ಸರಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು, ಬಹು ಪರೀಕ್ಷೆಗಳನ್ನು ಬರೆಯಬೇಕಾದ ಅನಿವಾರ್ಯತೆ ಈಗ ಇದೆ. ಈ
ಬಹು ಪರೀಕ್ಷೆ ವ್ಯವಸ್ಥೆಯ ಬದಲಾಗೇ, ಸರಕಾರಿ ಉದ್ಯೋಗಾಕಾಂಕ್ಷಿಗಳು ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಹೊಸ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆಯ ಮೂಲಕ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು, ಸುಮಾರು ೨.೫ ಕೋಟಿ ಯುವ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲಿದೆ.
ಕೇಂದ್ರದ ಈ ಹೊಸ ನಿರ್ಧಾರದ ಪ್ರಕಾರ,
ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಕೇಂದ್ರ ಸರ್ಕಾರದ ನಾನಾ ಇಲಾಖೆಗಳ, ಬಿ ಮತ್ತು ಸಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಈ ವ್ಯವಸ್ಥೆಯನ್ನು ಬಳಸಲಾಗುವುದು. ಈ ಹೊಸ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳ ಅರ್ಹತೆ ಪರೀಕ್ಷಿಸಿ ಹೆಸರನ್ನು ಅರ್ಹ ಅಭ್ಯರ್ಥಿಗಳ ಕಿರು ಪಟ್ಟಿ ತಯಾರಿಸಲಾಗುವುದು.
ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಎಂದರೆ ಏನು?
ರಾಷ್ಟ್ರೀಯ ನೇಮಕಾತಿ ಸಂಸ್ಥೆ ಈಗ ಅಸ್ತಿತ್ವದಲ್ಲಿರುವ ಕೇಂದ್ರ ಸರಕಾರದ ಅಧೀನದ ೨೦ಕ್ಕೂ ಹೆಚ್ಚು ನೇಮಕಾತಿ ಸಂಸ್ಥೆಗಳನ್ನು ವಿಲೀನಗೊಳಿಸಿ ಅಸ್ತಿತ್ವಕ್ಕೆ ಬರಲಿದೆ. ಇದೊಂದು ಸ್ವಾಯತ್ತ ಸಂಸ್ಥೆಯಾಗಿರಲಿದೆ. ಇದನ್ನು ಸಂಘಗಳ ಕಾಯ್ದೆಯಡಿ ನೋಂದಾಯಿಸಲಾಗಿದ್ದು, ಅದರ ಪ್ರಕಾರವೇ ಅದು ಕಾರ್ಯನಿರ್ವಹಿಸುತ್ತದೆ.
ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಶ್ರೇಣಿ ೧ರ ನೇಮಕಾತಿ ಪರೀಕ್ಷೆಗಳನ್ನು ಪ್ರತಿ ಜಿಲ್ಲೆಗಳಲ್ಲಿ ನಡೆಸಲಿದೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಪರೀಕ್ಷಾ ಕೇಂದ್ರವನ್ನು ಅದು ಹೊಂದಲಿದೆ. ಸರಕಾರಿ ನೇಮಕಾತಿ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಉತ್ತಮ ಅಭ್ಯಾಸಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸಂಸ್ಥೆ ಅನುಷ್ಠಾನಗೊಳಿಸಲಿದೆ. ಜೊತೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಅದು ಇನ್ನು ಹೆಚ್ಚಿನ ಸುಧಾರಣೆ ಹಾಗು ಪಾರದರ್ಶಕತೆ ಜಾರಿಗೆ ತರಲಿದೆ.
ಈ ಸಂಸ್ಥೆ, ಈಗಿನ, ಬಹು ಪರೀಕ್ಷೆಗಳ ಬದಲಿಗೆ ಒಂದೇ ಸಾಮಾನ್ಯ ನೇಮಕಾತಿ ಪರೀಕ್ಷೆ ನಡೆಸಲಿದೆ. ಇದು ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಮತ್ತು ಪ್ರಯಾಣ ವೆಚ್ಚ, ನಗರಗಳಲ್ಲಿ ಆಹಾರ, ವಸತಿ ಮತ್ತು ಇತರ ಖರ್ಚುಗಳನ್ನು ಇದು ಕಡಿಮೆಗೊಳಿಸಲಿದೆ. ಅಭ್ಯರ್ಥಿಗಳಿಗೆ ಈ ರೀತಿ ಅದು ಬಹು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.
ಈ ಸಂಸ್ಥೆ, ದೇಶದ ಎಲ್ಲ ಜಿಲ್ಲೆಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ಹೊಂದುವ ಮೂಲಕ ಸರಕಾರಿ ನೇಮಕಾತಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹೆಚ್ಚು ದೂರ ಪ್ರಯಾಣ ಬೆಳೆಸುವುದನ್ನು ತಡೆಯುತ್ತದೆ. ಇದು ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಪೂರಕ ಮತ್ತು ಉತ್ತೇಜನ ನೀಡಲಿದೆ ಎಂಬ ಭಾವನೆ ಸರಕಾರದ್ದು.
ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ
ಈ ಸಂಸ್ಥೆ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕ ಪದವಿ ಹೀಗೆ ನಾನಾ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ನಾನಾ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ.
ಈ ಪರೀಕ್ಷೆಗಳು ತಾಂತ್ರಿಕೇತರ ಹುದ್ದೆಗಳಿಗೆ ಸುಲಭವಾಗಿ ಅಭ್ಯರ್ಥಿಗಳನ್ನು ಒದಗಿಸುತ್ತದೆ. ಸಿಬ್ಬಂದಿ ಆಯ್ಕೆ ಸಂಸ್ಥೆ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಮತ್ತು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸರ್ವಿಸ್ ಪರ್ಸನಲ್ (ಐಬಿಪಿಎಸ್) ಗೆ ಅಭ್ಯರ್ಥಿಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಈ ಪರೀಕ್ಷೆ ಉತ್ತೀರ್ಣ ಗೊಂಡ ಅಭ್ಯರ್ಥಿಗಳನ್ನು ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಕೂಡ ನೇಮಿಸಿಕೊಳ್ಳಬಹುದು.
ಈ ಸಂಸ್ಥೆ ನಡೆಸುವ ಪರೀಕ್ಷೆಯ ಫಲಿತಾಂಶ ಹಾಗು ಅಂಕ ಪಟ್ಟಿ,
ಫಲಿತಾಂಶ ಘೋಷಣೆಯ ದಿನಾಂಕದಿಂದ 3 ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಒಬ್ಬ ಅಭ್ಯರ್ಥಿಯು ಎಷ್ಟು ಬಾರಿ ಕೂಡ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ತೆಗೆದುಕೊಳ್ಳಬಹುದಾದ ಪರೀಕ್ಷೆಗಳಿಗೆ ಮಿತಿ ಇಲ್ಲ.
ಹಲವು ಪ್ರಯತಗಳಲ್ಲಿ, ಒಬ್ಬ ಅಭ್ಯರ್ಥಿಯು, ಗಳಿಸಿದ ಅತ್ಯುತ್ತಮ ಅಂಕವನ್ನು ಅಭ್ಯರ್ಥಿಯ ಪ್ರಸ್ತುತ ಅಂಕ ಎಂದು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಸಂಸ್ಥೆಯ ವೆಬ್ ಸೈಟ್ ನಲ್ಲಿ ತಮ್ಮ ಹೆಸರು ಹಾಗು ತೆಗೆದುಕೊಳ್ಳುವ ಪರೀಕ್ಷೆಯನ್ನು ನೋಂದಾಯಿಸಿಕೊಳ್ಳಬಹುದು. ಜೊತೆಗೆ, ತನಗೆ ಸಮೀಪದ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು.