ವ್ಯಾಪಾರ ಸೇರಿದಂತೆ, ಅಸಂಘಟಿತ ವಲಯದಲ್ಲಿ, ಈ ದೇಶದಲ್ಲಿ ದೊಡ್ಡ ಸಂಖ್ಯೆಯ ಜನ ದುಡಿಯುತ್ತಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಹಾಗು ಇತರ ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯೇ ಇ ಶ್ರಮ್ ಕಾರ್ಡ್ . ಇ -ಶ್ರಮ್ ಕಾರ್ಡ್ ಹೆಸರೇ ಸೂಚಿಸುವಂತೆ ಒಂದು ದೇಶವ್ಯಾಪ್ತಿ ಏಕೈಕ ಸಂಖ್ಯೆಯ ಜೊತೆಗೆ ಎಲ್ಲಾ ಕಲ್ಯಾಣ ಯೋಜನೆಗಗಳ ಪ್ರಯೋಜನ ಒದಗಿಸುವ ಹೆಬ್ಬಾಗಿಲು ಎಂದೇ ಪರಿಗಣಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರು, ಉದ್ಯೋಗಿಗಳು ಮತ್ತು ಗಿಗ್ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಸಚಿವಾಲಯ ಆದ್ಯತೆ ನೀಡಿದೆ. ಕಳೆದ ಕೆಲವು ವರ್ಷಗಳಿಂದ, ಈ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸಚಿವಾಲಯ ಹಲವಾರು ಹೊಸ ಯೋಜನೆಗಳಿಗೆ ಚಾಲನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಇ -ಶ್ರಮ್ ಅತ್ಯಂತ ಪ್ರಮುಖವಾದುದು. ಇದರ ಬಗ್ಗೆಗಿನ ಮಾಹಿತಿ ಇಲ್ಲಿದೆ.
ಇ-ಶ್ರಮ್ ಕಾರ್ಡ್ ಎಂದರೇನು?
ಒಬ್ಬ ಕಾರ್ಮಿಕ ಅಥವಾ ವ್ಯಾಪಾರೀ ತನ್ನ ಹೆಸರು, ಆಧಾರ್ ಸಂಖ್ಯೆ ಮತ್ತು ಆಧಾರ್-ಸಂಯೋಜಿತ ಮೊಬೈಲ್ ಸಂಖ್ಯೆಯೊಂದಿಗೆ ಇ-ಶ್ರಮ್ ಗಾಗಿ
ಸಚಿವಾಲಯದ ವೆಬ್ ಸೈಟ್‌ನಲ್ಲಿನೋಂದಾವಣೆ ಮಾಡಿಕೊಂಡ ಬಳಿಕ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೀಡುವ ಯುಎಎನ್ ಸಂಖ್ಯೆಯಿರುವ ಡಿಜಿಟಲ್ ಐಡಿ ಪುರಾವೆಯೇ ಇ-ಶ್ರಮ್ ಕಾರ್ಡ್. ಇದು ಒಂದು ದೇಶ- ಒಂದು ಸಂಖ್ಯೆಯಾಗಿದೆ. ಒಮ್ಮೆ ನೋಂದಾಯಿಸಿಕೊಂಡ ಬಳಿಕ, ಆನ್ ಲೈನ್ ನಲ್ಲಿಯೇ ಇ -ಶ್ರಮ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇ ಶ್ರಮ್ ಕಾರ್ಡ್‌ಯ ನೋಂದಣಿಯ ನಾನಾ ಹಂತಗಳು
ದೇಶದ ಅತಿದೊಡ್ಡ ಕಾರ್ಮಿಕ ಕಲ್ಯಾಣ ಅಭಿಯಾನವಾದ ಇ -ಶ್ರಮ್ ನಲ್ಲಿ ನೋಂದಾವಣೆಗೆ ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳು ಅರ್ಹ. ಜೊತೆಗೆ ದೇಶದಾದ್ಯಂತ ಸೇವೆ ಸಲ್ಲಿಸುತ್ತಿರುವ ಗಿಗ್ ಕಾರ್ಮಿಕರು ಕೂಡಾ ಇ-ಶ್ರಮ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಅರ್ಜಿ ಸಲ್ಲಿಕೆ ಅತಿ ಸುಲಭ. ಆನ್ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ.
- ಮೊದಲಿಗೆ ಸಚಿವಾಲಯದ ಜಾಲತಾಣಕ್ಕೆ ಭೇಟಿ ನೀಡಿ. ಸ್ವಯಂ ನೋಂದಣಿಯನ್ನು ಪ್ರಾರಂಭಿಸಲು ಇಲ್ಲಿ ಕ್ಲಿಕ್ ಮಾಡಿ.
- ಅಲ್ಲಿ ನೀಡಿರುವ ನಮೂನೆಯಲ್ಲಿ ನೀವು ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿದ ನಂತರ, ನೀವು ನೋಂದಣಿ ಪುಟಕ್ಕೆ ಮುಂದುವರಿಯುತ್ತಿರಿ. ಅಲ್ಲಿ ನೀವು ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
- 16 ರಿಂದ 59 ವರ್ಷದೊಳಗಿನವರು ಮಾತ್ರ ಇ -ಶ್ರಮ್ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಭವಿಷ್ಯ ನಿಧಿ ಮತ್ತು ಇಎಸ್ಐಸಿ ಸದಸ್ಯರು ನೋಂದಣಿಗೆ ಅರ್ಹರಾಗಿರುವುದಿಲ್ಲ.
ಇ ಶ್ರಮ್ ಕಾರ್ಡ್ ಬಳಕೆ ಹೇಗೆ?
ಒಮ್ಮೆ ಇ -ಶ್ರಮ್ ಯಶಸ್ವಿ ನೋಂದಣಿಯ ನಂತರ, ಅಭ್ಯರ್ಥಿಗಳು ಕಾರ್ಮಿಕ ಹಾಗು ಉದ್ಯೋಗ ಮಂತ್ರಾಲಯದ ವಿವಿಧ ಸೇವೆಗಳನ್ನು ಪಡೆಯಬಹುದು. ಈ ಪೈಕಿ ಪ್ರಮುಖವಾದುವುಗಳು ಕೆಳಗಿನಂತಿವೆ.
- ನನ್ನ ಯೋಜನೆಗಳು: ಈ ವಿಭಾಗ ವಿವಿಧ ಸರ್ಕಾರಿ ಯೋಜನೆಗಳಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ನೀವು ನಿಮ್ಮ ವಯಸ್ಸು, ಆದಾಯ ಮತ್ತು ಶೈಕ್ಷಣಿಕ ಅರ್ಹತೆಯ ದೃಢೀಕರಣ ಪತ್ರಗಳನ್ನು ಒದಗಿಸಿದರೆ, ನೀವು ಅರ್ಹರಾಗಿರುವ ಯೋಜನೆಗಳ ಪಟ್ಟಿ ಅಲ್ಲಿ ಲಭ್ಯವಾಗುತ್ತದೆ. ಆ ಮೂಲಕ ನೀವು ಸೂಕ್ತ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಆ ಯೋಜನೆಗಳಿಗೆ ಆನ್ ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.
- ಕೌಶಲ್ಯ ತರಬೇತಿ : ಒಂದೊಮ್ಮೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು, ಅಥವಾ ಹೊಸ ಉದ್ಯೋಗ- ವಹಿವಾಟು ಆರಂಭಿಸಲು ನಿಮ್ಮಗೆ ಇನ್ನಷ್ಟು ಕೌಶಲ್ಯಗಳ ಅಗತ್ಯವಿದ್ದರೆ ನೀವು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಅಭ್ಯರ್ಥಿಗಳು, ತಾವು ಆಯ್ಕೆಮಾಡಿಕೊಂಡ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ತರಬೇತಿ ಆನ್ ಲೈನ್‌ನಲ್ಲಿಯೂ ಲಭ್ಯವಿದೆ ಮತ್ತು ಇದು ಉಚಿತ ತರಭೇತಿ ಕಾರ್ಯಕ್ರಮವಾಗಿದೆ.
- ಅಪ್ರೆಂಟಿಸ್ ಶಿಪ್: ಇ ಶ್ರಮ್ ಕಾರ್ಡ್ ಆಧಾರದ ಮೇಲೆ ಪದವೀಧರರು, ಡಿಪ್ಲೊಮಾ ಹೊಂದಿರುವವರು, ಐಟಿಐ ಪ್ರಮಾಣಪತ್ರ ಹೊಂದಿರುವವರು ಮತ್ತು ಇತರರಿಗೆ ಅಪ್ರೆಂಟಿಸ್‌ಶಿಪ್ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸಚಿವಾಲಯ ಪ್ರಾರಂಭಿಸಿರುವ ಇದಕ್ಕಾಗಿಯೇ ಮೀಸಲಾದ ಜಾಲತಾಣದ ಮೂಲಕ ಅರ್ಹರು ಅರ್ಜಿ ಸಲ್ಲಿಸಬೇಕು. ಈ ಜಾಲತಾಣದಲ್ಲಿ ದೇಶಾದ್ಯಂತ ಲಭ್ಯವಿರುವ ಅಪ್ರೆಂಟಿಶಿಪ್ ಅವಕಾಶಗಳ ಮಾಹಿತಿಯ ಮಹಾಪೂರವೇ ಇದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿದೆ.
- ಉದ್ಯೋಗ ಸೇವೆಗಳುಃ ಇ ಶ್ರಮ್ ಪೋರ್ಟಲ್ ಒದಗಿಸುವ ಮತ್ತೊಂದು ಪ್ರಮುಖ ಸೇವೆಯೆಂದರೆ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ಸಂಬಂಧಿತ ಸೇವೆಗಳು. ಈ ಜಾಲತಾಣದಲ್ಲಿ ಉದ್ಯೋಗದಾತರು ಹಾಗು ಉದ್ಯೋಗ ಆಕಾಂಕ್ಷಿಗಳಿಗೆ ಪರಸ್ಪರ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಕ್ಷೇತ್ರಗಳು, ಲಭ್ಯವಿರುವ ಉದ್ಯೋಗಗಳು ಹಾಗು ನಾನಾ ಕೌಶಲ್ಯ ಹೊಂದಿರುವ ಉದ್ಯೋಗ ಆಕಾಂಕ್ಷಿಗಳ ಮಾಹಿತಿ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿರಿ
ಪಿಂಚಣಿ ಯೋಜನೆ
ಇ-ಶ್ರಮ್ ಕಾರ್ಡ್ ಹೊಂದಿರುವವರು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್‌ಧನ್ ಯೋಜನೆಗೆ ಅರ್ಹರಾಗಿರುತ್ತಾರೆ. ಅಸಂಘಟಿತ ವಲಯದ ನೌಕರರು ಮಾತ್ರ ಇದು ಅನ್ವಯವಾಗುತ್ತದೆ. 18 ರಿಂದ 40 ವರ್ಷದೊಳಗಿನವರು ಈ ಪಿಂಚಣಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಸಿಕ ಆದಾಯ 15,000ಕ್ಕಿಂತ ಹೆಚ್ಚಿರುವವರು ನೋಂದಣಿಗೆ ಅರ್ಹರಲ್ಲ.
ಈ ಯೋಜನೆಯ ಒಂದು ಪ್ರಮುಖ ಲಕ್ಷಣವೆಂದರೆ, ಈ ಯೋಜನೆಯಡಿ, ಫಲಾನುಭವಿಯು 60 ವರ್ಷಗಳನ್ನು ತಲುಪಿದ ನಂತರ ಕನಿಷ್ಠ Rs.3,000 ಮಾಸಿಕ ಪಿಂಚಣಿ ಪಡೆಯುತ್ತಾರೆ. ಕೇಂದ್ರ ಸರ್ಕಾರ ಫಲಾನುಭವಿಗೆ ಅವರು ನೀಡುವ ಮೊತ್ತದ ಸಮನಾದ ಮೊತ್ತವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅನಿರೀಕ್ಷಿತ ಸಾವು, ಅಪಘಾತ, ಹಾಗು ಪತಿ-ಪತ್ನಿಗೆ ಪಿಂಚಣಿ ವರ್ಗಾವಣೆ ಹೀಗೆ ನಾನಾ ಅವಕಾಶಗಳನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ.
ವ್ಯಾಪಾರಿಗಳಿಗೆ ಪಿಂಚಣಿ
ವ್ಯಾಪಾರದಲ್ಲಿ ತೊಡಗಿರುವವರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ
ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ವಿಶಿಷ್ಟ ಯೋಜನೆಗಳಲ್ಲಿ ಇದು ಕೂಡಾ ಒಂದು. ಸ್ವಯಂ ಉದ್ಯೋಗಿ, ಅಂಗಡಿ ಮಾಲೀಕರು, ಚಿಲ್ಲರೆ ಅಂಗಡಿ ಮಾಲೀಕರು ಮತ್ತು ಇತರ ಉದ್ಯಮಿಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇರುವವರು ಈ ಯೋಜನೆಗೆ ಅರ್ಹರು. ವಯಸ್ಸಿನ ಮಿತಿ, ಇತರ ನಿಯಮಗಳು ಮತ್ತು ಷರತ್ತುಗಳು ಒಂದೇ ಆಗಿರುತ್ತವೆ. ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಭೇಟಿ ನೀಡಿ
ಒಟ್ಟಾರೆಯಾಗಿ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಭವಿಷ್ಯದ ದೃಷ್ಟಿಯಿಂದ ಇ -ಶ್ರಮ್ ಕಾರ್ಡ್ ಹೊಂದುವುದು ಅತ್ಯಂತ ಅವಶ್ಯಕ. ಇದರ ಜೊತೆಗೆ ಅತ್ಯಂತ ಅಗ್ಗದ ಪ್ರಿಮಿಯುಮ್ ಮೂಲಕ ಅವರು ಪಿಂಚಣಿ ಯೋಜನೆಗೆ ಸೇರಿ, ತಮ್ಮ ವೃದ್ದಾಪ್ಯದ ವೇಳೆಗೆ ಆರ್ಥಿಕ ಸ್ಥಿರತೆ ಹೊಂದಬಹುದು.
Also see
- In English: All You Need To Know About The E Shram Card