ಹಂಪಿಯ ಹೆಮ್ಮೆಗಳಲ್ಲೊಂದು ಇಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ. ಇದು ಮೂಲತಃ ಶಿವನಿಗೆ ಅರ್ಪಿತವಾಗಿದೆ. ಬೆಂಗಳೂರಿನಿಂದ ಸುಮಾರು ೩೫೦ ಕಿಲೋಮೀಟರ್ ದೂರದಲ್ಲಿರುವ ಹಂಪಿ ದಕ್ಷಿಣ ಭಾರತದ ಅತಿ ವಿಶಿಷ್ಟ ಹಾಗು ಜನಪ್ರಿಯ ದೇವಾಲಯಗಳ ನಗರ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿದೆ. ಶ್ರೀ ವಿರೂಪಾಕ್ಷ ದೇವಾಲಯವು ಮೂಲತಃ ಒಂದು ಶಿವ ಪರಂಪರೆಯ ದೇಗುಲವಾಗಿದ್ದು, ಹಂಪಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದನ್ನು ಕಟ್ಟಿಸಿದ್ದು ರಾಜ ದೇವ ರಾಯ ೨ ಅವರ ಸೇನಾಧಿಪತಿಯಾಗಿದ್ದ್ದ ಲಕ್ಕಣ ದಂಡೇಶನ ನೆರವಿನೊಂದಿಗೆ. ಈ ದೇಗುಲದಲ್ಲಿ ಇಂದಿಗೂ ಪೂಜೆ ಪುರಸ್ಕಾರಗಳು ನಡೆಯುತ್ತಿವೆ.
ತುಂಗಾ ಭದ್ರ ನದಿಯ ದಂಡೆಯ ಮೇಲೆ ಹಂಪಿ ಎಂಬ ಕಲಾ ಕುಸುರಿ ಅರಳಿ ನಿಂತಿದೆ. ಈ ಹಂಪಿಯ ಪ್ರಮುಖ ಆಧ್ಯಾತ್ಹ್ಮಿಕ ಆಕರ್ಷಣೆ ಈ ದೇಗುಲ. ಇದು ಅತ್ಯಂತ ಪವಿತ್ರ ಆರಾಧನಾ ಸ್ಥಳ.
ಹಂಪಿಯನ್ನು ಹಾಳು ಹಂಪಿಯೆಂದೇ ಕೆಲವೊಮ್ಮೆ ಬಣ್ಣಿಸಲಾಗುತ್ತದೆ. ಏಕೆಂದರೆ ಇಲ್ಲಿನ ನೂರಾರು ಕಲ್ಲಿನ ಕಟ್ಟಡಗಳು ಕೆತ್ತನೆಗಳು ಹಾಳಾಗಿವೆ. ಇಂತಹ ಹಾಳಾದ ಅವಶೇಷಗಳ ನಡುವೆಯೂ ಈ ದೇಗುಲ ಭವ್ಯವಾಗಿ ಪ್ರವಾಸಿಗರನ್ನು, ಭಕ್ತಾಧಿಗಳನ್ನು ಕೈ ಬಿಸಿ ಕರೆಯುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ದೇಗುಲಕ್ಕೆ ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇಗುಲದ ವಾರ್ಷಿಕ ಉತ್ಸವ, ಜಾತ್ರೆ ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ.
ವಿರೂಪಾಕ್ಷ ದೇವಾಲಯದ ಇತಿಹಾಸ
ಈ ಭವ್ಯ ವಿರೂಪಾಕ್ಷ ದೇವಾಲಯದ ಇತಿಹಾಸ ಸ್ವಲ್ಪ ಗೊಂದಲದಲ್ಲಿದೆ. ಏಕೆಂದರೆ, ಏಳನೇ ಶತಮಾನದ ಬಳಿಕದ ಇತಿಹಾಸ ನಮಗೆ ಲಾಭವಾದರೂ, ಈ ದೇಗುಲ ಅದಕ್ಕಿಂತಲೂ ಹಿಂದಿನಿಂದಲೇ ಅಸ್ತಿತ್ವದಲ್ಲಿತ್ತು ಎನ್ನಲಾಗುತ್ತಿದೆ.
ಅನಿರ್ದಿಷ್ಟವಾಗಿದೆ. ವಿರೂಪಾಕ್ಷ-ಪಂಪಾ ಕಥೆ ಇಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿತ್ತು. ಇಲ್ಲಿ ೯ ನೇ ಶತಮಾನದಲ್ಲಿ ಕೆತ್ತಲಾದ ಶಿವನ ಬಗ್ಗೆಗಿನ ಹಲವಾರು ಶಾಸನಗಳು ಲಭ್ಯವಾಗಿವೆ.
ಈ ದೇಗುಲ ಆರಂಭದಲ್ಲಿ ತುಂಬಾ ಸಣ್ಣದಾಗಿತ್ತು. ಆ ಬಳಿಕ ವಿಜಯನಗರ ರಾಜರ ಆಳ್ವಿಕೆಯಲ್ಲಿ ಒಂದು ದೊಡ್ಡ ದೇಗುಲ ಸಂಕೀರ್ಣವಾಗಿ ಅಭಿವೃದ್ಧಿಗೊಂಡಿತು. ಇಲ್ಲಿ ಲಭ್ಯವಾಗಿರುವ ಪುರಾವೆಗಳ ಪ್ರಕಾರ, ಹೊಯ್ಸಳ ಮತ್ತು ಚಾಲುಕ್ಯ ಅರಸರ ಅವಧಿಯಲ್ಲಿ ಈ ದೇಗುಲ ವಿಸ್ತಾರಗೊಂಡಿತು.
ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರ ರಾಜವಂಶದ ಆಳ್ವಿಕೆಯಲ್ಲಿ ಇಲ್ಲಿ ಸ್ಥಳೀಯ ಕಲೆ, ಕರಕುಶಲ ಮತ್ತು ಸಂಸ್ಕೃತಿ ಪ್ರವರ್ಧಮಾನಕ್ಕೆ ಬಂದಿತು. ಆದರೆ ವಿಜಯನಗರ ಆಡಳಿತಗಾರರು ಮುಸ್ಲಿಂ ರಾಜರಿಂದ ಸೋಲಿಸಲ್ಪಟ್ಟ ಬಳಿಕ ಇಲ್ಲಿನ ಸುಂದರವಾದ ವಾಸ್ತುಶಿಲ್ಪಗಳು ಮತ್ತು ಕಟ್ಟಡಗಳು ನಾಶಗೊಂಡವು.
ಹಂಪಿ ನಗರ ೧೫೬೫ ರಲ್ಲಿ ನಾಶಗೊಂಡರೂ ಈ ದೇಗುಲದ ಪರಂಪರೆ ಅವಿಚ್ಚಿನ್ನವಾಗಿ ಮುಂದುವರಿದಿದೆ. ಈ ಧಾಳಿ ಪಂಪಾ ಮತ್ತು ವಿರೂಪಾಕ್ಷರ ಭಕ್ತಿಗೆ ಯಾವುದೇ ಅಡೆತಡೆ ತಂದೊಡ್ಡಿಲ್ಲ. ಈ ದೇಗುಲದಲ್ಲಿ ಇಂದಿಗೂ ಪೂಜೆ ಹಾಗು ಇತರ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ೧೯ ನೇ ಶತಮಾನದ ಈ ದೇಗುಲದ ನವೀಕರಣ ಹಾಗು ಸಂರಕ್ಷಣಾ ಕಾರ್ಯಗಳು ನಡೆದವು.
ವಿರೂಪಾಕ್ಷ ದೇಗುಲದ ವಾಸ್ತುಶಿಲ್ಪ
ಈ ದೇಗುಲದ ವಾಸ್ತುಶಿಲ್ಪ ಕೂಡ ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ. ಪವಿತ್ರ ಗರ್ಭಗುಡಿ, ವಿಶಾಲವಾದ ಚಾವಡಿ, ಕಲ್ಲಿನ ಸ್ತಂಭಗಳು ಮತ್ತು ೩ ಕೊಠಡಿಗಳನ್ನು ಹೊಂದಿರುವ ಸಭಾಂಗಣವನ್ನು ಈ ದೇಗುಲ ಹೊಂದಿದೆ. ದೇಗುಲದ ಪ್ರಾಂಗಣ, ಮಠ, ಕೆಲವು ಪುಟ್ಟ ದೇವಾಲಯಗಳ ಸಂಕೀರ್ಣ ಎಲ್ಲರ ಮನಸೂರೆಗೊಳ್ಳುತ್ತದೆ. ಇದರ ಜೊತೆಗೆ ಈ ದೇಗುಲದ ಸುತ್ತಲೂ ಇನ್ನು ಹಲವು ದೇಗುಲಗಳಿವೆ.
ಈ ದೇಗುಲಕ್ಕೆ ಹಲವು ಪ್ರವೇಶ ಮಾರ್ಗಗಳಿವೆ. ಅದರಲ್ಲಿ ಪೂರ್ವ ದಿಕ್ಕಿನ ಪ್ರವೇಶ ಮಾರ್ಗ ಅದ್ಭುತವಾಗಿದೆ. ಒಂಭತ್ತು ಹಂತ ಹೊಂದಿರುವ ಈ ಪ್ರವೇಶದ್ವಾರ ೫೦ ಮೀಟರ್ ಉದ್ದವಾಗಿದೆ. ಇದರ ಕುಸುರಿ ಕೆತ್ತನೆ ಅದ್ಭುತವಾಗಿದೆ. ಹಲವಾರು ಶಿಲ್ಪಿ ಕಲಾಕೃತಿಗಳ ರಚನೆಯನ್ನು ಈ ಪ್ರವೇಶ ದ್ವಾರ ಹೊಂದಿದ್ದು, ಪ್ರವಾಸಿಗರ ಹಾಗೂ ಭಕ್ತರ ಮನಸೂರೆಗೊಳ್ಳುತ್ತದೆ. ಇದರ ಜೊತೆಗೆ ಇದರ ಚೌಕಟ್ಟು ಇಟ್ಟಿಗೆಯಿಂದ ಕೂಡಿದ್ದು, ಇದರ ಚಾವಡಿ ಕೂಡ ಮನೋಜ್ಞ ಸೌಂದರ್ಯ ಹೊಂದಿದೆ. ಇಲ್ಲಿ ಹಲವಾರು ಸಣ್ಣ ಸಣ್ಣ ಉಪ ಗರ್ಭಗುಡಿಗಳಿವೆ. ಈ ದೇಗುಲದ ಪೂರ್ವ ಗೋಪುರವನ್ನು ಮೂರು ಮಹಡಿಗಳಿಂದ ಅಲಂಕರಿಸಲಾಗಿದ್ದು, ಉತ್ತರ ಗೋಪುರವು ಐದು ಮಹಡಿಗಳನ್ನು ಹೊಂದಿದೆ.
ಇನ್ನು ದೇಗುಲದ ಉತ್ತರ ದಿಕ್ಕಿನಲ್ಲಿರುವ ಕನಕಗಿರಿ ಗೋಪುರವು ಕೂಡ ಬಹು ದೊಡ್ಡ ಆಕರ್ಷಣೆ. ಈ ಗೋಪುರವು ಹಲವಾರು ಸಣ್ಣ ಸಣ್ಣ ಗರ್ಭಗುಡಿಗಳನ್ನು ಒಳಗೊಂಡಿದೆ.
ಇನ್ನು ವಿಜಯನಗರ ಸಾಮ್ರಾಜ್ಯವೆಂದರೆ ನಮ್ಮ ನೆನಪಿಗೆ ಬರುವುದು ಕೃಷ್ಣದೇವರಾಯ. ಈ ದೇಗುಲಕ್ಕೆ ಕೂಡ ಅವರು ದೊಡ್ಡ ಮಟ್ಟದ ಕಾಣಿಕೆ ನೀಡಿದ್ದ್ದಾರೆ. ಈ ದೇಗುಲದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿರುವ ಅಲಂಕೃತ ಮುಖ್ಯ ಕಂಬದ ಸಭಾಂಗಣವು ಕೃಷ್ಣದೇವರಾಯನ ಕೊಡುಗೆ. ಈ ಸಭಾಂಗಣದ ಪಕ್ಕದಲ್ಲಿ ಒಂದು ಶೀಲಾ ಚಪ್ಪಡಿ ಇದೆ, ಅದರಲ್ಲಿ ದೇವಾಲಯಕ್ಕಾಗಿ ಕೃಷ್ಣದೇವರಾಯನ ಅರ್ಪಣೆಗಳನ್ನು ವಿವರಿಸುವ ಶಾಸನಗಳಿವೆ.
ಈ ವಿರೂಪಾಕ್ಷ ದೇವಾಲಯದ ಸುತ್ತ ಮುತ್ತ ಸಾಕಷ್ಟು ಶಿಥಿಲವಾಗಿರುವ ಹಲವಾರು ಮಂಟಪಗಳಿವೆ. ಈ ದೇವಾಲಯದ ಮುಂಭಾಗದಲ್ಲಿ ಮಂಟಪ ರೂಪದಲ್ಲಿರುವ ಒಂದು ವಾಣಿಜ್ಯ ಕೇಂದ್ರವಿತ್ತು. ಈಗ ಅದರ ಅವಶೇಷಗಳನ್ನು ಮಾತ್ರ ನೋಡಬಹುದಾಗಿದೆ.
ಹಂಪಿ ತಲುಪುವುದು ಹೇಗೆ?
ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ. ಬಳ್ಳಾರಿ ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ. ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್ ದೂರವಿದೆ. ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ ತಲುಪಬಹುದು.
ರೈಲು ಸಂಪರ್ಕ: ಹಂಪಿಗೆ ನೇರ ರೈಲ್ವೆ ಸಂಪರ್ಕವಿಲ್ಲ. ಇಲ್ಲಿಗೆ ಅತಿ . ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಹೊಸಪೇಟೆ. ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್ ದೂರದಲ್ಲಿದೆ. ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ. ಹೊಸಪೇಟೆಯಿಂದ ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.
ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ. ಇಲ್ಲಿಂದ ಕರ್ನಾಟಕ, ಆಂಧ್ರ,
ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು,
ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ.
Related Readings
- In English: Virupaksha Temple: Of History