X

ಹಂಪಿಯ ಮುಕುಟಮಣಿ: ಸೌಂದರ್ಯದ ಖನಿ ಈ ಕಲ್ಲಿನ ಕಥ

    Categories: Hampi

ಕೇಳಿಸದೆ ಕಲ್ಲು ಕಲ್ಲಿನಲಿ….ಈ ಗೀತೆಯನ್ನು ಕೇಳಿದಾಗಲೆಲ್ಲಾ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಹಂಪಿಯ ಕಲ್ಲಿನ ಕಲಾಕೆತ್ತನೆಗಳು ಕಲಾ ಕುಸುರಿಗಳು ನಮ್ಮ ಕಣ್ಮುಂದೆ ಸುಳಿಯುತ್ತವೆ. 

ನಮ್ಮಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಎಂದರೆ, ಪ್ರತಿಯೊಂದು ಪ್ರವಾಸಿ ತಾಣವೂ, ಒಂದೊಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿರುತ್ತದೆ. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅದು ಆ ಸ್ಥಳದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಮಾತಿಗೆ ಹಂಪಿ ಕೂಡಾ ಹೊರತಲ್ಲ. ಒಂದು ಪುಟ್ಟ ಹಳ್ಳಿಯಾದ ಹಂಪಿ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧ. ಈ ಪ್ರಖ್ಯಾತಿಗೆ ಪ್ರಮುಖ ಕಾರಣ, ಇಲ್ಲಿನ ಕಲ್ಲಿನ ರಥ. ಕರ್ನಾಟಕವೆಂದರೆ ಇದು ಶಿಲ್ಪಕಲೆಗಳ ಬೀಡು. ಇಲ್ಲಿನ ಸಾವಿರಾರು ಪುರಾತನ ಪ್ರವಾಸಿ ತಾಣಗಳಿವೆ. ಇವುಗಳ ಪೈಕಿ ಮೇರು ಶಿಖರವೆಂದರೆ, ಹಂಪಿ ಎಂದರೆ ತಪ್ಪಾಗಲಾರದು.

ವಾಸ್ತವವಾಗಿ  ಇದು ಒಂದು ರಥವಲ್ಲ. ರಥದ ರೀತಿಯ ಒಂದು ದೇಗುಲವಿದು. ವಿಷ್ಣುವಿನ ವಾಹನವಾದ  ಗರುಡನಿಗೆ ಸಮರ್ಪಿತವಾದ ಆಕರ್ಷಕ ದೇವಾಲಯ ಇದಾಗಿದೆ.  ಈ ಕಲ್ಲಿನ ರಥಾಲಯ, ಇಲ್ಲಿನ ಪ್ರಸಿದ್ಧ  ವಿಜಯ ವಿಠಲ  ದೇವಾಲಯದ ಸಂಕೀರ್ಣದೊಳಗೆ ಅರಳಿ ನಿಂತ ಕಲಾಕೃತಿ ಎಂದರೆ ತಪ್ಪಾಗಲಾರದು. ಕೆತ್ತನೆಯ ಸಂದರ್ಭದಲ್ಲಿ. ಈ ರಥದಲ್ಲಿ  , ಭಗವಾನ್ ಮಹಾವಿಷ್ಣುವಿನ ಬೆಂಗಾವಲು ಗರುಡನ ಬೃಹತ್ ಶಿಲ್ಪ  ಈ ರಥದಲ್ಲಿ ಇತ್ತು. ಆದರೆ, ಅದು ಈಗ ಇಲ್ಲ.  ಈ ಕಲ್ಲಿನ ರಥವು ಭಾರತದ ಇತರ ಮೂರು ಪ್ರಸಿದ್ಧ ಕಲ್ಲಿನ ರಥಗಳಲ್ಲಿ ಒಂದು ಎಂಬ  ಖ್ಯಾತಿ ಹೊಂದಿದೆ. ಉಳಿದ ಎರಡು ರಥಗಳು  ಒಡಿಸಾ ರಾಜ್ಯದ ಪ್ರಸಿದ್ಧ ಸೂರ್ಯ ದೇಗುಲ  ಕೊನಾರ್ಕ್  ಮತ್ತು ತಮಿಳು ನಾಡಿನ ಮಹಾಬಲಿಪುರಂನಲ್ಲಿದೆ.

ಹಂಪಿ: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು

ಪ್ರವೇಶ ಸಮಯ: ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8:30 ರಿಂದ ಸಂಜೆ 5:00 ರವರೆಗೆ

ಪ್ರವೇಶ ಶುಲ್ಕ: ಪ್ರವೇಶ ಶುಲ್ಕದ ಅಗತ್ಯವಿಲ್ಲ

ಛಾಯಾಗ್ರಹಣ:  ಅನುಮತಿಸಲಾಗಿದೆ

ವೀಡಿಯೋ ಚಿತ್ರೀಕರಣ: ಅನುಮತಿಸಲಾಗಿದೆ

ಭೇಟಿ ನೀಡಲು ಉತ್ತಮ  ತಿಂಗಳುಗಳು: ನವೆಂಬರ್‌ನಿಂದ ಫೆಬ್ರವರಿವರೆಗೆ

ಈ  ರಥದ ಇತಿಹಾಸ

ಈ ಕಲ್ಲಿನ ರಥ, ಅದರ ಕಲಾಕುಸುರಿಯ ಶ್ರೀಮಂತಿಕೆಯಷ್ಟೇ ಅನುಪಮವಾದ ಇತಿಹಾಸ ಹೊಂದಿದೆ. ಈ ಕಲ್ಲಿನ ರಥವನ್ನು ನಿರ್ಮಿಸಿದ್ದು 16 ನೇ ಶತಮಾನದಲ್ಲಿ ಕರ್ನಾಟಕದ ವೈಭವವನ್ನು ದೇಶದೆಲ್ಲೆಡೆ ಸಾರಿದ    ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣದೇವರಾಯ. ಅವರು ಈ ರಥವನ್ನು ನಿರ್ಮಿಸಲೂ ಒಂದು ಕಾರಣವಿದೆ. ತನ್ನ ಸಾಮ್ರಾಜ್ಯ ವಿಸ್ತರಣೆ ಭಾಗವಾಗಿ ಅವರು  ಅಂದಿನ ಒರಿಸ್ಸಾ ಅಂದರೆ ಈಗಿನ ಒಡಿಸಾದಲ್ಲಿ  ಯುದ್ಧ ಮಾಡುವಾಗ  ಅಲ್ಲಿನ ಮೇರು ಶಿಖರ ದೇಗುಲವಾದ   ಕೊನಾರ್ಕ್ ಸೂರ್ಯ ದೇವಾಲಯದ ರಥವನ್ನು ನೋಡಿದರು. ಅದರ ಸೌಂದರ್ಯದಿಂದ ಅವರು  ಆಕರ್ಷಿತರಾದರು. ಅದೇ ರೀತಿಯ ರಥದ ನಿರ್ಮಾಣಕ್ಕೆ ಅವರು ನಿಶ್ಚಯಿಸಿದರು.

ಈ ರಥ ಅಂದಿನ ವಿಜಯ ನಗರ ಸಾಮ್ರಾಜ್ಯದ  ಶ್ರೇಷ್ಠತೆ, ಶಿಲ್ಪಕಲೆಯ    ಸೌಂದರ್ಯ ಮತ್ತು ಕಲಾತ್ಮಕಯ  ಪರಿಪೂರ್ಣತೆಯ  ಪ್ರತಿನಿಧಿ. ಈ ರಥದ ಹಿಂದೆ ಹಲವಾರು ಜಾನಪದ ಕಥೆಗಳಿವೆ; ನಂಬಿಕೆಗಳಿವೆ. ಈ ರಥ ಯಾವಾಗ ತನ್ನ  ಸ್ಥಳದಿಂದ  ಪಲ್ಲಟಗೊಳ್ಳುತ್ತದೆಯೋ, ಅಂದೇ  ಅಂದು ಜಗತ್ತು ಅಂತ್ಯಗೊಳ್ಳುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಈ ರಥ ಈಗ ವಿಶ್ವ ಪ್ರಸಿದ್ಧ.   ಯುನೆಸ್ಕೋ ಸಹ ಇದನ್ನು  ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ. ಈ ಕಾರಣಕ್ಕಾಗಿ ಈಗ ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ರಥದ ವಾಸ್ತುಶಿಲ್ಪ

ಈ ರಥ ವಾಸ್ತು ಶಿಲ್ಪದ ಅದ್ಭುತ ಸೃಷ್ಟಿ ಎಂದರೆ ತಪ್ಪಾಗಲಾರದು. ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪದಿಂದ  ಕೆತ್ತನೆಗೊಂಡಿದೆ.  ಈ ಶಿಲೆಯ ಬೃಹತ್ ರಚನೆ ಅಂದಿನ  ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳ ಕೌಶಲ್ಯಕ್ಕೆ ಹಿಡಿದ  ಕನ್ನಡಿ.  ಈ  ರಥದ ಸೌಂದರ್ಯ ಇದೊಂದು  ಏಕಶಿಲ್ಪದ ಕೆತ್ತನೆ ಎಂಬಂತೆ ತೋರಿಸುತ್ತದೆ. ಆದರೆ ವಾಸ್ತವದಲ್ಲಿ ಇದು   ಗ್ರಾನೈಟ್‌ನ ಚಪ್ಪಡಿಗಳಿಂದ ನಿರ್ಮಾಣಗೊಂಡ ಕಲಾಕೃತಿ. ಇದರ ಸೌಂದರ್ಯದ ಖನಿ ಹೇಗಿದೆ ಎಂದರೆ ಅದರ  ಕೊಂಡಿಗಳು ನಮ್ಮ ದೃಷ್ಟಿಗೆ ತಾಕುವುದೇ ಇಲ್ಲ.

ಇನ್ನು ಈ ರಥದ  ಆಧಾರ ಕೂಡಾ ಬಹು ಸುಂದರವಾಗಿದೆ.  ಪೌರಾಣಿಕ ಯುದ್ಧದ ದೃಶ್ಯಗಳು ಇಲ್ಲಿ ಮೂಡಿ ಬಂದಿವೆ.  ಈಗ  ಆನೆಗಳ ಕೆತ್ತನೆ ಇರುವಲ್ಲಿ ಹಿಂದೆ  ಕುದುರೆಗಳ ಶಿಲ್ಪಗಳು ಇದ್ದವು. ಈಗಲೂ ಕೂಡಾ

ಪ್ರವಾಸಿಗರು,   ಆನೆಗಳ ಕಲಾಕೃತಿ ಹಿಂದೆ, ಕುದುರೆಗಳ ಹಿಂಗಾಲುಗಳು ಮತ್ತು ಬಾಲಗಳನ್ನು ಗುರುತಿಸಬಹುದು. ಎರಡು ಆನೆಗಳ ನಡುವೆ ಏಣಿಯ ಅವಶೇಷಗಳೂ ಇವೆ.ಹಿಂದೆ ಈ ಏಣಿಗಳ ಸಹಾಯದಿಂದ ಪುರೋಹಿತರು ಗರ್ಭಗೃಹ ಪ್ರವೇಶಿಸಿ, ಗರುಡ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು.

ಈ ಸುಂದರವಾದ ಕಲ್ಲಿನ ರಥವನ್ನು ಸಂಜೆಯ ಹೊತ್ತಿನಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ವಿಶಿಷ್ಟ ಅನುಭೂತಿ, ಅನುಭವ. ವಿಜಯ ವಿಠಲ ದೇಗುಲದ ಪ್ರಾಕಾರದಿಂದ,  ಅಲ್ಲಿ ನಿಲ್ಲಿಸಲಾದ   ಫ್ಲಡ್‌ಲೈಟ್‌ಗಳ ಬೆಳಕಿನಲ್ಲಿ, ಮುಸ್ಸಂಜೆ, ಈ ರಥವನ್ನು ನೋಡಲು ಎರಡೂ ಕಣ್ಣು ಸಾಲದು.  ಅದೊಂದು ಜೀವನದಲ್ಲಿ ನಮಗೆ ವಿಶಿಷ್ಟ ಅನುಭವ ನೀಡುತ್ತದೆ.

ಪ್ರವಾಸಿಗರು ಗಮನಿಸಬೇಕಾದ ಅಂಶಗಳು

  • ವಿಜಯ ವಿಠಲ ದೇಗುಲ ವಾರದ ಪ್ರತಿ ದಿನ ಬೆಳಗ್ಗೆ ೮.೩೦ರಿಂದ ಸಂಜೆ ೫ರ ವರೆಗೆ ತೆರೆದಿರುತ್ತದೆ.
  • ಪ್ರವೇಶ ಶುಲ್ಕ ಇಲ್ಲ.
  • ಇಲ್ಲಿ ಛಾಯಾಗ್ರಹಣ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಅವಕಾಶವಿದೆ.
  • ಸುಮಾರು ಮೂರುಗಂಟೆಗಳ ಅವಧಿ ಈ ದೇಗುಲ ನೋಡಲು ಬೇಕಿದೆ. 

ಹಂಪಿ ತಲುಪುವುದು ಹೇಗೆ?

ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ  ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ.  ಬಳ್ಳಾರಿ  ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ.  ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್‌ ದೂರವಿದೆ. ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ ತಲುಪಬಹುದು.

ರೈಲು ಸಂಪರ್ಕ: ಹಂಪಿಗೆ ನೇರ   ರೈಲ್ವೆ  ಸಂಪರ್ಕವಿಲ್ಲ. ಇಲ್ಲಿಗೆ ಅತಿ .  ಹತ್ತಿರದ ರೈಲ್ವೆ  ನಿಲ್ದಾಣವೆಂದರೆ  ಹೊಸಪೇಟೆ.  ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್‌ ದೂರದಲ್ಲಿದೆ. ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ.  ಹೊಸಪೇಟೆಯಿಂದ ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.

ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ.   ಇಲ್ಲಿಂದ ಕರ್ನಾಟಕ, ಆಂಧ್ರ,

ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು,

ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ.

Jolad Rotti:
Related Post