ಯಾಸದ ಮೊತ್ತವನ್ನು ಭರಿಸುವ ಭರವಸೆಯೊಂದಿಗೆ ಇದಕ್ಕೆ ಚಾಲನೆ ದೊರೆಯಿತು. ಇದೇ ವೇಳೆ, ಗಳಿಸಿದ ಹೆಚ್ಚುವರಿ ಆದಾಯವನ್ನು ಕಂಪನಿ ಮತ್ತು ಸರ್ಕಾರಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು.
ಪ್ರಸಿದ್ಧ ನಂದಿ ಹಾಲ್ಟ್ ಇದೇ ರೈಲ್ವೆ ಮಾರ್ಗದಲ್ಲಿದೆ. ಕಟ್ಟಡದ ಗೋಡೆಗಳು ಮತ್ತು ಭವನದ ವಿನ್ಯಾಸದ ಹೆಗ್ಗಳಿಕೆ ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲಬೇಕು. ಇಂದು, ಈ ರೈಲು ಹಳಿಯನ್ನು ಬ್ರಾಡ್‌ಗೇಜ್ ಆಗಿ ಆಧುನೀಕರಿಸಲಾಗಿದೆ ಮತ್ತು ನಂದಿ ಹಾಲ್ಟ್ ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದರೂ ಸುಂದರವಾಗಿದೆ.
ಸರ್ ಎಂವಿ ಅವರು ಅಲಂಕರಿಸಿದ ಮಹತ್ವದ ಹುದ್ದೆಗಳು
- ಸಹಾಯಕ ಎಂಜಿನಿಯರ್, ಮುಂಬೈ ಸರ್ಕಾರಿ ಸೇವೆ [1884 ರಲ್ಲಿ]
- ಮುಖ್ಯ ಎಂಜಿನಿಯರ್, ಹೈದ್ರಾಬಾದ್ ರಾಜ್ಯ [ಅವರು ಏಪ್ರಿಲ್ 15, 1909 ರಿಂದ ಕೇವಲ ಏಳು ತಿಂಗಳ ಕಾಲ ಸೇವೆ ಸಲ್ಲಿಸಿದರು]
- ಮುಖ್ಯ ಎಂಜಿನಿಯರ್, ಮೈಸೂರು ರಾಜ್ಯ [ನವೆಂಬರ್ 15, 1909]. ಅವರು ರೈಲ್ವೇಸ್‌ನ ಕಾರ್ಯದರ್ಶಿಯೂ ಆಗಿದ್ದರು.
- ಮೈಸೂರು ರಾಜ್ಯದ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು
- ಮೈಸೂರಿನ ದಿವಾನರು [1912 ರಲ್ಲಿ ಆರಂಭವಾಗಿ ಆರು ವರ್ಷಗಳ ಕಾಲ]
- ಭದ್ರಾವತಿ ಉಕ್ಕು ಕಾರ್ಖಾನೆಯ ಮುಖ್ಯಸ್ಥರು
- ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು
- ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಸದಸ್ಯರು [ಟಿಐಎಸ್‌ಸಿಒ]
- ಲಂಡನ್‌ನ ಬ್ಲಾಕ್ ಬೇ ತನಿಖಾ ಸಂಸ್ಥೆಯ ಸದಸ್ಯರು
- ಭಾರತದ ರಾಜ್ಯಗಳ ಭವಿಷ್ಯದ ಕುರಿತು ಶಿಫಾರಸು ಮಾಡಲು 1917ರಲ್ಲಿ ರಚಿಸಲಾದ ಸಮಿತಿಯ ಸದಸ್ಯರು
ಸರ್ ಎಂವಿ 1908 ನಿವೃತ್ತಿ ಹೊಂದಿದರು ಮತ್ತು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಮೈಸೂರಿಗೆ ವಿಶ್ವೇಶ್ವರಯ್ಯನವರ ಸೇವೆಯನ್ನು ಪಡೆದುಕೊಳ್ಳಲು ಕಾತರರಾಗಿದ್ದರು. ಒಡೆಯರ್ ಕೋರಿಕೆ ಮೇರೆಗೆ ಅವರು ಮೈಸೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇರಿದರು. ಏಕೆಂದರೆ ಅವರಿಗೆ ಸವಾಲಿನ ಅವಕಾಶಗಳು ಬೇಕಿದ್ದವು. ಸರ್ ಎಂವಿಯವರು ತಮ್ಮ ನಿಯತ್ತು, ಪರಿಪೂರ್ಣತೆ, ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗಾಗಿ ಎಲ್ಲೆಡೆ ಗೌರವಕ್ಕೆ ಪಾತ್ರರಾಗಿದ್ದರು. ಅವರು ರಾಜ್ಯದಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ್ದರು ಮತ್ತದನ್ನು ನಂತರ ಸ್ವತಂತ್ರ ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸೇರಿಸಲಾಯಿತು.
ಸರ್ ಎಂವಿ- ಅಭಿವೃದ್ಧಿಯ ದಾರ್ಶನಿಕ
ಸರ್ ಎಂ ವಿ ಅವರ ನೇತೃತ್ವದಲ್ಲಿ ಜಾರಿಗೊಂಡ, ಹಲವಾರು ಪ್ರಮುಖ ಯೋಜನೆಗಳು.
- ಕೃಷ್ಣರಾಜಸಾಗರ ಅಣೆಕಟ್ಟು ಅಥವಾ ಕೆಆರ್‌ಎಸ್ ಅಥವಾ ಬೃಂದಾವನ ಉದ್ಯಾನವನದ ವಾಸ್ತುಶಿಲ್ಪಿ . ಇದು ಭಾರತದ ಅತ್ಯಂತ ದೊಡ್ಡ ನೀರಾವರಿ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ಒಂದು ಲಕ್ಷದ ಇಪ್ಪತ್ತು ಸಾವಿರ ಎಕರೆ ಭೂಪ್ರದೇಶಕ್ಕೆ ನೀರುಣಿಸುತ್ತದೆ. ಇದನ್ನು ರೂಪಾಯಿ 2.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ . ಇದು ಬಂಜರು ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯನ್ನು ನಮ್ಮ ರಾಜ್ಯದ ಭತ್ತದ ಬಟ್ಟಲನ್ನಾಗಿಸಿದೆ. ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನೂ ಈ ಅಣೆಕಟ್ಟಿನಿಂದಲೇ ಪೂರೈಸಲಾಗುತ್ತದೆ.
- ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಮುಖ್ಯಸ್ಥರಾಗಿ, ಕಾರ್ಖಾನೆ ಮುಚ್ಚಿ ಹೋಗುವುದರಿಂದ, ಅದನ್ನು ರಕ್ಷಿಸಿದರು.
- ಮೈಸೂರು ಗಂಧದ ಎಣ್ಣೆ ಕಾರ್ಖಾನೆ ಮತ್ತು ಮೈಸೂರು ಸಾಬೂನು ಕಾರ್ಖಾನೆ.
- ಮೈಸೂರು ವಿಶ್ವವಿದ್ಯಾನಿಲಯ- “ಆಸ್ಟ್ರೇಲಿಯಾ ಮತ್ತು ಕೆನಡಾದಂತಹ ದೇಶಗಳು ೧೦ ಲಕ್ಷಕ್ಕಿಂತಲೂ ಕಡಿಮೆ ಜನರಿಗೆ ಸ್ವಂತ ವಿಶ್ವವಿದ್ಯಾನಿಲಯಗಳನ್ನು ಹೊಂದುತ್ತವೆ ಎಂದಾದರೆ 60 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯಿರುವ ಮೈಸೂರು ರಾಜ್ಯ ಸ್ವಂತ ವಿಶ್ವವಿದ್ಯಾನಿಲಯವನ್ನು ಏಕೆ ಹೊಂದಬಾರದು?” ಎಂಬುದು ಸರ್ ಎಂ ವಿಯವರ ಪ್ರಶ್ನೆಯಾಗಿತ್ತು.
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಮೊದಲು ಇದನ್ನು “ದಿ ಬ್ಯಾಂಕ್ ಆಫ್ ಮೈಸೂರು” ಕರೆಯಲಾಗುತ್ತಿತ್ತು”).
- ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳು.
- ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ.
- ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್.
- ಕನ್ನಡ ಸಾಹಿತ್ಯ ಪರಿಷತ್.
- ಶ್ರೀ ಜಯಚಾಮರಾಜೇಂದ್ರ ಔದ್ಯೋಗಿಕ ಸಂಸ್ಥೆ, ಬೆಂಗಳೂರು- ಭದ್ರಾವತಿ ಕಬ್ಬಿಣ ಕಾರ್ಖಾನೆಯನ್ನು ಉಳಿಸಿ ತಾವು ಗಳಿಸಿದ್ದ ಸಂಪೂರ್ಣ ಮೊತ್ತವನ್ನು [ರೂ. 2,00,000] ಅನುದಾನವಾಗಿ ಬಳಸಿದ್ದರು.
- ಹೆಬ್ಬಾಳ ಕೃಷಿ ಶಾಲೆಯನ್ನು 1912 ರಲ್ಲಿ ಸ್ಥಾಪಿಸಿದ್ದರು, ಅದೀಗ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವಾಗಿ ಬೆಳೆದುನಿಂತಿದೆ.
- ಸರ್ ಎಂ ವಿ 1903 ರಲ್ಲಿ ಸ್ವಯಂಚಾಲಿತ ವೀರ್ಡ್ ವಾಟರ್ ಫ್ಲಡ್‌ಗೇಟ್‌ಗಳನ್ನು ವಿನ್ಯಾಸಗೊಳಿಸಿದರು ಮತ್ತು ಅವುಗಳನ್ನು ಕಡಕ್ವಾಸ್ಲ ಜಲಾಶಯಕ್ಕೆ ಅಳವಡಿಸಿದರು.
- ಅವರು ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಿದರು.
- ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್
- ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ (ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ)
- ದಿ ಸೆಂಚುರಿ ಕ್ಲಬ್ , ಬೆಂಗಳೂರು.
- ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು
ಸರ್ ಎಂವಿಯವರು ಯಾವತ್ತೂ ಖ್ಯಾತಿ ಅಥವಾ ಜನಪ್ರಿಯತೆಯಲ್ಲಿ ಆಸಕ್ತಿ ಹೊಂದಿದವರಲ್ಲ. ಆದರೆ ಅವೆಲ್ಲವೂ ಅವರಿಗೆ ತಾನಾಗಿಯೇ ಒಲಿದು ಬಂದವು. ಭಾರತದ ಎಲ್ಲಾ ವಿಶ್ವವಿದ್ಯಾನಿಲಯಗಳ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ಅಲಹಾಬಾದ್, ಆಂದ್ರ, ಬಾಂಬೆ, ಕೊಲ್ಕೊತ್ತಾ, ಜಾಧವ್‌ಪುರ, ಮೈಸೂರು, ಪಾಟ್ನಾ ಮತ್ತು ವಾರಣಾಸಿಯ ವಿಶ್ವವಿದ್ಯಾನಿಲಯಗಳು ಇವುಗಳಲ್ಲಿ ಸೇರಿವೆ.
ಸರ್ ಎಂವಿಯವರಿಗೆ ಸಂದ ಬಹು ಮುಖ್ಯ ಗೌರವಗಳು ಮತ್ತು ಪ್ರಶಸ್ತಿಗಳು
ವರ್ಷ | ಪ್ರಶಸ್ತಿ |
---|---|
1904 | ಲಂಡನ್ ಇನ್ಸ್ಟಿಟ್ಯೂಷನ್ ಆಫ್ ಸಿವಿಲ್ ಎಂಜಿನಿಯರ್ಸ್ ಇವರಿಗೆ 50 ವರ್ಷಗಳ ಮುರಿಯದ ಅವಧಿಗೆ ಗೌರವ ಸದಸ್ಯತ್ವ |
1906 | ಅವರ ಸೇವೆಗಳನ್ನು ಪರಿಗಣಿಸಿ “ಖೈಸರ್ ಇ ಹಿಂದ್” ಗೌರವ |
1911 | ದೆಹಲಿ ದರ್ಬಾರ್‌ನಲ್ಲಿ ಸಿ ಐ ಇ (ಕಂಪೇನಿಯನ್ ಆಫ್ ದಿ ಇಂಡಿಯನ್ ಎಂಪೈರ್) |
1915 | ಕೆ.ಸಿ.ಐ.ಇ (ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್) |
1921 | ಡಿ. ಎಸ್ಸಿ – ಕಲ್ಕತ್ತಾ ವಿಶ್ವವಿದ್ಯಾನಿಲಯ |
1931 | ಎಲ್‌ಎಲ್‌ಡಿ- ಬಾಂಬೆ ವಿಶ್ವವಿದ್ಯಾನಿಲಯ |
1937 | ಡಿ.ಲಿಟ್- ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಹೆಚ್‌ಯು) |
1943 | ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ (ಭಾರತ) ನ ಜೀವಮಾನ ಗೌರವ ಸದಸ್ಯರಾಗಿ ಚುನಾಯಿತರಾದರು. |
1944 | ಡಿ.ಎಸ್ಸಿ- ಅಲಹಾಬಾದ್ ವಿಶ್ವವಿದ್ಯಾನಿಲಯ |
1948 | ಡಾಕ್ಟರೇಟ್ - ಎಲ್‌ಎಲ್‌ಡಿ, ಮೈಸೂರು ವಿಶ್ವವಿದ್ಯಾನಿಲಯ |
1953 | ಡಿ.ಲಿಟ್- ಆಂಧ್ರ ವಿಶ್ವವಿದ್ಯಾನಿಲಯ |
1953 | ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್, ಭಾರತ ಇವರಿಂದ ಗೌರವ ಫೆಲೋಶಿಪ್ |
1955 | ದೇಶದ ಪರಮೋಚ್ಛ ಗೌರವವಾದ ʼಭಾರತ ರತ್ನʼ ವನ್ನು ನೀಡಿ ಗೌರವಿಸಲಾಯಿತು. |
1958 | ಡಿ. ಎಸ್ಸಿ- ಜಾಧವಪುರ ವಿಶ್ವವಿದ್ಯಾನಿಲಯ, ಕಲ್ಕತ್ತಾ |
1958 | ರಾಯಲ್ ಏಷಿಯಾಟಿಕ್ ಸೊಸೈಟಿ ಕೌನ್ಸಿಲ್ ಆಫ್ ಬೆಂಗಾಲ್ ನಿಂದ ದುರ್ಗಾ ಪ್ರಸಾದ್ ಖೈತಾನ್ ಸ್ಮರಣಾರ್ಥ ಚಿನ್ನದ ಪದಕ |
1959 | ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಫೆಲೋಷಿಪ್ |
ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವ
ಸರ್ ಎಂವಿಯವರ ಬಗೆಗಿನ ಕುತೂಹಲಕಾರಿ ಕಥೆಗಳಿಗೇನೂ ಕೊರತೆಯಿಲ್ಲ.
ಇವುಗಳಲ್ಲಿ ಕೆಲವು ಸಮಯ ಪರಿಪಾಲನೆಯಲ್ಲಿ ಅವರಿಗಿದ್ದ ಹಠ ಮತ್ತು ಕಠಿಣ ಶಿಸ್ತುಬದ್ಧತೆಯ ಕುರಿತಾಗಿವೆ. ಇನ್ನೂ ಕೆಲವು ಅವರ ಪ್ರಾಮಾಣಿಕತೆ, ದೃಢತೆ, ಮತ್ತು ವೃತ್ತಿಪರತೆಯ ಕುರಿತು ಹೇಳುತ್ತವೆ. ಅವರು ಯಾವತ್ತೂ ಯಾವುದೇ ರಾಜಿಯಿಲ್ಲದೆ ಶಿಸ್ತಿನ ಉಡುಪು ಧರಿಸುತ್ತಿದ್ದರು ಎಂಬುದೂ ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಸರ್ ಎಂವಿಯವರಿಗೆ ಮೈಸೂರು ರಾಜ್ಯದ ದಿವಾನರ ಹುದ್ದೆಯನ್ನು ನೀಡಿದಾಗ ಅವರು ತಮ್ಮ ಸಂಬಂಧಿಕರನ್ನು ವಿಶೇಷ ಭೋಜನಕ್ಕೆ ಆಹ್ವಾನಿಸಿದ್ದರಂತೆ. ಈ ಸಂದರ್ಭದಲ್ಲಿ ಅವರು, ತಾವು ಒಂದು ಷರತ್ತಿನ ಮೇಲೆ ಹೀಗೆ ನೀಡಲಾಗಿರುವ ಹುದ್ದೆಯನ್ನು ಸ್ವೀಕರಿಸುವುದಾಗಿ ಹೇಳಿದ್ದರಂತೆ. ಅದೇನೆಂದರೆ ಯಾರೂ (ಸಂಬಂಧಿಗಳು) ತಮ್ಮ ಬಳಿ ಬರಬಾರದು ಮತ್ತು ಬಂದು ತಮ್ಮ ಖಾಸಗಿ ಕೆಲಸಗಳನ್ನು ಮಾಡಿಸಿಕೊಡಲು ದಿವಾನನ ಹುದ್ದೆಯನ್ನು ಬಳಸಿಕೊಳ್ಳುವಂತೆ ಕೇಳಿಕೊಳ್ಳಬಾರದು ಎಂಬುದು!
ಸರ್ ಎಂವಿ ಮತ್ತು ಮಹಾತ್ಮ ಗಾಂಧಿ
ಸರ್ ಎಂವಿಯವರು, ತಮ್ಮ ಕ್ರಿಯಾಶೀಲ ಕಲ್ಪನೆಗಳು ಮತ್ತು ಸಾಧನೆಗಳಿಂದ ನಿಜವಾದ ಆಧುನಿಕ ಭಾರತದ ನಿರ್ಮಾಣಕ್ಕೆ ಪೂರಕ ಶಕ್ತಿಯಂತೆ ಕೆಲಸ ಮಾಡಿದ ಕೆಲವೇ ಕೆಲವು ಭಾರತೀಯರಲ್ಲಿ ಒಬ್ಬರು. ಸರ್ ಎಂವಿಯವರ ಘೋಷಣೆ ಕೈಗಾರೀಕರಣ ಅಥವಾ ನಾಶ ಎಂದಾಗಿದ್ದರೆ, ಮಹಾತ್ಮ ಗಾಂಧೀಜಿಯವರ ನಿಲುವು ಕೈಗಾರೀಕರಣ ಮಾಡಿ ಮತ್ತು ನಾಶವಾಗಿ ಎಂಬುದಾಗಿತ್ತು.
1921 ರಲ್ಲಿ ಗಾಂಧೀಜಿಯವರು ಆರಂಭಿಸಿದ ಅಸಹಕಾರ ಚಳುವಳಿ ಸಂದರ್ಭದಲ್ಲಿ ಈ ಚಳುವಳಿಗೆ ಸರ್ ಎಂವಿಯವರ ಸಹಮತ ಇರಲಿಲ್ಲ. ಸರ್ ಎಂವಿಯವರು ಗಾಂಧೀಜಿಯವರಿಗೆ ಪತ್ರ ಬರೆದು ಮುಂದಿನ ದುಂಡು ಮೇಜಿನ ಸಭೆಗಳ ಹಿನ್ನೆಲೆಯಲ್ಲಿ ಉತ್ತಮ ಉಡುಪು ಧರಿಸುವಂತೆ ಸಲಹೆ ನೀಡಿದ್ದರು. ಸರ್ ಎಂವಿಯವರು ಉಡುಗೆ ತೊಡುಗೆಯ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದರು.
ಆಗಸ್ಟ್, 1927 ರಲ್ಲಿ ಮಹಾತ್ಮಾ ಗಾಂಧೀಜಿಯವರು ಮೈಸೂರು ರಾಜ್ಯಕ್ಕೆ ಭೇಟಿ ನೀಡಿದ್ದರು (ʼಯಂಗ್ ಇಂಡಿಯಾʼದ ಸೆಪ್ಟೆಂಬರ್ 1, 1927 ರ ಸಂಚಿಕೆಯಲ್ಲಿ ವರದಿಯಾಗಿದೆ). ಆ ಭೇಟಿಯ ವೇಳೆ, ಭಾಷಣವೊಂದರಲ್ಲಿ ಗಾಂಧೀಜಿ ಈ ರೀತಿ ಹೇಳಿದ್ದರು.
ಭದ್ರಾವತಿ (ಕಬ್ಬಿಣ ಕಾರ್ಖಾನೆ), ಕೃಷ್ಣರಾಜಸಾಗರದಂತಹ ಆಣೆಕಟ್ಟು ಇವೆಲ್ಲಾ ದೇಶಭಕ್ತಿಗೆ ಮತ್ತು ವಾಸ್ತುಶಿಲ್ಪದ ಅದ್ಭುತ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸಿದಂತೆ. ಅವರು ಮೈಸೂರಿನಲ್ಲಿ ತಮ್ಮ ಸೇವಾವಧಿಯಲ್ಲಿ ತಮ್ಮೆಲ್ಲಾ ಪ್ರತಿಭೆ, ಜ್ಞಾನ ಸಮಯ ಮತ್ತು ಸಾಮರ್ಥ್ಯವನ್ನು ಧಾರೆಯೆರೆದು, ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದಿದ್ದರೆ. ಇಲ್ಲಿ ನಮ್ಮನ್ನು ಸೆಳೆಯುವ ಅತ್ಯಂತ ಗಮನಾರ್ಹ ಅಂಶವೆಂದರೆ ಮೇಲಿಂದ ಕೆಳಗಿನವರೆಗೆ ಎಲ್ಲ ಕೆಲಸಗಳಲ್ಲೂ ಸ್ವಯಂ ಪಾಲ್ಗೊಳ್ಳುವಿಕೆಯಿದೆ. ಆರಂಭಿಸಿದವನು ಒಬ್ಬ ಮೈಸೂರಿಗ, ಯಾವುದೇ ರೀತಿಯಿಂದಲೂ ಸಂಪೂರ್ಣ ದಕ್ಷಿಣ ಭಾರತೀಯ. ಇದೊಂದು ವಿಷಯಕ್ಕಾಗಿ ನೀವು ಮತ್ತು ಇಡೀ ಭಾರತವೇ ಹೆಮ್ಮೆ ಪಡಬಹುದು.
ಸರ್ ಎಂವಿಯವರ ಬಹು ಮುಖ್ಯ ಕೃತಿಗಳು
- ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ, 1861-1962, ಬೆಂಗಳೂರು, ಬೆಂಗಳೂರು ಪ್ರೆಸ್, 1934
- ಮೆಮೋಯರ್ಸ್ ಆಫ್ ಮೈ ವರ್ಕಿಂಗ್ ಲೈಫ್ , ಬೆಂಗಳೂರು (1954)
- ಅನ್‌ಎಂಪ್ಲಾಯ್ಮೆಂಟ್ ಇನ್ ಇಂಡಿಯಾ: ಇಟ್ಸ್ ಕಾಸಸ್ ಆಂಡ್ ಕ್ಯೂರ್, ಬೆಂಗಳೂರು ನಗರ, ಬೆಂಗಳೂರು ಪ್ರೆಸ್, 1932
- ಪ್ರಾಸ್ಪಾರಿಟಿ ಥ್ರೂ ಇಂಡಸ್ಟ್ರಿ ಮೂವ್ ಟುವರ್ಡ್ಸ್ ರ‍್ಯಾಪಿಡ್ ಇಂಡಸ್ಟ್ರಿಯಲೈಸೇಶನ್ (ದ್ವಿತೀಯ ಮುದ್ರಣ), ಬಾಂಬೆ, ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಷನ್, 1943
- ಪೋಸ್ಟ್ ವಾರ್ ರಿಕನ್ಸ್ಟ್ರಕ್ಷನ್ ಇನ್ ಇಂಡಿಯಾ (ಕೇಂದ್ರ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಮಾಡಿದ ಭಾಷಣ, ಸೆಪ್ಟೆಂಬರ್ 2, 1943), ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಷನ್
- ನೇಷನ್ ಬಿಲ್ಡಿಂಗ್: ಅ ಫೈವ್ ಇಯರ್ ಪ್ಲಾನ್ ಫಾರ್ ದಿ ಪ್ರೊವಿನ್ಸಸ್, ಬೆಂಗಳೂರು ನಗರ, ಬೆಂಗಳೂರು ಪ್ರೆಸ್, 1937
- ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಸ್ಕೀಮ್: ಎಕನಾಮಿಕ್ ಪ್ರೋಗ್ರೆಸ್ ಬೈ ಫೋರ್ಸ್‌ಡ್ ಮಾರ್ಚಸ್, 1940
- ಎ ಬ್ರೀಫ್ ಮೆಮಾರ್ಯ್ ಆಫ್ ಮೈ ಕಂಪ್ಲೀಟ್ ವರ್ಕಿಂಗ್ ಲೈಫ್, ಬೆಂಗಳೂರು, 1960
ಸರ್ ಎಂವಿಯವರ ಕೊನೆಯ ವರ್ಷಗಳು
ಸರ್ ಎಂವಿಯವರ ಅಸಾಧಾರಣ ಸಾಧನೆಗೆ ಕೃತಜ್ಞತೆಯ ರೂಪದಲ್ಲಿ ಭಾರತ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಸಮ್ಮಾನವಾದ ʼಭಾರತ ರತ್ನʼ ಪ್ರಶಸ್ತಿಯನ್ನು 1955 ರಲ್ಲಿ ನೀಡಿ ಗೌರವಿಸಿತು.
ಸರ್ ಎಂವಿಯವರ ಜನ್ಮ ಶತಮಾನೋತ್ಸವವನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಚರಿಸಲಾಯಿತು. ಭಾರತ ಮಾತೆಯ ಹೆಮ್ಮೆಯ ಪುತ್ರನನ್ನು ಗೌರವಿಸಲು ಅಂದಿನ ಪ್ರಧಾನಮಂತ್ರಿ ನೆಹರೂರವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದರು. ಅಂದು ರಾಜ್ಯದ ರಾಜಪಾಲರಾಗಿದ್ದ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರ್ ಎಂವಿಯವರು ಎಪ್ರಿಲ್ 12, 1962 ರಲ್ಲಿ, 102 ವರ್ಷ, 6 ತಿಂಗಳುಗಳ ತುಂಬು ಜೀವನ ನಡೆಸಿ ನಿಧನರಾದರು. ಅವರ ಇಚ್ಛೆಯಂತೆಯೇ ಅವರ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇಂದಿಗೂ ಕೂಡ, ದೇಶಾದ್ಯಂತ ಸರ್ ಎಂ ವಿ ಎಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿರುವ ಹೆಮ್ಮೆಯ ಭಾರತ ರತ್ನ
Related Readings
- In English: Sir M Visvesvaraya – An Excellent Statesman and Eminent Engineer